Advertisement

ಕಡಬ: ಹರಡುತ್ತಿದೆ ಶಂಕಿತ ಡೆಂಗ್ಯೂ ಜ್ವರ

10:41 PM Jun 06, 2019 | mahesh |

ಕಡಬ: ಒಂದು ತಿಂಗಳಿನಿಂದ ಕಡಬದ ನೂಜಿಬಾಳ್ತಿಲ, ರೆಂಜಿಲಾಡಿ, 102 ನೆಕ್ಕಿಲಾಡಿ ಹಾಗೂ ಕೋಡಿಂಬಾಳ ಗ್ರಾಮದ ಕೆಲವು ಪ್ರದೇಶಗಳಲ್ಲಿ ಹಲವರು ಶಂಕಿತ ಡೆಂಗ್ಯೂ ಜ್ವರದಿಂದ ಪೀಡಿತರಾಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ಭೀತಿ ಹಾಗೂ ಆತಂಕದ ವಾತಾವರಣ ಈಗ ನಿರ್ಮಾಣವಾಗಿದೆ.

Advertisement

ಆರೋಗ್ಯ ಇಲಾಖೆಯ ಸಿಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಜ್ವರಪೀಡಿತ ಪ್ರದೇಶಗಳಲ್ಲಿ ಮನೆ ಮನೆ ಭೇಟಿ ಮಾಡಿ, ಮಾಹಿತಿ ಸಂಗ್ರಹಿಸಿ, ಜ್ವರ ಪೀಡಿತರ ಚಿಕಿತ್ಸೆಗೆ ಮಾರ್ಗದರ್ಶನ ನೀಡುವ ಮೂಲಕ ಜ್ವರದ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೋಡಿಂಬಾಳದ ಪಾಲಪ್ಪೆ, ಮುಳಿಯ, ಕೊಠಾರಿ, ಉದೇರಿ, ನೆಲ್ಲಿಪಡ್ಡು, ಕುಕ್ಕೆರೆಬೆಟ್ಟು ಪ್ರದೇಶಗಳ 50 ಮನೆಗಳಲ್ಲಿ ಬಹುತೇಕ ಎಲ್ಲರೂ ಜ್ವರದ ಬಾಧೆಗೆ ಒಳಗಾಗಿದ್ದಾರೆ. ಕೆಲವು ರೋಗಿಗಳು ಮಂಗಳೂರು ಹಾಗೂ ಪುತ್ತೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ವರ್ಷ ಇದೇ ಸಮಯದಲ್ಲಿ ಕೋಡಿಂಬಾಳದ ಮಜ್ಜಾರು, ಮಡ್ಯಡ್ಕ ಪ್ರದೇಶಗಳಲ್ಲಿ ಜ್ವರ ಕಾಣಿಸಿಕೊಂಡಿತ್ತು. ಅದಕ್ಕೂ ಹಿಂದಿನ ವರ್ಷ ಕಡಬ ವ್ಯಾಪ್ತಿಯ ನೂಜಿಬಾಳ್ತಿಲ, ಮೀನಾಡಿ, ಕಲ್ಲುಗುಡ್ಡೆ, ಕೋಡಿಂಬಾಳ, ಹೊಸ್ಮಠ, ಮರ್ದಾಳ, ಐತ್ತೂರು ಪ್ರದೇಶಗಳಲ್ಲಿ ಹೆಚ್ಚಿನ ಜನರು ಶಂಕಿತ ಡೆಂಗ್ಯೂ ಜ್ವರದ ಬಾಧೆಗೊಳಗಾಗಿದ್ದರು. ಕಡಬ ಸರಕಾರಿ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಈ ಬಾರಿ ಡೆಂಗ್ಯೂ ಜ್ವರದ 5 ಪ್ರಕರಣಗಳು ದೃಢಪಟ್ಟಿವೆ. ಖಾಸಗಿ ಪ್ರಯೋಗಾಲಯಗಳ ವರದಿಯ ಪ್ರಕಾರ ಎರಡು ತಿಂಗಳ ಅವಧಿಯಲ್ಲಿ 100ಕ್ಕೂ ಹೆಚ್ಚು ಮಂದಿ ಶಂಕಿತ ಡೆಂಗ್ಯೂ ಜ್ವರ ಪೀಡಿತರು ಕಡಬ ಪರಿಸರದಲ್ಲಿ ಪತ್ತೆಯಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಡಿಂಬಾಳದ ಉದೇರಿ ನಾರಾಯಣ ಗೌಡರ ಪತ್ನಿ ರತ್ನಾವತಿ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದಾರೆ. ಉದೇರಿಯ ಶ್ರೀಧರ ಗೌಡ ಹಾಗೂ ಮುತ್ತಪ್ಪ ಗೌಡ ಅವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕುಕ್ಕರೆಬೆಟ್ಟುವಿನ ಪುಷ್ಪಾವತಿ ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಪಾಲಪ್ಪೆಯ ವೀಣಾ, ಮಡ್ಯಡ್ಕದ ಇಕ್ಬಾಲ್‌, ಕೊಠಾರಿಯ ಪ್ರತಿಭಾ, ಕಿಟ್ಟಮ್ಮ, ಉದೇರಿಯ ಗಣೇಶ್‌ ವಿವಿಧ ಚಿಕಿತ್ಸಾಲಯಗಳ ಮೊರೆಹೋಗಿದ್ದಾರೆ.

