ಕಡಬ: ಕಡಬದ ಕೆರೆಯ ಸಮೀಪ ಗೃಹರಕ್ಷಕ ದಳದ ಕಡಬ ಘಟಕದ ಕಚೇರಿ ನಿರ್ಮಾಣಕ್ಕಾಗಿ ಕಾದಿರಿಸಲಾಗಿದ್ದ ಜಮೀನನ್ನು ಸ್ಥಳೀಯ ವ್ಯಕ್ತಿ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿದ್ದಾರೆಂದು ಆರೋಪಿಸಿ ಗೃಹರಕ್ಷಕ ದಳದ ಕಡಬ ಘಟಕಾಧಿಕಾರಿ ತೀರ್ಥೇಶ್ ಅಮೈ ಅವರು ಕಡಬ ತಹಶೀಲ್ದಾರ್ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.
2004ರಲ್ಲಿ ಆಗಿನ ಪುತ್ತೂರು ಸಹಾಯಕ ಆಯುಕ್ತರು 5 ಸೆಂಟ್ಸ್ ಜಾಗವನ್ನು ಗೃಹರಕ್ಷಕ ದಳದ ಕಡಬ ಘಟಕಕ್ಕೆ ಕಚೇರಿ ನಿರ್ಮಿಸಲು ಮೀಸಲಿಟ್ಟಿರುತ್ತಾರೆ. ಆದರೆ ಕೆಲವು ದಿನಗಳ ಹಿಂದೆ ನಮಗೆ ಕಾದಿರಿಸಿದ ಜಮೀನಿನ ಪಕ್ಕದಲ್ಲಿರುವ ಸಾರ್ವಜನಿಕ ಕೆರೆಯ ಅಳತೆ ಕಾರ್ಯ ಸರ್ವೇ ಇಲಾಖೆಯವರಿಂದ ನಡೆದಾಗ ನಮಗೆ ಕಾದಿರಿಸಿದ ಜಾಗ ಅತಿಕ್ರಮಣವಾಗಿರುವುದು ಬೆಳಕಿಗೆ ಬಂದಿದೆ. ನಮಗೆ ಕಚೇರಿ ನಿರ್ಮಿಸಲು ಕಾದಿರಿಸಿದ ಜಾಗದಲ್ಲಿಯೇ ಕರುಣಾಕರ ರೈ ಎಂಬವರು ಅಕ್ರಮವಾಗಿ ಒತ್ತುವರಿ ಮಾಡಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡಿರುತ್ತಾರೆ. ಆದುದರಿಂದ ಕೂಡಲೇ ಗೃಹರಕ್ಷಕ ದಳದ ಕಚೇರಿಗೆ ಮೀಸಲಿಟ್ಟ ಜಾಗದಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡವನ್ನು ತೆರವುಗೊಳಿಸಿ ಜಾಗವನ್ನು ನಮಗೆ ಕೊಡಿಸಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಗೃಹರಕ್ಷಕದಳದ ಕಚೇರಿಗೆ ಮೀಸಲಿಟ್ಟ ಜಮೀನನ್ನು ಖಾಸಗಿ ವ್ಯಕ್ತಿ ಆತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿದ್ದಾರೆ. ನಮಗೆ 5 ಸೆಂಟ್ಸ್ ಜಾಗ ಮಂಜೂರಾಗಿರುವ ಬಗ್ಗೆ ಎಲ್ಲಾ ದಾಖಲೆಗಳು ನಮ್ಮಲ್ಲಿವೆ. ಅತಿಕ್ರಮಣ ಮಾಡಿರುವ ವ್ಯಕ್ತಿ ಜಮೀನನ್ನು ಸಮತಟ್ಟು ಮಾಡಿ ನಮ್ಮ ಜಮೀನಿನ ಗಡಿ ಗುರುತುಗಳನ್ನು ನಾಶ ಮಾಡಿ ನಮಗೆ ಸೇರಿದ ಜಮೀನಿನಲ್ಲಿಯೇ ಬೃಹತ್ ಕಟ್ಟಡ ನಿರ್ಮಿಸಿರುವುದು ಬೆಳಕಿಗೆ ಬಂದಿದೆ. ಅತಿಕ್ರಮಣದ ವಿಚಾರದಲ್ಲಿ ಸರಕಾರಿ ಅಧಿಕಾರಿಗಳು ಸೇರಿದಂತೆ ಯಾರೇ ಶಾಮೀಲಾಗಿದ್ದರೂ ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ಕಟ್ಟಡವನ್ನು ತೆರವುಗೊಳಿಸಿ ನಮಗೆ ಸೇರಿದ ಜಮೀನನ್ನು ಬಿಟ್ಟುಕೊಡಬೇಕು. ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು.
-ಡಾ|ಮುರಳಿಕೃಷ್ಣ ಚೂಂತಾರು, ಗೃಹರಕ್ಷಕ ದಳದ ದ.ಕ. ಜಿಲ್ಲಾ ಕಮಾಂಡೆಂಟ್.