Advertisement

ಕಡಬ: ಶುದ್ಧ ಕುಡಿಯುವ ನೀರಿನ ಘಟಕ ಅಪೂರ್ಣ

08:48 AM Dec 04, 2020 | Suhan S |

ಕಡಬ, ಡಿ. 3: ಕಡಬ ಪೇಟೆಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಶುದ್ಧ ಕುಡಿ ಯುವ ನೀರಿನ ಘಟಕವೊಂದು ಕಳೆದ 2 ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ಪಾಳು ಬಿದ್ದಿದೆ.

Advertisement

ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಹಾಗೂ ಆರೋಗ್ಯಪೂರ್ಣ ಕುಡಿಯುವ ನೀರು ಪೂರೈಸುವ ಸಲುವಾಗಿ ಸರಕಾರವು ಗ್ರಾ.ಪಂ. ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲು ಹೊರಟಿತ್ತು. ಅಲ್ಲಿ ಜನರು 2 ರೂ. ನಾಣ್ಯವನ್ನು ಹಾಕಿ 20 ಲೀ. ಶುದ್ಧ ಕುಡಿಯುವ ನೀರನ್ನು ಪಡೆಯುವ ಗುರಿ ಹೊಂದಿತ್ತು. ಆದರೆ ಬಹುತೇಕ ಕಡೆ ಈ ರೀತಿಯ ಘಟಕಗಳು ನಿಷ್ಪ್ರಯೋಜಕವಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಕಡಬ ಪೇಟೆಯ ಅಂಚೆ ಕಚೇರಿಯ ಸಮೀಪವೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಆರಂಭಿಸಲು 2 ವರ್ಷಗಳ ಹಿಂದೆ ಕಾಮಗಾರಿ ಆರಂಭಿಸಲಾಗಿತ್ತು. ಲೋಹದ ಶೀಟ್‌ ಬಳಸಿ ಕಟ್ಟಡ ನಿರ್ಮಾಣ ನಡೆಸಿ ಅದರ ಹತ್ತಿರದಲ್ಲಿ ನೀರು ಶುದ್ಧೀಕರಿಸಲು ಒಂದು ಬೃಹತ್‌ ಲೋಹದ ಟ್ಯಾಂಕ್‌ ಹಾಗೂ ಇನ್ನೊಂದು ಫೈಬರ್‌ ಟ್ಯಾಂಕ್‌ ತಂದಿರಿಸಿ ಹೋದ ಕೆಲಸಗಾರರು ಆ ಬಳಿಕ ಅತ್ತ ತಲೆ ಹಾಕಿಯೂ ನೋಡಿಲ್ಲ. ನೀರು ಶುದ್ಧೀಕರಿಸುವ ಬೆಲೆ ಬಾಳುವ ಯಂತ್ರ ಸೇರಿ ಕೆಲವು ಸಲಕರಣೆ ಹತ್ತಿರದ ಗುಜಿರಿ ವ್ಯಾಪಾರದ ಅಂಗಡಿಯಲ್ಲಿರಿಸಲಾಗಿದ್ದು, ಅದು ಮೂಲೆ ಸೇರಿದೆ.

ಸುಮಾರು 8 ಲಕ್ಷ ರೂ. ವೆಚ್ಚದ ಘಟಕ ಈ ರೀತಿ ಪಾಳು ಬಿದ್ದಿದ್ದರೂ ಸರಕಾರದ ಯಾವುದೇ ಅಧಿಕಾರಿಗಳು ಈ ಬಗ್ಗೆ ಚಕಾರ ಎತ್ತದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಘಟಕದಕೆಲಸ ನಡೆಯುವ ವೇಳೆ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್‌ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಬಳಿಕ ಕೆಲಸಗಾರರು ಅದನ್ನು ಸರಿಪಡಿಸಿದ್ದರು. ಎಲ್ಲೆಡೆ ಕೆಆರ್‌ಐಡಿಎಲ್‌, ಜಿ. ಪಂ. ಈ ರೀತಿಯ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದೆ. ಆದರೆ ಕಡಬದಲ್ಲಿನ ಘಟಕವನ್ನು ನಿರ್ಮಿಸುವ ಜವಾಬ್ದಾರಿ ಹೊತ್ತವರು ಯಾರು ಎನ್ನುವ ಪ್ರಶ್ನೆಗೆ ಯಾವ ಅಧಿಕಾರಿಗಳಲ್ಲಿಯೂ ಉತ್ತರವಿಲ್ಲ.

ಕಾನೂನು ಕ್ರಮ :  ಜನರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿಕೊಂಡು ಯಾವ ರೀತಿ ಪೋಲು ಮಾಡುತ್ತಾರೆಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಕಡಬದಲ್ಲಿರುವ ಅಪೂರ್ಣ ಘಟಕದ ಕುರಿತು ಸಂಬಂಧಪಟ್ಟವರು ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು  -ನವೀನ್‌ ಕಲ್ಲಾಜೆ, ಸಾಮಾಜಿಕ ಕಾರ್ಯಕರ್ತ

ಹಸ್ತಾಂತರವಾಗಿಲ್ಲ :

Advertisement

ಈ ಹಿಂದೆ ಗ್ರಾ.ಪಂ.ವ್ಯವಸ್ಥೆ ಇದ್ದಾಗ ಕಡಬ ಪೇಟೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕೆಲಸ ಆರಂಭಿಸಲಾಗಿತ್ತು. ಈಗ ಕಡಬದಲ್ಲಿ ಪಟ್ಟಣ ಪಂಚಾಯತ್‌ ವ್ಯವಸ್ಥೆ ಜಾರಿಗೆ ಬಂದಿದೆ. ಘಟಕದ ಕೆಲಸ ಪೂರ್ಣವಾಗದೇ ಇರುವುದರಿಂದ ಸ್ಥಳೀಯಾಡಳಿತಕ್ಕೆ ಅದನ್ನು ಹಸ್ತಾಂತರಿಸಿಲ್ಲ. ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಂಡು ನಮಗೆ ಹಸ್ತಾಂತರಿಸಿದ ಬಳಿಕವಷ್ಟೇ ನಾವು ಅದರ ನಿರ್ವಹಣೆ ಮಾಡಲು ಸಾಧ್ಯ. -ಅರುಣ್‌ ಕೆ., ಮುಖ್ಯಾಧಿಕಾರಿ, ಕಡಬ ಪಟ್ಟಣ ಪಂಚಾಯತ್‌.

 

ನಾಗರಾಜ್‌ ಎನ್‌.ಕೆ.

 

Advertisement

Udayavani is now on Telegram. Click here to join our channel and stay updated with the latest news.

Next