Advertisement

ಕಡಬ ಸಾಂತಪ್ಪ ಕಲಾಲೀನ

12:30 AM Jan 18, 2019 | |

ಇತ್ತೀಚೆಗೆ ನಮ್ಮನ್ನಗಲಿದ ಕಡಬ ಸಾಂತಪ್ಪ ಅವರು ಧರ್ಮಸ್ಥಳ ಮೇಳವೊಂದರಲ್ಲೇ ಸುಮಾರು ಮೂರು ದಶಕಗಳ ಕಾಲ ಕಲಾಸೇವೆ ಮಾಡಿದವರು. ಕೂಡ್ಲು ಮೇಳದಲ್ಲಿ ರಂಗವೇರಿ ಸುರತ್ಕಲ್‌, ಮುಚ್ಚಾರು ಮುಂತಾದ ಮೇಳಗಳಲ್ಲಿ ತಿರುಗಾಟ ಮಾಡಿದ ಇವರ ಕಲಾಯಾನದ ಅನುಭವ ಆರೇಳು ದಶಕಗಳದ್ದು. ಕನ್ಯಾನದ ಭಾರತ ಸೇವಾಶ್ರಮ ನಡೆಸುವ “ದ್ವಾರಕಮಯಿ’ ವೃದ್ಧಾಶ್ರಮದಲ್ಲಿ ಬಾಳ ಸಂಜೆಯನ್ನು ಕಳೆಯುತ್ತಾ ಕಾಲನ ಕರೆಗಾಗಿ ಕಾಯುತ್ತಿದ್ದ ಈ ಅನಿಕೇತನ ತನ್ನ “ನಿಜ ನಿಕೇತನ’ಕ್ಕೆ ತೆರಳುವಾಗ ಹರಯ 98. 

Advertisement

ಸಾಂತಪ್ಪ ಆರಂಭದಲ್ಲಿ ಬದುಕಿಗಾಗಿ ಆರಿಸಿದ್ದು ಟೈಲರ್‌ ವೃತ್ತಿ. ಅನಂತರ ಸುಬ್ರಹ್ಮಣ್ಯದಲ್ಲಿ ಜವುಳಿ ಅಂಗಡಿ ಇಟ್ಟು ವ್ಯಾಪಾರ ಆರಂಭಿಸಿದರು. ಈ ಹೊತ್ತಿನಲ್ಲಿ ಬಣ್ಣದ ಲೋಕಕ್ಕೆ ಮರುಳಾದರು. ಸಂಪಾದನೆಯ ದಾರಿ ಬಿಟ್ಟು ರಂಗಸ್ಥಳದ ಕಡೆಗೆ ಹೆಜ್ಜೆ ಹಾಕಿದರು. ನೋಡಿ, ಕೂಡಿ, ಕೇಳಿ, ಕಲಿತು ಬೆಳೆಯುತ್ತಾ ಬಣ್ಣದ ಬದುಕನ್ನೇ ಶಾಶ್ವತವಾಗಿಸಿಕೊಂಡರು. ಕಡಬ ಸಾಂತಪ್ಪ ಅಸಾಮಾನ್ಯ ಪ್ರತಿಭಾವಂತ. ಸಾಂಕೇತಿಕ ರಂಗಭೂಮಿಯೆನಿಸಿದ ಯಕ್ಷಗಾನದಲ್ಲಿ ಅಭಿನಯದ ಸಹಜತೆ ಹೇಗೆಂಬುದೇ ಕಲಾವಿದರ ಮುಂದಿರುವ ಸವಾಲು. ಆದುದರಿಂದ ರಂಗಸ್ಥಳದ ಸಾತ್ವಿಕಾಭಿನಯದಲ್ಲಿ ಗೆಲ್ಲುವ ಕಲಾವಿದರ ಸಂಖ್ಯೆ ವಿರಳ. ಇಂತಹ ವಿರಳ ಪಂಕ್ತಿಯ ಕಲಾವಿದರಲ್ಲಿ ಕಡಬ ಅಗ್ರಮಾನ್ಯರು. ಕಡಬ ಪರಿಪೂರ್ಣ ಕಲಾವಿದ. ಯಾವುದೇ ಪಾತ್ರಗಳನ್ನು ಅವರು ನಿರ್ವಹಿಸಿದರೂ ನಡೆ, ನುಡಿ, ನೋಟ ಹೀಗೆ ಸರ್ವಾಂಗ ಅಭಿನಯಗಳಲ್ಲೂ ನೈಜತೆ ಎದ್ದು ತೋರುತ್ತಿತ್ತು. ಮಧುರ ಕಂಠದ ಕಡಬ ಸಾಂತಪ್ಪ ಅವರು ಸುಶ್ರಾವ್ಯವಾಗಿ ಭಾಗವತಿಕೆಯನ್ನು ಮಾಡುತ್ತಿದ್ದರು. ಧರ್ಮಸ್ಥಳ ಮೇಳದಲ್ಲಿ ಕಡತೋಕಾ ಅವರ ಅನುಪಸ್ಥಿತಿಯಲ್ಲಿ ಕಡಬ ಅನೇಕ ಆಟಗಳಿಗೆ ಭಾಗವತಿಕೆ ಮಾಡಿದ್ದುಂಟು. 

