Advertisement
ಹೊಸಮಠವು ಕಡಬ ಪೇಟೆಯಿಂದ 4 ಕಿ.ಮಿ. ದೂರದಲ್ಲಿದೆ. ಒಂದು ಪಾರ್ಶ್ವದಲ್ಲಿರುವ ಕೇಪು, ಕುಂಟೋಡಿ, ಕಾರ್ಕಳ, ನಂದಗುರಿ, ಹಳೆಸ್ಟೇಶನ್, ಕಾಯರಡ್ಕ ಮುಂತಾದ ಪ್ರದೇಶಗಳು ಸ್ವಲ್ಪಮಟ್ಟಿಗೆ ಅಭಿ ವೃದ್ಧಿಯಾಗಿದ್ದರೂ ಇನ್ನೊಂದು ಭಾಗ ದಲ್ಲಿರುವ ಅಲಾರ್ಮೆ, ಉಳಿಪ್ಪು, ವಾಳ್ಯ, ನಾಡೋಳಿ, ಕೂಡಿಗೆ ಮುಂತಾದ ಪ್ರದೇಶಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ.
Related Articles
Advertisement
ಇಲ್ಲಿ ವೆಂಕಟ್ರಮಣ, ಮಹಾಗಣಪತಿ ಹಾಗೂ ದುರ್ಗಾಪರಮೇಶ್ವರೀ ದೇವಸ್ಥಾನವೂ ಇದೆ. ವಿಮಲಗಿರಿ ಸೈಂಟ್ ಮೇರಿಸ್ ಚರ್ಚ್ ಹಾಗೂ ಕುಟ್ರಾಪ್ಪಾಡಿ ಸೈಂಟ್ ಮೇರಿಸ್ ಚರ್ಚ್ ಕ್ರೈಸ್ತ ಬಾಂಧವರ ಆರಾಧನಾ ಕೇಂದ್ರವಾಗಿದೆ. ಗ್ರಾಮದಲ್ಲಿ 1 ಮಸೀದಿ ಇದೆ.
ರಸ್ತೆ ಅಭಿವೃದ್ಧಿಗೆ ಹಲವು ತೊಡಕು
ಹೊಸಮಠದಿಂದ ವಾಳ್ಯ, ಉಳಿಪ್ಪು, ಕೂಡಿಗೆ ಪ್ರದೇಶವನ್ನು ಸಂಪರ್ಕಿಸುವ ಸುಮಾರು 6 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಯಾಗದ ಹೊರತು ಇಲ್ಲಿನ ಜನರಿಗೆ ಸಮಸ್ಯೆ ತಪ್ಪಿದ್ದಲ್ಲ. ಶಾಸಕ, ಪ್ರಸ್ತುತ ಸಚಿವರಾಗಿರುವ ಎಸ್. ಅಂಗಾರ ಅವರ ಮುತುವರ್ಜಿಯಿಂದ ಸುಮಾರು 2 ಕಿ.ಮೀ. ರಸ್ತೆ ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಯಾಗಿದೆ. ಉಳಿದ 4 ಕಿ.ಮೀ. ಉದ್ದದ ಕಚ್ಛಾ ರಸ್ತೆಯಲ್ಲಿ ಜನರು ಸಂಚರಿಸಲು ಪಡುವ ಪಾಡು ಅಷ್ಟಿಷ್ಟಲ್ಲ.
ಮುಖ್ಯ ಕಚ್ಚಾ ರಸ್ತೆಯಿಂದ ಟಿಸಿಲೊಡೆದು ಗ್ರಾಮದೊಳಗಿನ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಮಣ್ಣಿನ ರಸ್ತೆಗಳಲ್ಲಿ ಸಂಚರಿಸುವುದು ಕೂಡ ಸಾಹಸದ ಕೆಲಸ.
ಈ ರಸ್ತೆ ಯಾವುದೇ ಇತರ ಪ್ರಮುಖ ರಸ್ತೆ ಅಥವಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸದೇ ಹೊಳೆಯ ಬದಿಯಲ್ಲಿ ಕೊನೆ ಯಾಗುವುದರಿಂದ ರಸ್ತೆ ಅಭಿವೃದ್ಧಿಗೆ ಗ್ರಾಮ ಸಡಕ್‌ನಂತಹ ಯೋಜನೆಗಳ ದೊಡ್ಡ ಮೊತ್ತದ ಅನುದಾನ ಲಭಿಸಲು ಸಮಸ್ಯೆ ಇದೆ. ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯ 1 ಕೋಟಿ ರೂ. ಅನುದಾನ ಗ್ರಾಮಕ್ಕೆ ಲಭಿಸಿದ್ದು, ಇತರ ಅನುದಾನಗಳೂ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಮೀನು ಕಾದಿರಿಸಲಾಗಿದ್ದು, ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯ ಅನುದಾನದಲ್ಲಿ ಘಟಕಕ್ಕೆ ಕಟ್ಟಡದ ನಿರ್ಮಾಣವಾಗಲಿದೆ.
