Advertisement

ಕಡಬ ತಾ|ಅನುಷ್ಠಾನಕ್ಕೆ ಬಿರುಸಿನ ತಯಾರಿ

02:40 PM Oct 12, 2017 | |

ಕಡಬ: ಹಲವು ದಶಕಗಳ ಹೋರಾಟದ ಬಳಿಕ ಕಡಬ ತಾಲೂಕು ಕೇಂದ್ರವಾಗಿ ಘೋಷಣೆಯಾಗಿತ್ತು. ಆದರೆ ಅನುಷ್ಠಾನ ವಿಳಂಬವಾಗಿದ್ದು ಜನರಲ್ಲಿ ನಿರಾಸೆ ಮೂಡಿಸಿತ್ತು. ಈಗ ತಾಲೂಕು ಅನುಷ್ಠಾನಕ್ಕೆ ಸಚಿವ ಸಂಪುಟದ ಒಪ್ಪಿಗೆ ದೊರೆತಿದ್ದು, 2018ರ ಜ. 1ರಿಂದ ಕಡಬ ತಾಲೂಕು ಕೇಂದ್ರವಾಗಿ ಮಾರ್ಪಡುವುದು ಖಚಿತವಾಗಿದೆ. ಬಿರುಸಿನ ಸಿದ್ಧತೆಯೂ ನಡೆದಿರುವುದರಿಂದ ಈ ಪರಿಸರದ
ಜನರಲ್ಲಿ ಹೊಸ ಹುರುಪು ಮೂಡಿಸಿದೆ.

Advertisement

ಬಿರುಸಿನ ಸಿದ್ಧತೆ
2017-18ರ ಬಜೆಟ್‌ನಲ್ಲಿ ತಾಲೂಕು ಘೋಷಣೆ ಆದ ಬಳಿಕ ತಾಲೂಕು ಅನುಷ್ಠಾನದ ಕುರಿತು ಜಿಲ್ಲಾಧಿಕಾರಿಗಳ ಹಾಗೂ ಸಹಾಯಕ ಆಯುಕ್ತರ ಮಟ್ಟದಲ್ಲಿ ಹಲವು ಸಭೆಗಳಾಗಿದೆ. ಬಹಳ ಹಿಂದೆಯೇ ಪ್ರಮುಖ ಇಲಾಖೆಗಳಿಗೆ ಸಾಕಷ್ಟು ಜಾಗ ಕಾದಿರಿಸಿದ್ದರೂ ಕೆಲವು ಇಲಾಖೆಗಳಿಗೆ ಬಾಕಿ ಇತ್ತು. ಕಡಬ ಆಸುಪಾಸಿನ ಸರಕಾರಿ ಜಾಗವನ್ನು ಗುರುತು ಮಾಡಿ ಸರಕಾರದ ಅನುಮೋದನೆ ಪಡೆಯುವ ಕಾರ್ಯ ಈಗ ನಡೆದಿದೆ. ಉಸ್ತವಾರಿ ಸಚಿವರು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಕಡಬ ತಾಲೂಕಿಗೆ ಸಂಬಂಧಿಸಿದ ಗಡಿಯ ಗ್ರಾಮಗಳ ಕುರಿತು ಚರ್ಚೆ ನಡೆಸಿದ್ದಾರೆ.

ಇಲಾಖೆಗಳಿಗೆ ಎಲ್ಲಿ ಜಾಗ? 
ಕೆಎಸ್‌ಆರ್‌ಟಿಸಿಗೆ ಕಡಬ ಅಂಬೇಡ್ಕರ್‌ ಭವನದ ಸಮೀಪ, ತಾ.ಪಂ. ಕಚೇರಿ ನಿರ್ಮಾಣಕ್ಕೆ ಹಳೆ ಸ್ಟೇಷನ್‌ನಲ್ಲಿ ತಾ.ಪಂ.
ಸುಪರ್ದಿಯಲ್ಲಿರುವ ಜಾಗ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಕಡಬ ಮೆಸ್ಕಾಂ ಸಮೀಪದ 3 ಎಕ್ರೆ ಜಾಗ, ಅಗ್ನಿಶಾಮಕ ದಳಕ್ಕೆ ಮರ್ದಾಳ ಸಮೀಪ ಚಾಕೋಟೆಕೆರೆಯಲ್ಲಿ, ತೋಟಗಾರಿಕಾ ಇಲಾಖೆಗೆ ಕಡಬ ವಿದ್ಯಾನಗರದಲ್ಲಿರುವ ಜೇನು ಕೃಷಿ ಸಂಬಂಧಿಸಿದ ಕಟ್ಟಡಗಳನ್ನು ಉಪಯೋಗಿಸುವ ಕುರಿತು ಸಿದ್ಧತೆಗಳು ನಡೆದಿವೆ. ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ 2 ಎಕರೆ ಜಮೀನು ಅಗತ್ಯವಿದ್ದು, ಕಂದಾಯ ಇಲಾಖೆಯವರು ಜಾಗ ಗೊತ್ತುಪಡಿಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪೇಟೆಯ ಸಮೀಪ ಜಾಗ ಬೇಕಾಗಿದ್ದು,ಹುಡುಕಲಾಗುತ್ತಿದೆ.

