Advertisement

ಜಾತಿ ಸಂಘಟನೆಗಳು ರಾಜಕೀಯದ ಏಣಿಗಳಲ್ಲ

09:48 AM Jan 21, 2019 | Team Udayavani |

ಕಡಬ : ಜಾತಿ ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಪೂರಕ ವಾಗಿರ ಬೇಕೇ ಹೊರತು ರಾಜಕೀಯ ಹಿತಾಸಕ್ತಿಯ ಏಣಿಗಳಾಗಿ ಬಳಕೆ ಯಾಗಬಾರದು ಎಂದು ಉಪನ್ಯಾಸಕ, ಜಾನಪದ ಸಂಶೋಧಕ ಡಾ| ಪೂವಪ್ಪ ಕಣಿಯೂರು ಅಭಿಪ್ರಾಯಪಟ್ಟರು.

Advertisement

ಅವರು ರವಿವಾರ ಕಡಬದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಕಡಬ ವಲಯದ ನೇತೃತ್ವದಲ್ಲಿ ಜರಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಯೋಧರಿಗೆ ಗೌರವ ಸಮರ್ಪಣೆ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಆಟೋಟ ಸ್ಪರ್ಧೆಗಳ ಬಹುಮಾನ ವಿತರಣ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿದರು. ನಮ್ಮ ಸಮಾಜದ ಯುವಕರು ಹಣೆಗೆ ನಾಮ ಬಳಿದುಕೊಂಡು ಯಾವುದೋ ಸಂಘಟನೆಯ ಹಿಂದೆ ಬಿದ್ದು ಬಳ್ಳಾರಿ ಜೈಲಿಗೆ ಹೋಗಿ ಜೀವನ ಹಾಳು ಮಾಡಿ ಕೊಳ್ಳುತ್ತಿದ್ದಾರೆ. ನಾವು ನಮ್ಮ ಮಕ್ಕಳನ್ನು ಯಾರದೋ ಹಿಂಬಾಲಕರಾಗಲು ಬಿಡ ಬಾರದು. ಅವರಿಗೆ ಯೋಗ್ಯ ಶಿಕ್ಷಣ ನೀಡಿ ಸಮಾಜದಲ್ಲಿ ತಲೆ ಎತ್ತಿ ಬದುಕಲು ಪ್ರೇರಣೆ ನೀಡಬೇಕು. ಯೋಗ್ಯ ಶಿಕ್ಷಣ, ಉದ್ಯೋಗ ಇದ್ದಲ್ಲಿ ಸಮಾಜದಲ್ಲಿ ಗೌರವ ಬರುತ್ತದೆ. ನಾವು ನಿರಭಿಮಾನದಿಂದ ಇನ್ನೊಬ್ಬರ ಅಡಿಯಾಳಾಗಿ ಬದುಕು ಸವೆಸುವ ಬದಲು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಉತ್ತಮ ಅವಕಾಶ ಗಳನ್ನು ಕಂಡುಕೊಳ್ಳಬೇಕು. ಸಮಾಜದ ಸಂಘಟನೆ ಯುವಕರನ್ನು ಒಂದು ಗೂಡಿಸಿ ಸುಶಿಕ್ಷಿತರನ್ನಾಗಿ ಮಾಡುವ ಕಾರ್ಯಕ್ಕೆ ಬಳಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಮರ್ದಾಳ ಗ್ರಾ.ಪಂ. ಮಾಜಿ ಅಧ್ಯಕ್ಷ, ಊರ ಗೌಡ ಜನಾರ್ದನ ಗೌಡ ಪುತ್ತಿಲ ಉದ್ಘಾಟನೆ ನೆರವೇರಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಾಸನ ಅಬಕಾರಿ ಇಲಾಖೆಯ ಉಪ ಆಯುಕ್ತ ಗೋಪಾಲಕೃಷ್ಣ ಪೂಯಿಲ ಹಾಗೂ ಕಡಬ ವಲಯ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ ಮಾತನಾಡಿದರು. ಒಕ್ಕಲಿಗ ಗೌಡ ಸಂಘದ ಕಡಬ ವಲಯದ ಗೌರವಾಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ಮಹಿಳಾ ಘಟಕದ ಅಧ್ಯಕ್ಷೆ ನೀಲಾವತಿ ಶಿವರಾಮ್‌, ಕಾರ್ಯದರ್ಶಿ ರುಕ್ಮಿಣಿ ಸಾಂತಪ್ಪ ಗೌಡ, ಶಿವರಾಮ ಗೌಡ ಎಂ.ಎಸ್‌. ವಾಡ್ಯಪ್ಪ ಗೌಡ ಎರ್ಮಾಯಿಲ್‌ ಉಪಸ್ಥಿತರಿದ್ದರು. ಕಡಬ ವಲಯದ ಗೌಡ ಸಮುದಾಯದ 52 ಯೋಧರನ್ನು ಗೌರವಿಸಲಾಯಿತು.

ಸಂಚಾಲಕ ಸೀತಾರಾಮ ಗೌಡ ಪೊಸವಳಿಕೆ ಸ್ವಾಗತಿಸಿ, ಒಕ್ಕಲಿಗ ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಗೌಡ ಕೋಲಂತಾಡಿ ವಂದಿಸಿ,ಉಪನ್ಯಾಸಕ ವಾಸುದೇವ ಗೌಡ ಕೋಲ್ಪೆ ನಿರೂಪಿಸಿದರು. ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಗಣೇಶ್‌ ಗೌಡ ಕೈಕುರೆ, ಮೋಹನ ಗೌಡ ಕೆರೆಕೋಡಿ, ಮೋಹನ ಗೌಡ ಕೋಡಿಂಬಾಳ, ನಾರಾಯಣ ಗೌಡ ಬಲ್ಯ, ಜಯರಾಮ ಗೌಡ ಆರ್ತಿಲ ಕಾರ್ಯಕ್ರಮ ನಿರ್ವಹಿಸಿದರು.

ವೈಜ್ಞಾನಿಕ ದೃಷ್ಟಿಕೋನ ಇರಲಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ ಮಾತನಾಡಿ, ನಾವು ನಮ್ಮ ಸಂಪ್ರದಾಯಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ ಆಚರಣೆ ಮಾಡಬೇಕು. ನಮ್ಮ ಸಮಾಜದ ಮೇಲೆ ಸವಾರಿ ಮಾಡುವವರ ಬಗ್ಗೆ ಜಾಗೃತರಾಗಿರಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next