Advertisement
ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ 50 ತಾಲೂಕುಗಳಿಗೆ ವಿವಿಧ ಕಚೇರಿಗಳನ್ನು ಮಂಜೂರು ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವರು ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸೆ. 19ರಂದು ಬೆಂಗಳೂರಿನಲ್ಲಿ ಸಭೆ ನಡೆಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದ್ದು, ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ.
ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಕಡಬದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ತಹಶೀಲ್ದಾರ್ ಕಚೇರಿ ಬಳಿ ಸರ್ವೆ ನಂಬ್ರ 130/1ಎಪಿ2ರಲ್ಲಿ 1.60 ಎಕ್ರೆ ಜಮೀನು ಕಾದಿರಿಸಲಾಗಿದೆ. ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಲು ಹಾಗೂ ಸದ್ರಿ ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಲು ಸೂಕ್ತ ಆದೇಶ ಹೊರಡಿಸಬೇಕೆಂದು ಸುಳ್ಯ ಶಾಸಕ ಎಸ್. ಅಂಗಾರ ಅವರು ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದ್ದು, ಅದರಂತೆ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಹಾಗೂ ರೇಖಾ ಅಂದಾಜು ಪಟ್ಟಿಯನ್ನು ಕರ್ನಾಟಕ ಗೃಹ ಮಂಡಳಿ ವತಿಯಿಂದ ತಯಾರಿಸಲಾಗಿದೆ. ಕಡಬ ತಹಶೀಲ್ದಾರರ ಕೋರಿಕೆಯಂತೆ ತಹಶೀಲ್ದಾರರ ಕಚೇರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಶಾಸಕರ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಸರ್ವೆ ಇಲಾಖೆ ಕಚೇರಿ ಹಾಗೂ ಪೀಠೊಪಕರಣಗಳಿಗೆ ಪೂರಕ ವಾದ ನಕ್ಷೆ ತಯಾರಿಸಿ ತಹಶೀಲ್ದಾರರ ಸಹಿ ಪಡೆದು ರೇಖಾ ಅಂದಾಜುಪಟ್ಟಿಯನ್ನು ತಯಾರಿಸಲಾಗಿದೆ. ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಪರಿಶೀಲಿಸಿರುವ ಅಂದಾಜು ಪಟ್ಟಿಯನ್ನು ಆಡಳಿತಾತ್ಮಕ ಅನುಮೋದನೆಗಾಗಿ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಕಡಬದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇ ಸೂರಿನಡಿ ಎಲ್ಲ ಕಚೇರಿಗಳು ಲಭ್ಯವಾಗುವಂತೆ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಹಾಗೂ ರೇಖಾ ಅಂದಾಜುಪಟ್ಟಿ (10 ಕೋಟಿ ರೂ.) ಯನ್ನು ಕರ್ನಾಟಕ ಗೃಹ ಮಂಡಳಿ ವತಿಯಿಂದ ತಯಾರಿಸಲಾಗಿದೆ. ಈ ಅಂದಾಜು ಪಟ್ಟಿಯನ್ನು ಆಡಳಿತಾತ್ಮಕ ಅನುಮೋದನೆಗಾಗಿ ಸರಕಾರಕ್ಕೆ ಕಳುಹಿಸಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.
– ಎಸ್. ಅಂಗಾರ
ಸುಳ್ಯ ಶಾಸಕರು
Advertisement
ನಾಗರಾಜ್ ಎನ್.ಕೆ