ಪೂರಕ ವಾತಾವರಣ
1986ರಲ್ಲಿ ಕಡಬದಲ್ಲಿ ನಾಡ ಕಚೇರಿಯನ್ನು ಪ್ರಾರಂಭಿಸಲು ಸರಕಾರ ಹಸಿರು ನಿಶಾನೆ ತೋರಿಸಿತು. ಸರಕಾರ ರಚಿಸಿದ ತಾಲೂಕು ರಚನಾ ಸಮಿತಿಗಳು ಕಡಬ ಪ್ರತ್ಯೇಕ ತಾಲೂಕಾಗಲು ಯೋಗ್ಯವಾಗಿದೆ ಎಂದು ಶಿಫಾರಸ್ಸು ಮಾಡಿದ್ದವು.

2001ರಲ್ಲಿ ರಾಜ್ಯ ಸರಕಾರದ ಕಾರ್ಯದರ್ಶಿ ಕಡಬ ತಾಲೂಕು ರಚನೆಗೆ ಸೂಚನೆ ನೀಡಿದ್ದರು. ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಅದೇ ವರ್ಷ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಕಡಬಕ್ಕೆ ವಿಶೇಷ ತಹಶೀಲ್ದಾರ್‌ ನೇಮಕ ಮಾಡಲಾಯಿತು. 2004ರಲ್ಲಿ ಭೂಮಿ ಕೇಂದ್ರವನ್ನು ಪ್ರಾರಂಭಿಸಲಾಯಿತು.

Advertisement

ಶೆಟ್ಟರ್‌ರಿಂದ ಘೋಷಣೆ
2013ರ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಘೋಷಿಸಿದ ಹೊಸ ತಾಲೂಕುಗಳ ಪಟ್ಟಿಯಲ್ಲಿ ಕಡಬವೂ ಸೇರಿತ್ತು.  ಕಾಂಗ್ರೆಸ್‌ ಸರಕಾರ ಹಿಂದಿನ ಸರಕಾರದ ಘೋಷಣೆಯನ್ನೊಪ್ಪದ ಕಾರಣ ತಾಲೂಕು ರಚನೆ ನನೆಗುದಿಗೆ ಬಿದ್ದಿತ್ತು. ಆದರೆ, 2017-18ರ ಬಜೆಟ್‌ನಲ್ಲಿ ರಾಜ್ಯದಲ್ಲಿ ಕಡಬ ಸಹಿತ 49 ಹೊಸ ತಾಲೂಕುಗಳ ಘೋಷಣೆ ಮಾಡಿದ್ದಲ್ಲದೆ, ಸಂಪುಟದ ಒಪ್ಪಿಗೆಯನ್ನೂ ನೀಡುವ ಮೂಲಕ ಕಡಬ ತಾಲೂಕಾಗುವುದು ಖಚಿತವೆನಿಸಿದೆ.

ಇಲಾಖೆಗಳಿಗೆ ಜಮೀನು
ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 1.60 ಎಕ್ರೆ, ಶಿಕ್ಷಣ ಇಲಾಖೆಗೆ 14.56 ಎಕ್ರೆ ಜಮೀನಿದ್ದು, ಅದರಲ್ಲಿಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನಿರ್ಮಾಣದ ಯೋಜನೆ ಇದೆ. ಪೊಲೀಸ್‌ ಇಲಾಖೆಗೆ 2.5 ಎಕ್ರೆ, ಲೋಕೋಪಯೋಗಿ ಇಲಾಖೆಗೆ 0.20 ಎಕ್ರೆ, ಪಂಚಾಯತ್‌ ರಾಜ್‌ ಇಲಾಖೆಗೆ 5.62 ಎಕ್ರೆ, ಕೃಷಿ ಇಲಾಖೆಗೆ 0.10 ಎಕ್ರೆ, ಮೆಸ್ಕಾಂಗೆ 2.90 ಎಕ್ರೆ, ಆರೋಗ್ಯ ಇಲಾಖೆಗೆ 2.11 ಎಕ್ರೆ ಭೂಮಿ ಕಾದಿರಿಸಲಾಗಿದೆ. ಕೃಷಿ ಇಲಾಖೆಗೆ ಈಗ ರೈತ ಸಂಪರ್ಕ ಕೇಂದ್ರ ಹಾಗೂ ನಿವೇಶನವಿದೆ. ಪಶುವೈದ್ಯಕೀಯ ಇಲಾಖೆಗೆ 70 ಸೆಂಟ್ಸ್‌ ಜಾಗವಿದ್ದು, ಹೊಸ ಕಟ್ಟಡ ನಿರ್ಮಾಣವಾಗಿದೆ.

ಪ್ರಕ್ರಿಯೆಗಳು ನಡೆಯುತ್ತಿವೆ
ತಾಲೂಕು ರಚನೆಯ ಕುರಿತು ಅ. 12ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಿಗದಿಯಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ವರ್ಗಾವಣೆಯಾದ ಕಾರಣ ಸಭೆ ಮುಂದೂಡಲಾಗಿದೆ. ತಾಲೂಕು ರಚನೆಯ ಪ್ರಾಥಮಿಕ ಪ್ರಕ್ರಿಯೆಗಳು ನಡೆಯುತ್ತಿವೆ. ಸರಕಾರದ ಸೂಚನೆಯಂತೆ 2018ರ ಜ. 1ರಿಂದ ಕಡಬ ತಾಲೂಕು ಅನುಷ್ಠಾನವಾಗಬೇಕಿದೆ.
ಜಾನ್‌ಪ್ರಕಾಶ್‌ ರೋಡ್ರಿಗಸ್‌
ಕಡಬ ತಹಶೀಲ್ದಾರ್‌

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next