ಘನ ತ್ಯಾಜ್ಯ ವಿಲೇವಾರಿ ಘಟಕದ ಪರಿಸರದಲ್ಲಿ ಹೆಚ್ಚು
ಕಡಬ ಗ್ರಾ.ಪಂ.ನ ಘನ ತ್ಯಾಜ್ಯ ವಿಲೇವಾರಿ ಘಟಕ ಇರುವ ಕೋಡಿಂಬಾಳ ಗ್ರಾಮದ ಕಕ್ಕೆತ್ತಿಮಾರು ಆಸುಪಾಸಿನ ಪ್ರದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜ್ವರ ಬಾಧಿತರಿದ್ದು, ತ್ಯಾಜ್ಯ ಘಟಕದಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ನಡೆಯದೆ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡಲು ಕಾರಣವಾಗುತ್ತಿವೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಈ ಕುರಿತು ಆರೋಗ್ಯ ಇಲಾಖಾಧಿಕಾರಿಗಳು ಹಾಗೂ ಪಂಚಾಯತ್‌ ಆಡಳಿತ ಗಮನಹರಿಸುವ ಅಗತ್ಯವಿದೆ.

ಆತಂಕ ಬೇಡ
ಕಡಬದ ನೂಜಿಬಾಳ್ತಿಲ, ರೆಂಜಿಲಾಡಿ, 102 ನೆಕ್ಕಿಲಾಡಿ ಹಾಗೂ ಕೋಡಿಂಬಾಳ ಗ್ರಾಮಗಳಲ್ಲಿ ಶಂಕಿತ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಕೋಡಿಂಬಾಳ ಪರಿಸರದಲ್ಲಿ ತುಸು ಜಾಸ್ತಿಯೇ ಇದೆ. ರೋಗಿಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ರಕ್ತದ ಮಾದರಿಗಳ ಪೈಕಿ ಕಡಬ ಸಮುದಾಯ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಒಟ್ಟು 5 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಜ್ವರದ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಜನರು ಆತಂಕಪಡಬೇಕಿಲ್ಲ. ಜ್ವರಪೀಡಿತ ಪ್ರದೇಶಗಳಲ್ಲಿ ಫಾಗಿಂಗ್‌ ನಡೆಸಿ, ಜಾಗೃತಿ ಕರಪತ್ರಗಳನ್ನು ಹಂಚಲಾಗುತ್ತಿದೆ.
-ಡಾ| ಸುಚಿತ್ರಾ ರಾವ್‌ , ವೈದ್ಯಾಧಿಕಾರಿ, ಕಡಬ ಸರಕಾರಿ ಆಸ್ಪತ್ರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next