Advertisement

ಕಡಬ ತಾಲೂಕು ಉದ್ಘಾಟನೆ 

05:11 AM Mar 09, 2019 | |

ಕಡಬ : ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಶುಕ್ರವಾರ ಸಂಜೆ ನೂತನ ಕಡಬ ತಾಲೂಕನ್ನು ಕಡಬ ತಹಶೀಲ್ದಾರ್‌ ಕಚೇರಿಯ ಆವರಣದಲ್ಲಿ ಫಲಕ ಅನಾವರಣ ನಡೆಸಿ ಉದ್ಘಾಟಿಸುವ ಮೂಲಕ ಕಡಬದ ಜನತೆಯ 6 ದಶಕಗಳ ಬಯಕೆ ಕೊನೆಗೂ ಈಡೇರಿತು. ದಿನಾಂಕ ನಿಗದಿಯಾಗಿ 6 ಬಾರಿ ಮುಂದೂಡಲ್ಪಟ್ಟಿತ್ತು. ಶುಕ್ರವಾರ ತಾಲೂಕು ಉದ್ಘಾಟನೆಯ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಜನತೆ ಸಂಭ್ರಮದಲ್ಲಿ ತೇಲಾಡಿದರು.

Advertisement

ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ಒಂದೇ ಸೂರಿ ನಡಿಯಲ್ಲಿ ವಿವಿಧ ಇಲಾಖೆಗಳ ಕಚೇರಿ ಗಳು ತೆರೆಯಲ್ಪಡಬೇಕು ಎನ್ನುವ ಸರಕಾರದ ಆಶಯದಂತೆ ನೂತನ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ 10 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಮಿನಿ ವಿಧಾನಸೌಧಕ್ಕೆ ತಹಶೀಲ್ದಾರ್‌ ಕಚೇರಿಯ ಆವರಣದಲ್ಲಿ ಕಂದಾಯ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.

ಸಮುದಾಯ ಆಸ್ಪತ್ರೆ ಉದ್ಘಾಟನೆ
ಕಡಬ ತಾ|ನ ಉದ್ಘಾಟನೆ ಹಾಗೂ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಕಡಬದ ಸರಕಾರಿ ಆಸ್ಪತ್ರೆಗೆ 4.85 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೂತನ ಕಟ್ಟಡದ ಉದ್ಘಾಟನೆಯನ್ನು ಕಂದಾಯ ಸಚಿವರು ನೆರವೇರಿಸಿದರು.

ಹೊಸಮಠ ಸೇತುವೆ ಉದ್ಘಾಟನೆ
ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಸ್ತೆಯಲ್ಲಿ ಕಡಬ ಸಮೀಪ ಗುಂಡ್ಯ ಹೊಳೆಗೆ ಅಡ್ಡಲಾಗಿ ರಸ್ತೆ ಅಭಿವೃದ್ಧಿ ನಿಗಮದ ಮೂಲಕ 9.19 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೊಸಮಠ ಸೇತುವೆಯನ್ನು ಸಚಿವರು ಉದ್ಘಾಟಿಸಿದರು.

ಬಿಳಿನೆಲೆ ಸೇತುವೆ ಲೋಕಾರ್ಪಣೆ
ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ- ನೆಟ್ಟಣ ನಡುವೆ ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೇತುವೆಯ ಉದ್ಘಾಟನೆಯನ್ನು ಕಡಬ ತಾ| ಉದ್ಘಾಟನೆಯ ಸಂದರ್ಭ ಕಂದಾಯ ಸಚಿವರು ಉದ್ಘಾಟಿಸಿದರು.

Advertisement

ಸ್ಕೌಟ್‌-ಗೈಡ್‌ ವಿದ್ಯಾರ್ಥಿಗಳಿಂದ ಜನಪ್ರತಿನಿಧಿಗಳಿಗೆ ಸ್ವಾಗತ
ಕಡಬ ತಾಲೂಕು ಉದ್ಘಾಟನೆಗೆ ಆಗಮಿಸಿದ ಸಚಿವರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಕಡಬದ ಸೈಂಟ್‌ ಜೋಕಿಮ್ಸ್‌ ವಿದ್ಯಾಸಂಸ್ಥೆ, ಸೈಂಟ್‌ ಆ್ಯನ್ಸ್‌ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್‌-ಗೈಡ್‌ ವಿದ್ಯಾರ್ಥಿಗಳು ಬ್ಯಾಂಡ್‌ ವಾದನ ಹಾಗೂ ಗೌರವ ವಂದನೆಯ ಮೂಲಕ ಸ್ವಾಗತಿಸಿ ಬರಮಾಡಿಕೊಂಡರು. ಸಭಾ ಕಾರ್ಯಕ್ರಮದಲ್ಲಿ ಸೈಂಟ್‌ ಜೋಕಿಮ್ಸ್‌ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕಡಬ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಆಗಮಿಸಿದ್ದ ಸಾರ್ವಜನಿಕರಿಗೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. 

ಸಚಿವರಿಗೆ ಸಮ್ಮಾನ
ತಾಲೂಕು ಉದ್ಘಾಟಿಸಿದ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಅವರನ್ನು ಸಭಾ ಕಾರ್ಯಕ್ರಮದಲ್ಲಿ ಕಡಬದ ಜನತೆಯ ಪರವಾಗಿ ಸಮ್ಮಾನಿಸಿ ಗೌರವಿಸಲಾಯಿತು. ಕಡಬ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ. ಫಿಲಿಪ್‌ ಹಾಗೂ ಉಪಾಧ್ಯಕ್ಷ ಕೈಕುರೆ ಕುಶಾಲಪ್ಪ ಗೌಡ ಅವರನ್ನೂ ಕೂಡ ಸಮಾರಂಭದಲ್ಲಿ ಸಮ್ಮಾನಿಸಿ, ಸ್ಮರಣಿಕೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next