Advertisement

ಕಡಬ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು, ಸಿಬಂದಿ ಕೊರತೆ

09:35 PM Sep 22, 2019 | Sriram |

ಕಡಬ: ನೂತನ ಕಡಬ ತಾಲೂಕಿನ ಉದ್ಘಾಟನೆಯೊಂದಿಗೆ 4.85 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಕಡಬ ಸಮುದಾಯ ಆಸ್ಪತ್ರೆಯ ಕಟ್ಟಡ ಉದ್ಘಾಟನೆಗೊಂಡು 7 ತಿಂಗಳು ಕಳೆದವು. ಆದರೆ ಇಲ್ಲಿ ಅಗತ್ಯ ಸಂಖ್ಯೆಯ ವೈದ್ಯರು ಹಾಗೂ ಸಿಬಂದಿಯಿಲ್ಲದೆ ಬಡ ರೋಗಿಗಳು ಪರದಾಡುವಂತಾಗಿದೆ. ಈ ಕುರಿತು ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

Advertisement

ಕಡಬ ಸಮುದಾಯ ಆಸ್ಪತ್ರೆಗೆ ಪ್ರಸೂತಿ, ಶಿಶು ತಜ್ಞರ ಸಹಿತ ನಾಲ್ವರು ವೈದ್ಯಾಧಿಕಾರಿಗಳು, ಓರ್ವ ದಂತ ವೈದ್ಯರು ಹೀಗೆ ಒಟ್ಟು 34 ಹುದ್ದೆಗಳು ಮಂಜೂರಾಗಿವೆ. ಆದರೆ ಇಲ್ಲಿ ಓರ್ವ ವೈದ್ಯರೇ ಇದ್ದು, ಇನ್ನಷ್ಟು ವೈದ್ಯರ ಹಾಗೂ ಫಾರ್ಮಾಸಿಸ್ಟ್‌ ನೇಮ ಕಾತಿಯಾಗದೇ ಬಡ ರೋಗಿಗಳಿಗೆ ತೀರಾ ತೊಂದರೆಯಾಗಿದೆ. ಇರುವ ಒಬ್ಬರೇ ವೈದ್ಯರು ನಿತ್ಯ 400ಕ್ಕೂ ಹೆಚ್ಚು ಹೊರ ರೋಗಿಗಳನ್ನು ಪರೀಕ್ಷಿಸಿ, ಚಿಕಿತ್ಸೆ ನೀಡುವ ಸವಾಲು ಎದುರಿಸಬೇಕಾಗಿದೆ.

ಕೂಡಲೇ ಈ ಆಸ್ಪತ್ರೆಗೆ ಅಗತ್ಯ ತಜ್ಞ ವೈದ್ಯರು ಹಾಗೂ ಸಿಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಮುಖಂಡ ಗಿರೀಶ್‌ ಗೌಡ ಕೊರುಂದೂರು ಅವರು ಕರ್ನಾಟಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

8 ಗ್ರಾಮಗಳ ವ್ಯಾಪ್ತಿ
ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಹೀಗೆ 8 ಗ್ರಾಮಗಳ ವ್ಯಾಪ್ತಿಯನ್ನು ಈ ಆಸ್ಪತ್ರೆ ಹೊಂದಿದೆ. ಆದರೆ ಹತ್ತಿರದ ಕುಂತೂರು, ಆಲಂಕಾರು, ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಕಾಣಿಯೂರು, ಚಾರ್ವಾಕ, ಸುಬ್ರಹ್ಮಣ್ಯ, ಪಂಜ, ಏನೆಕಲ್‌, ಬಳ್ಪ, ಕೇನ್ಯ, ಎಡಮಂಗಲ ಪ್ರದೇಶದ ಜನರೂ ಇದೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿರುವುದರಿಂದ ವ್ಯಾಪ್ತಿ ವಿಸ್ತರಿಸಿದೆ.

ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ
ಕಡಬ ಸಮುದಾಯ ಆಸ್ಪತ್ರೆಗೆ ಹೆಚ್ಚುವರಿ ವೈದ್ಯರನ್ನು ನೇಮಿಸುವಂತೆ ಸಂಬಂಧಪಟ್ಟವರಿಗೆ ಒತ್ತಡ ಹೇರಲಾಗಿದೆ. ಖಾಲಿ ಇರುವ ಫಾರ್ಮಾಸಿಸ್ಟ್‌ ಹಾಗೂ ಲ್ಯಾಬ್‌ ಟೆಕ್ನೀಶಿಯನ್‌ ಹುದ್ದೆಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಮಾಡಲಾಗಿದೆ.
– ಪಿ.ಪಿ. ವರ್ಗೀಸ್‌ , ಜಿ.ಪಂ. ಸದಸ್ಯ

Advertisement

ಟೆಂಡರ್‌ ಕರೆಯಲಾಗಿದೆ
ಸಮುದಾಯ ಆಸ್ಪತ್ರೆಗೆ ಅಗತ್ಯ ಸಲಕರಣೆ, ಸವಲತ್ತುಗಳ ಒದಗಣೆ, ತಜ್ಞ ವೈದರು, ಸಿಬಂದಿ ನೇಮಕ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಡಬದಲ್ಲಿರುವ ವೈದ್ಯಾಧಿಕಾರಿಗೆ ಕೊçಲ ಆಸ್ಪತ್ರೆಗೆ ವರ್ಗಾವಣೆಯಾಗಿದ್ದರೂ ಜನರ ಹಿತದೃಷ್ಟಿಯಿಂದ ಅವರನ್ನು ಬಿಡುಗಡೆಗೊಳಿಸಿಲ್ಲ. ಸುಬ್ರಹ್ಮಣ್ಯದ ವೈದ್ಯರನ್ನು ವಾರದಲ್ಲಿ 2 ದಿನ ಕಡಬಕ್ಕೆ ನಿಯೋಜಿಸಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಫಾರ್ಮಾಸಿಸ್ಟ್‌ ಹಾಗೂ ಲ್ಯಾಬ್‌ ಟೆಕ್ನೀಶಿಯನ್‌ ನೇಮಕಾತಿಗೆ ಟೆಂಡರ್‌ ಕರೆಯಲಾಗಿದ್ದು, ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಖಾಲಿ ಇರುವ ಆ ಹುದ್ದೆಗಳನ್ನು ತುಂಬಲಾಗುವುದು.
– ಡಾ| ರಾಮಕೃಷ್ಣ ರಾವ್‌, ಜಿಲ್ಲಾ ಆರೋಗ್ಯಾಧಿಕಾರಿ

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next