Advertisement

ಕಡಬ: 16 ಕಡೆ ಸಿಸಿ ಕೆಮರಾ; ಸಾರ್ವಜನಿಕರ ಸುರಕ್ಷತೆಗೆ ವರದಾನ

11:09 PM Dec 15, 2019 | Sriram |

ಕಡಬ: ತಾಲೂಕು ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಕಡಬ ಪೇಟೆಯಲ್ಲಿ ಈ ಹಿಂದೆ ಅಳವಡಿಸಲಾಗಿದ್ದ ಸಿ.ಸಿ. ಕೆಮರಾಗಳು ಕೆಟ್ಟು ಹೋಗಿದ್ದು, ಮೂರು ವರ್ಷಗಳ ಬಳಿಕ ಪೊಲೀಸ್‌ ಇಲಾಖೆ ಹೊಸದಾಗಿ ಇನ್ನಷ್ಟು ಹೆಚ್ಚು ಸಾಮರ್ಥ್ಯದ ಸಿ.ಸಿ. ಕೆಮರಾಗಳನ್ನು ಅಳವಡಿಸುವ ಮೂಲಕ ಕಳ್ಳಕಾಕರ ದುಷ್ಕೃತ್ಯ ಗಳಿಗೆ ಕಡಿವಾಣ ಹಾಕಿ, ಸಾರ್ವಜನಿಕರಿಗೆ ಸುರಕ್ಷತೆಯ ಭರವಸೆ ಮೂಡಿಸಿದೆ.

Advertisement

ರಾಜ್ಯ ಪೊಲೀಸ್‌ ಆಯುಕ್ತರ ಆದೇಶದಂತೆ ರಾಜ್ಯದ ಪ್ರಮುಖ ಪಟ್ಟಣಗಳು, ವಿವಿಧ ಕಾರಣಗಳಿಂದಾಗಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿ ಸಲಾಗಿರುವ ಭಾಗಗಳು ಹಾಗೂ ಜನ ಸಂದಣಿಯ ಪ್ರದೇಶಗಳಲ್ಲಿ ಸಿ.ಸಿ. ಕೆಮರಾ ಅಳವಡಿಸಲಾಗುತ್ತಿದೆ. ಕಡಬ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಬರುವ ಪೇಟೆಗಳಲ್ಲಿಯೂ ಸಿ.ಸಿ. ಕೆಮರಾ ಅಳ ವಡಿಸಲಾಗಿದೆ. ಹಿಂದೆ ಠಾಣೆಯಲ್ಲಿ ಉಪ ನಿರೀಕ್ಷಕರಾಗಿದ್ದ ಯೋಗೀಶ್‌ ಕುಮಾರ್‌ ಅವರು ಕಡಬ ಪೇಟೆಯಲ್ಲಿ ಸರಣಿ ಕಳ್ಳತನ ನಡೆದಾಗ ದಾನಿಗಳ ನೆರವಿನಿಂದ ಠಾಣಾ ಸನಿಹದಲ್ಲಿ, ಕಡಬ ಪೇಟೆಯ ಆಯಕಟ್ಟಿನ ಜಾಗಗಳಲ್ಲಿ ಸಿ.ಸಿ. ಕೆಮರಾ ಅಳವಡಿಸಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದರು. ಅವರು ಪದೋನ್ನತಿ ಪಡೆದು ವರ್ಗಾವಣೆಗೊಂಡ ಬಳಿಕ ಕೆಟ್ಟು ಹೋದ ಕೆಮರಾಗಳನ್ನು ದುರಸ್ತಿಪಡಿಸಲು ಯಾರೂ ಆಸಕ್ತಿ ತೋರಿರಲಿಲ್ಲ. ಇದೀಗ ಸರಕಾರವೇ ಹೊಸದಾಗಿ ಕೆಮರಾ ಅಳ ವಡಿಸಿರುವುದರಿಂದ ಇಡೀ ಪೇಟೆಯ ಚಲನ ವಲನಗಳನ್ನು ಪೊಲೀಸ್‌ ಠಾಣೆಯಲ್ಲಿಯೇ ಕುಳಿತು ವೀಕ್ಷಣೆ ಮಾಡುವಂತಾಗಿದೆ.

