Advertisement

ಮಿನಿ ವಿಧಾನಸೌಧ ನಿರ್ಮಿಸಿ, ಜನರ ಅಲೆದಾಟ ತಪ್ಪಿಸಿ

11:24 AM Mar 29, 2019 | Naveen |
ಕಡಬ : ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದ ಕಡಬದಲ್ಲಿ ತಾಲೂಕಿನ ಉದ್ಘಾಟನೆ ನೆರವೇರಿದೆ. ಹೊಸದಾಗಿ ಮಿನಿ ವಿಧಾನಸೌಧ ನಿರ್ಮಾಣಕ್ಕೂ ಶಂಕುಸ್ಥಾಪನೆ ಆಗಿದೆ. ಆದರೆ ಕಂದಾಯ ಇಲಾಖೆಗೆ ಸಂಬಂಧಿಸಿದ  ಬೇರೆ ಬೇರೆ ಕಚೇರಿಗಳು ಒಂದೇ ಸೂರಿನಡಿ ಬಾರದೇ ಇರುವುದರಿಂದ ಜನರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲೆದಾಡುವ ಅನಿವಾರ್ಯತೆ ಮಾತ್ರ ತಪ್ಪಿಲ್ಲ.
ಕೆಲವು ವರ್ಷಗಳ ಹಿಂದೆ ಕಡಬ ಎಪಿಎಂಸಿ ಉಪ ಪ್ರಾಂಗಣದ ಬಳಿಯ ಸ್ವಂತ ಕಟ್ಟಡಕ್ಕೆ ತಹಶೀಲ್ದಾರ್‌ ಕಚೇರಿ ಸ್ಥಳಾಂತರವಾದರೂ ಭೂಮಿ ಕೇಂದ್ರ, ಕಂದಾಯ ನಿರೀಕ್ಷಕರ ಕಚೇರಿ ಹಾಗೂ ದಾಖಲೆಗಳ ಕೊಠಡಿ ಈ ಹಿಂದೆ ತಹಶೀಲ್ದಾರ್‌ ಕಚೇರಿ ಇದ್ದ ಪಂಚಾಯತ್‌ ನ ಬಾಡಿಗೆ ಕಟ್ಟಡದಲ್ಲಿಯೇ ಉಳಿದಿವೆ. ಭೂಮಾಪನ ಇಲಾಖೆ ಕಚೇರಿಯೂ ಕಡಬ ಪೇಟೆಯ ಬಾಡಿಗೆ ಕೊಠಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಅದರಿಂದಾಗಿ ಕಂದಾಯ ಇಲಾಖೆ ಕೆಲಸ – ಕಾರ್ಯಗಳಿಗೆ ಗ್ರಾಮಗಳಿಂದ ತಾಲೂಕು ಕೇಂದ್ರಕ್ಕೆ ಬರುವ ಜನಕ್ಕೆ ಅಲೆದಾಟ ತಪ್ಪಿಲ್ಲ. ಕಡಬ ಪೇಟೆಯಲ್ಲಿರುವ ಕಂದಾಯ ನಿರೀಕ್ಷಕರ ಕಚೇರಿಯಿಂದ ತಹಶೀಲ್ದಾರ್‌ ಕಚೇರಿಗೆ ಸರಿಸುಮಾರು 1 ಕಿ.ಮೀ. ದೂರವಿದೆ. ಕಂದಾಯ ಇಲಾಖೆಯ ಕೆಲಸವಾಗಬೇಕಿದ್ದರೆ ನೂತನ ತಾಲೂಕಿನ 42 ಗ್ರಾಮಗಳ ಜನತೆ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಅಲೆದಾಡುವುದು ಅನಿವಾರ್ಯ.
10 ಕೋಟಿ ರೂ. ವೆಚ್ಚ
ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ತೆರೆಯಬೇಕು ಎನ್ನುವ ಸರಕಾರದ ಆಶಯದಂತೆ ಕಡಬದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಶಂಕುಸ್ಥಾಪನೆಯೂ ನಡೆದಿದೆ. ಮಿನಿ ವಿಧಾನ ಸೌಧ ನಿರ್ಮಾಣಕ್ಕಾಗಿ ಕಡಬದಲ್ಲಿ ನಿರ್ಮಾಣಗೊಂಡಿರುವ ತಹಶೀಲ್ದಾರ್‌ ಕಚೇರಿ ಬಳಿ ಸರ್ವೆ ನಂಬ್ರ 130/1ಎಪಿ2ರಲ್ಲಿ 1.60 ಎಕರೆ ಜಮೀನು ಕಾದಿರಿಸಲಾಗಿದೆ.
ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದೆ. ಮಿನಿ ವಿಧಾನಸೌಧದಲ್ಲಿ ತೆರೆಯಲಾಗುವ ತಹಶೀಲ್ದಾರರ ಕಚೇರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಶಾಸಕರ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಸರ್ವೆ ಇಲಾಖೆ ಕಚೇರಿ ಹಾಗೂ ಪೀಠೊಪಕರಣಗಳಿಗೆ ಪೂರಕವಾದ ನಕ್ಷೆ ತಯಾರಿಸಿ ತಹಶೀಲ್ದಾರರ ಸಹಿ ಪಡೆದು ರೇಖಾ ಅಂದಾಜುಪಟ್ಟಿಯನ್ನು ತಯಾರಿಸಲಾಗಿದೆ. ಈ ಕಟ್ಟಡ ಬೇಗನೆ ನಿರ್ಮಾಣವಾಗಿ ಅಲೆದಾಟ ತಪ್ಪುವಂತಾಗಬೇಕು ಎಂಬುದು ತಾಲೂಕಿನ ಜನರ ಆಶಯ.
 ಶೀಘ್ರ ಕಾಮಗಾರಿ
ಕಡಬದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇ ಸೂರಿನಡಿಯಲ್ಲಿ ಎಲ್ಲ ಕಚೇರಿಗಳು ಲಭ್ಯವಾಗುವಂತೆ 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಲು ನೂತನ ತಾಲೂಕು ಉದ್ಘಾಟನೆಯ
ಸಂದರ್ಭದಲ್ಲಿಯೇ ಶಂಕು ಸ್ಥಾಪನೆ ನಡೆದಿದೆ. ಕರ್ನಾಟಕ ಗೃಹ ಮಂಡಳಿಯವರು ನಿರ್ಮಾಣ ಕಾಮಗಾರಿ ನಿರ್ವಹಿಸಲಿದ್ದಾರೆ. ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.
– ಜಾನ್‌ಪ್ರಕಾಶ್‌ ರೋಡ್ರಿಗಸ್‌
ಕಡಬ ತಹಶೀಲ್ದಾರ್‌
ಒಂದೇ ಸೂರಿನಡಿ ಬರಲಿ
ಎಲ್ಲ ಕಂದಾಯ ಕಚೇರಿಗಳು ಒಂದೇ ಆವರಣದಲ್ಲಿ ಇದ್ದರೆ ಎಲ್ಲರಿಗೂ ಅನುಕೂಲ. ಇಲ್ಲಿ ದೂರದ ಕಾಣಿಯೂರು, ಚಾರ್ವಾಕ, ಸವಣೂರು ಮುಂತಾದ ಭಾಗಗಳಿಂದ ಬರುವ ಜನರ ಪರದಾಟ ಹೇಳತೀರದು. ತಹಶೀಲ್ದಾರ್‌ ಕಚೇರಿ ಒಂದು ಕಡೆಯಾದರೆ ಕಂದಾಯ ನಿರೀಕ್ಷಕರ ಕಚೇರಿ ಇನ್ನೊಂದು ಕಡೆ. ಒಂದು ಸಣ್ಣ ಕೆಲಸವಾಗಬೇಕಿದ್ದರೆ ದಿನಪೂರ್ತಿ ಅಲೆದಾಟ. ಸಿಬಂದಿ ಕೊರತೆಯಿಂದಾಗಿ ಕೆಲಸ ಕಾರ್ಯಗಳು ನಿಗದಿತ ವೇಗದಲ್ಲಿ ಆಗುತ್ತಿಲ್ಲ. ಎಲ್ಲ ಕಚೇರಿಗಳು ಒಂದೇ ಸೂರಿನಡಿ ಬಂದು ಅಗತ್ಯ ಸಿಬಂದಿ ನೇಮಕವಾದರೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಬಗೆಹರಿಯಬಹುದು.
ಸೀತಾರಾಮ ಗೌಡ ಎ.,
ಕಡಬ
ನಾಗರಾಜ್‌ ಎನ್‌.ಕೆ. 
Advertisement

Udayavani is now on Telegram. Click here to join our channel and stay updated with the latest news.

Next