 ಯಕ್ಷಗಾನದ ರಾಜರುಗಳ ಉಡುಗೆಗಳನ್ನು ಹೊಲಿಯುವ ಕಲೆಯನ್ನು ಸಿದ್ಧಿಸಿಕೊಂಡ ಸಾಂತಪ್ಪ ಅವರು ಪ್ರಸಾದನ ಕಲೆಯಲ್ಲೂ ನಿಪುಣ. ಒಂದು ಕಾಲದ ಧರ್ಮಸ್ಥಳ ಮೇಳದ ವೇಷಭೂಷಣದ ರಚನೆಯನ್ನು ಕಡಬ ಅವರೇ ಮಾಡುತ್ತಿದ್ದರು. ತಿರುಗಾಟದಲ್ಲಿ ವೇಷ, ಮಳೆಗಾಲದಲ್ಲಿ ವೇಷಭೂಷಣ ಹೊಲಿಯುವುದು ಇವರ ಕಲಾಕಾಯಕವಾಗಿತ್ತು. ಮೇಳಬಿಟ್ಟ ಬಳಿಕ ಪೈವಳಿಕೆಯ ಶ್ರೀ ಗಣೇಶ ಕಲಾವೃಂದ ಸಂಸ್ಥೆಯಲ್ಲಿ ಕಲಾಸೇವೆ ನಡೆಸಿದರು. 

 ಕಡಬ ಸಾಂತಪ್ಪ ಅವರು ಕೇವಲ ಕಲಾವಿದ ಮಾತ್ರವಲ್ಲ; ಮೇಳದ ಆಪತºಂಧು ಸದಸ್ಯ. ಕಲಾವಿದರ ರಜೆಗೆ ಯಾವುದೇ ವೇಷಕ್ಕೆ ಸೈ. ಭಾಗವತಿಕೆ, ಸಂಗೀತಕ್ಕೂ ಸಿದ್ಧ. ಪ್ರಚಾರಕ ರಜೆ ಮಾಡಿದರೆ ಆಟ ಕರೆದು ಹೇಳುವ ಕೆಲಸಕ್ಕೂ ಹೋಗುತ್ತಿದ್ದರು. ಕ್ಯಾಂಪುಗಳು ಖಾಲಿ ಇದ್ದರೆ ಅವನ್ನು ತುಂಬಲು ಕಡಬ ಸಾಂತಪ್ಪರೇ ತೆರಳುತ್ತಿದ್ದರು. ಹೀಗೆ ಬಹುಮುಖದ ಕಲಾಸೇವೆ ಇವರದ್ದು.

 ಎಂದೂ ಹಣಕ್ಕಾಗಿ ಹಂಬಲಿಸದೆ, ಕಲೆಯನ್ನೇ ಉಸಿರಾಗಿಸಿ ಬಾಳಿದ ಕಲೋಪಾಸಕ ಕಡಬ ಸಾಂತಪ್ಪ ಅವರ ಕೊನೆಗಾಲದ ನೆಲೆ “ವೃದ್ಧಾಶ್ರಮ’ವಾದುದು ವಿಷಾದನೀಯ. ಎಂದಿಗೂ ಯಾರಿಗೂ ತಲೆಬಾಗದೆ, ಯಾರ ಮುಂದೆಯೂ ಕೈ ಚಾಚದೆ ಸ್ವಾಭಿಮಾನದಿಂದಲೇ ಬಾಳಿದವರು. ಎಂದಿಗೂ ಬದುಕಿನ ಗುಲಾಮನಾಗದೆ ಬದುಕನ್ನು ಬಂದಂತೆ ಸ್ವೀಕರಿಸಿ ಸ್ಥಿತಪ್ರಜ್ಞನಾಗಿಯೇ ಬಾಳಿದ ಈ ಅಸಾಮಾನ್ಯ ಕಲಾವಿದನಿಗೆ ಕಲಾಜೀವನ ನೀಡಿದ್ದು ಮಾತ್ರ ಅನಾಥ ಬಾಳನ್ನು ಎಂಬುದು ಬಹಳ ಬೇಸರದ ಸಂಗತಿ. 

Advertisement

ತಾರಾನಾಥ ವರ್ಕಾಡಿ 

Advertisement

Udayavani is now on Telegram. Click here to join our channel and stay updated with the latest news.

Next