ಆದ್ಯತೆ ಮೇರೆಗೆ ಅಳವಡಿಕೆ
ಪ್ರಥಮ ಹಂತವಾಗಿ ಅತ್ಯಾವಶ್ಯಕ ಎನ್ನುವ ಪ್ರದೇಶದಲ್ಲಿ ಆದ್ಯತೆ ಮೇರೆಗೆ ಕೆಮರಾ ಅಳವಡಿಸಲಾಗುತ್ತಿದೆ. ಕಡಬ ಪೇಟೆಯ ಪಂಜ ಕ್ರಾಸ್‌ ಬಳಿ ವಿವಿಧ ಕೋನಗಳಲ್ಲಿ 6 ಕೆಮರಾ ಅಳವಡಿಸಿದ್ದಾರೆ. ಠಾಣಾ ವಠಾರದಲ್ಲಿ 4 ಕೆಮರಾಗಳಿವೆ. ಮರ್ದಾಳ ಪೇಟೆ ಹಾಗೂ ಆಲಂಕಾರು ಪೇಟೆ ಯಲ್ಲಿ ಕೆಮರಾ ಅಳವಡಿಸಲಾಗಿದ್ದು, ಅವುಗಳು ಕಾರ್ಯನಿರ್ವಹಿಸುತ್ತಿವೆ. ಮರ್ದಾಳದಲ್ಲಿ ಗ್ರಾ.ಪಂ. ಕಚೇರಿಯಲ್ಲಿ ಹಾಗೂ ಆಲಂಕಾರಿನಲ್ಲಿ ಸಿ.ಎ. ಬ್ಯಾಂಕ್‌ ಕಚೇರಿ ಯಲ್ಲಿ ಕೆಮರಾಗಳ ಡಾಟಾ ಸಂಗ್ರಹದ ಪರಿಕರಗಳನ್ನು ಜೋಡಿಸಲಾಗಿದೆ.

ಆಲಂಕಾರು ಪೇಟೆ ಕೂಡಾ ಶಾಂತಿಮೊಗೇರು ಸೇತುವೆಯಾದ ಬಳಿಕ ಹೆಚ್ಚಿದ ವಾಹನ ಓಡಾಟದಿಂದಾಗಿ ಜನದಟ್ಟಣೆಯ ಪ್ರದೇಶವಾಗಿದೆ.

ಮರ್ದಾಳ ಪೇಟೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಹಾಗೂ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಒಂದುಗೂಡುವ ಕಾರಣದಿಂದಾಗಿ ಪ್ರಾಮುಖ್ಯ ಪಡೆದುಕೊಂಡಿದೆ. ಮುಖ್ಯವಾಗಿ ಕಳ್ಳತನ, ಮೋಟಾರು ವಾಹನ ಕಾಯ್ದೆ ಉಲ್ಲಂಘನೆ, ಅಕ್ರಮ ಮರಳು ಸಾಗಾಟ, ಅಕ್ರಮ ಗೋ ಸಾಗಾಟ ಮುಂತಾದ ಕಾನೂನುಬಾಹಿರ ಕೃತ್ಯಗಳನ್ನು ನಿಯಂತ್ರಿಸುವಲ್ಲಿ ಮತ್ತು ಶೀಘ್ರದಲ್ಲಿ ಪತ್ತೆ ಹಚ್ಚುವಲ್ಲಿ ಈ ಕೆಮರಾಗಳು ಪೊಲೀಸರಿಗೆ ತುಂಬಾ ಸಹಕಾರಿಯಾಗಿವೆ.

Advertisement

ನೋಂದಣಿ ಸಂಖ್ಯೆಯೂ ಪತ್ತೆ!
ರಸ್ತೆಯಲ್ಲಿ ಚಲಿಸುವ ವಾಹನಗಳ ನೋಂದಣಿ ಸಂಖ್ಯೆಗಳನ್ನು ಈ ಕೆಮರಾಗಳ ಮೂಲಕ ಕಂಡುಹಿಡಿಯಲು ಸಾಧ್ಯವಿದೆ. ಇದೀಗ ