Advertisement

ಕಡಬ ತಾಲೂಕು: ಅಭಿವೃದ್ಧಿಯ ತಂಗಾಳಿ ಬೀಸುವಂತಾಗಲಿ

03:43 PM Mar 25, 2017 | |

ಒಂದು ವಾರ ಕಡಬ ತಾಲೂಕು ಕೇಂದ್ರ ಹೇಗಾದರೆ ಚೆಂದ ಎನ್ನುವುದರ ಬಗ್ಗೆ ಸರಣಿ ಲೇಖನ ಗಳಿಂದ ಬೆಳಕು ಚೆಲ್ಲಲಾಯಿತು. ಇನ್ನು ಜನಪ್ರತಿ ನಿಧಿಗಳು ಮತ್ತು ಸರಕಾರ ಅಭಿವೃದ್ಧಿಯತ್ತ ಮುಖ ಮಾಡಬೇಕಿದೆ. ಇಲ್ಲಿಗೆ ಈ ಸರಣಿ ಮುಕ್ತಾಯ.

Advertisement

ಕಡಬ ಕೊನೆಗೂ ತಾಲೂಕಾಗಿ ಘೋಷಿತವಾಗಿದೆ. ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಹೇಳುವುದಾದರೆ, ಒಂದು ಪ್ರದೇಶ ತಾಲೂಕು ಕೇಂದ್ರವಾಗಿ ಮಾರ್ಪಡುವುದು ಒಳ್ಳೆಯ ಬೆಳವಣಿಗೆ. ಇದರಿಂದ ಸುತ್ತಲಿನ ಹಲವಾರು ಪ್ರದೇಶಗಳಿಗೆ ಅಭಿವೃದ್ಧಿಯ ಗಾಳಿ ಬೀಸುತ್ತದೆ. ಅದು ಜನರ ಪಾಲಿಗೆ ತಂಗಾಳಿಯಾಗಿಸಬೇಕೋ, ಬಿರುಗಾಳಿಯಾಗಿಸಬೇಕೋ ಎಂಬುದರಲ್ಲಿ ಸ್ಥಳೀಯ ಜನಪ್ರತಿನಿಧಿ ಹಾಗೂ ಸರಕಾರಗಳ ಪಾಲು ಹೆಚ್ಚಿದೆ.

ಕಡಬ ತಾಲೂಕಾಗಿ ಘೋಷಣೆಯಾಗಿರುವುದು ಹೊಸತಲ್ಲ. ಈ ಹಿಂದೆಯೂ ಘೋಷಿತವಾಗಿತ್ತಾದರೂ ಅನುದಾನ ಬಿಡುಗಡೆಯಾಗದೇ ಯಾವುದೇ ಅಭಿವೃದ್ಧಿ ಕೆಲಸ ಆಗಿರಲಿಲ್ಲ. ಬಳಿಕ ಒಂದಿಷ್ಟು ಒತ್ತಡ ಹೇರಿದ ಮೇಲೆ ವಿಶೇಷ ತಹಶೀಲ್ದಾರ್‌ ನೇಮಕವಾಗಿ ಕಚೇರಿಯೂ ಬಂದಿತು. ಅದೊಂದು ರೀತಿಯಲ್ಲಿ ತಾತ್ಕಾಲಿಕ ಸಮಾಧಾನ ಎಂಬಂತಿತ್ತು. ಈಗ ಪೂರ್ಣ ಪ್ರಮಾಣದ ತಾಲೂಕಾಗಿ ಘೋಷಣೆಯಾಗಿದೆ. 

ಒಂದು ತಾಲೂಕು ಕೇಂದ್ರವಾಗುವುದೆಂದರೆ ಬರೀ ಆಡಳಿತ ವ್ಯವಸ್ಥೆಯ ಕೇಂದ್ರವಾಗುವುದಲ್ಲ. ಇಡೀ ತಾಲೂಕಿನ ಗ್ರಾಮಗಳ ಆರೋಗ್ಯವನ್ನು ಕಾಪಾಡುವ, ಹೆಚ್ಚಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಂತೆ. ಅದನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ತಾಲೂಕು ಕೇಂದ್ರವಾಗಿದ್ದಕ್ಕೆ ಸಾರ್ಥಕ. ಹಲವು ಬಾರಿ ಸರಕಾರ ಯಾವುದ್ಯಾವುದೋ ಕಾರಣಗಳಿಗೆ ತಾಲೂಕು ಕೇಂದ್ರ ಘೋಷಣೆ ಮಾಡಿ, ಹಣ ಒದಗಿಸದೇ ನರಳಿದ ಪ್ರಸಂಗಗಳೂ ಬಹಳಷ್ಟಿವೆ.

ಎಲ್ಲವೂ ಅಂದುಕೊಂಡಂತಿಲ್ಲ
ಒಂದು ವಾರದಿಂದ ಕಡಬ ತಾಲೂಕಿನಲ್ಲಿ ಆಗಬೇಕಾದ ಕೆಲಸಗಳೇನು? ಅವುಗಳಲ್ಲಿ ತುರ್ತಾಗಿ ಆಗಬೇಕಾದದ್ದೇನು ಇತ್ಯಾದಿ ಬಗ್ಗೆ “ಉದಯವಾಣಿ’ ಸುದಿನ ಪಟ್ಟಿ ಮಾಡಿಕೊಟ್ಟಿದೆ. ಈ ಮೂಲಕ ಅಭಿವೃದ್ಧಿಗೊಂದು ದಿಸೆ ತೋರಿಸುವ ಕೆಲಸ ಮಾಡಿದೆ.  ಅಂದಹಾಗೆ ಕಡಬವೂ ಬೇರೆಲ್ಲಾ ತಾಲೂಕುಗಳಂತೆ ಕೆಲವು ಕೊರತೆಗಳನ್ನು ಹೊಂದಿವೆ. 

Advertisement

ಯಾವಾಗಲೂ ತಾಲೂಕು ಕೇಂದ್ರವಾದಾಗ ಜನರಿಗೆ ಹೆಚ್ಚು ನಿರೀಕ್ಷೆಗಳಿರುತ್ತವೆ. ಅವುಗಳು ಈಡೇರಬಹುದೆಂಬ ನಂಬಿಕೆಯೂ ಇರುತ್ತದೆ. ಹಾಗಾಗಿಯೇ ಸರಕಾರದ ಒಂದು ಪ್ರಕಟನೆ ಹರ್ಷವನ್ನು ತರುತ್ತದೆ. ಆದರೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳದೇ ಪ್ರದೇಶದ ಅಭಿವೃದ್ಧಿಗೆ ಅಡ್ಡಿಯಾದರೆ ಜನರು, ಸರಕಾರ ಮತ್ತು ಸ್ಥಳೀಯ ಪ್ರತಿನಿಧಿಗಳು ದೂರುವುದು ಸಹಜ. ಶೈಕ್ಷಣಿಕ ವ್ಯವಸ್ಥೆಯಿಂದ ಹಿಡಿದು ಆರೋಗ್ಯವಲಯದವರೆಗೂ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಗಮನಹರಿಸಬೇಕೆಂಬುದು ಸ್ಥಳೀಯರ ಆಗ್ರಹವೂ ಹೌದು. ಇದನ್ನು ಈಡೇರಿಸುವತ್ತ ಸರಕಾರ, ಜನಪ್ರತಿನಿಧಿಗಳು ಕ್ರಿಯಾಶೀಲರಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next