ಮುಗಿಯದ ವಿದ್ಯುತ್ ಸಮಸ್ಯೆ
ಅರಣ್ಯದ ನಡುವೆ ವಿದ್ಯುತ್ ಮಾರ್ಗ ಹಾದು ಹೋಗುತ್ತಿರುವುದರಿಂದ ಮರದ ಕೊಂಬೆಗಳು ವಿದ್ಯುತ್ ಲೈನ್‌ನ ಮೇಲೆ ಮುರಿದುಬಿದ್ದು ಪದೇ ಪದೆ ವಿದ್ಯುತ್ ಸಮಸ್ಯೆ ಕಾಡುತ್ತಿರುತ್ತದೆ. ಮಳೆಗಾಲದಲ್ಲಂತೂ ಮತ್ತೆ ವಿದ್ಯುತ್ ಸಂಪರ್ಕ ನೀಡಬೇಕಿದ್ದರೆ 3-4 ದಿನಗಳೇ ಬೇಕಾಗುತ್ತದೆ.
ಭೂಮಿಯ ಹಕ್ಕುಪತ್ರ ಪಡೆಯಲೂ ಸಮಸ್ಯೆ
ಇಲ್ಲಿ ಜನವಸತಿ ಪ್ರದೇಶಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಇರುವುದರಿಂದ 94 ಸಿ ಹಾಗೂ ಅಕ್ರಮ ಸಕ್ರಮ ಮೂಲಕ ಭೂಮಿಯ ಹಕ್ಕುಪತ್ರ ಪಡೆಯುವ ಅವಕಾಶದಿಂದಲೂ ಹೆಚ್ಚಿನ ಜನರು ವಂಚಿತರಾಗಿದ್ದಾರೆ. ಅರಣ್ಯ ಇಲಾಖೆಯ ಆಕ್ಷೇಪಣೆಯಿಂದಾಗಿ ಬಹುತೇಕ ಕಡತಗಳು ವಿಲೇವಾರಿಯಾಗದೆ ಕಂದಾಯ ಕಚೇರಿಯಲ್ಲಿಯೇ ಬಾಕಿಯಾಗಿವೆ.
ಕಾಡುವ ಮೊಬೈಲ್ ನೆಟ್‌ವರ್ಕ್ ಸಮಸ್ಯೆ: ವಾಳ್ಯ, ಉಳಿಪ್ಪು, ಬೈತನೆ, ನಾಡೋಳಿ, ಕಂಪತಡ್ಡ, ಕೂಡಿಗೆ ಮುಂತಾದ ಪ್ರದೇಶಗಳ ಸುಮಾರು 130 ಮನೆಗಳಿಗೆ ಮೊಬೈಲ್ ನೆಟ್‌ವರ್ಕ್ ಇಲ್ಲವೇ ಇಲ್ಲ. ಅದರಿಂದಾಗಿ ಇಲ್ಲಿನ ಮಕ್ಕಳು ಆನ್‌ಲೈನ್ ತರಗತಿಗಳಿಂದಲೂ ವಂಚಿತರಾಗಿದ್ದರು. ಮೊಬೈಲ್ ನೆಟ್‌ವರ್ಕ್ ಇಲ್ಲದೇ ಇರುವುದರಿಂದ ಆರೋಗ್ಯ ಸಮಸ್ಯೆ ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಹೊರ ಪ್ರಪಂಚವನ್ನು ಸಂಪರ್ಕಿಸಲು ಇಲ್ಲಿನ ಜನರಿಗೆ ಸಾಧ್ಯ ಆಗುತ್ತಿಲ್ಲ.
ಅನುದಾನಕ್ಕಾಗಿ ಬೇಡಿಕೆ: ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್. ಅಂಗಾರ ಅವರ ಮುತುವರ್ಜಿಯಿಂದ ಹೆಚ್ಚಿನ ಅನುದಾನಗಳು ಗ್ರಾಮದ ಅಭಿವೃದ್ಧಿಗೆ ಲಭಿಸಿದೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದ್ದು, ಅದಕ್ಕಾಗಿ ಅನುದಾನಕ್ಕಾಗಿ ಬೇಡಿಕೆ ಇರಿಸಲಾಗಿದೆ. –ಮೋಹನ ಗೌಡ ಕೆರೆಕೋಡಿ, ಅಧ್ಯಕ್ಷರು, ಕುಟ್ರಾಪ್ಪಾಡಿ ಗ್ರಾಮ ಪಂಚಾಯತ್
ರಸ್ತೆ ಅಭಿವೃದಿ ಪಡಿಸಿ: ಕೃಷಿ ಪ್ರಧಾನವಾಗಿರುವ ನಮ್ಮ ಗ್ರಾಮದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಮುಖ್ಯವಾಗಿ ಗ್ರಾಮದ ಹೊಸಮಠದಿಂದ ವಾಳ್ಯ, ಉಳಿಪ್ಪು, ಕೂಡಿಗೆ ಪ್ರದೇಶವನ್ನು ಸಂಪರ್ಕಿಸುವ ರಸ್ತೆಯನ್ನು ಶೀಘ್ರ ಅಭಿವೃದ್ಧಿಪಡಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. – ಎಲ್ಸಿ ಥಾಮಸ್ ಉಳಿಪ್ಪು, ಸಾಮಾಜಿಕ ಕಾರ್ಯಕರ್ತೆ
-ನಾಗರಾಜ್ ಎನ್.ಕೆ.