Advertisement

ಕಡಬ ಕಾಡಾನೆ ದಾಳಿ ಪ್ರಕರಣ; ಸ್ಥಳಕ್ಕೆ ಡಿಸಿ, ಡಿಎಫ್ಒ ಭೇಟಿ

01:32 PM Feb 20, 2023 | Team Udayavani |

ಸುಬ್ರಹ್ಮಣ್ಯ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲ ಎಂಬಲ್ಲಿ ಕಾಡಾನೆ ದಾಳಿಗೊಳಗಾಗಿ ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ಆಗ್ರಹದಂತೆ ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಹಾಗೂ ಡಿಎಫ್ಒ ಡಾ‌.ವೈ.ಕೆ.ದಿನೇಶ್ ಆಗಮಿಸಿ ಸ್ಥಳೀಯರ ಅಹವಾಲು ಆಲಿಸಿ, ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸುವ ಬಗ್ಗೆ ಭರವಸೆ ನೀಡಿದರು.

Advertisement

ಕಾಡಾನೆ ದಾಳಿಯಿಂದ ಮೃತಪಟ್ಟ ಇಬ್ಬರ ಮೃತದೇಹವನ್ನು ಡಿಸಿ ಹಾಗೂ ಡಿಎಫ್ಒ ಬರದೆ ತೆಗೆಯಲು ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದ ಹಿನ್ನಲೆ ಘಟನಾ ಸ್ಥಳಕ್ಕೆ ಡಿಎಫ್ಒ, ಡಿಸಿ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲನೆ ನಡೆಸಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಆ ಬಳಿಕ ಮೃತ ಯುವತಿಯ ಮನೆಗೆ ತೆರಳಿ ಮನೆಯವರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ರವಿಕುಮಾರ್, ಇಲ್ಲಿನ ಕಾಡಾನೆ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಪೂರಕ ಕ್ರಮ ಕೈಗೊಳ್ಳಲಾಗುವುದು. ಮೃತಪಟ್ಟ ಇಬ್ಬರ ಕುಟುಂಬಕ್ಕೆ ಇಂದೇ ತಲಾ 15 ಲಕ್ಷ ಪರಿಹಾರ ನೀಡಲಾಗುವುದು ಎಂದ ಅವರು ಕಾಡಾನೆ ಹಾವಳಿ ನಿಯಂತ್ರಣಕ್ಕೆ ವೈಜ್ಞಾನಿಕ ರೀತಿಯಲ್ಲಿ ಆನೆ ಕಂದಕ ತೆಗೆಯಲಾಗುವುದು ಎಂದರು.

ಅಧಿಕಾರಿಗಳ ವಿರುದ್ಧ ಆಕ್ರೋಶ:

Advertisement

ಘಟನಾ ಸ್ಥಳದಲ್ಲಿ ಬೆಳಗ್ಗೆಯಿಂದಲೇ ಭಾರೀ ಸಂಖ್ಯೆಯ ಜನ ಸೇರಿದ್ದು, ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಆರೋಪಗಳನ್ನು ಅಧಿಕಾರಿಗಳ ಮೇಲೆ ಹೊರಿಸಿದ ಘಟನೆಯೂ ನಡೆದಿದೆ.

ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಹಿನ್ನಲೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಲಾಯಿತು. ಅಧಿಕಾರಿಗಳ ಭರವಸೆ ಬಳಿಕ ಮೃತರ ಮುಂದಿನ ಕಾರ್ಯಗಳಿಗೆ ಅವಕಾಶಕ್ಕೆ ಸ್ಥಳೀಯರು ಒಪ್ಪಿಗೆ ಸೂಚಿಸಿದರು.

ಎಸಿ ಗಿರೀಶ್ ನಂದನ್, ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ್, ಎಸಿಎಫ್ ಪ್ರವೀಣ್ ಕುಮಾರ್, ಕಡಬ ತಹಶೀಲ್ದಾರ್ ರಮೇಶ್, ಉಪತಹಶೀಲ್ದಾರ್ ಗೋಪಾಲ ಕಲ್ಲುಗುಡ್ಡೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ, ಪಿಡಿಒ ಗುರುವ ಎಸ್. ತಾ.ಪಂ. ವ್ಯವಸ್ಥಾಪಕ ಭುವನೇಂದ್ರ ಸುಬ್ರಹ್ಮಣ್ಯ ಆರ್.ಎಫ್.ಒ. ರಾಘವೇಂದ್ರ, ಪಂಜ ಆರ್.ಎಫ್.ಒ. ಮಂಜುನಾಥ, ಕಡಬ ಎಸೈ ಹರೀಶ್, ಸುಬ್ರಹ್ಮಣ್ಯ ಎಸೈ ಮಂಜುನಾಥ, ಎಸೈ ರಾಜೇಶ್ ಸೇರಿದಂತೆ ವಿವಿಧ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಇಲಾಖೆಗಳ ಅಧಿಕಾರಿಗಳು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಸಾರ್ವಜನಿಕರು ಸ್ಥಳದಲ್ಲಿದ್ದರು.

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲ ಎಂಬಲ್ಲಿ ಇಂದು ಬೆಳಗ್ಗೆ ಕಾಡಾನೆ ದಾಳಿಗೆ ರಂಜಿತಾ (25) ಹಾಗೂ ರಮೇಶ್ ರೈ (58) ಎಂಬವರು ಮೃತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next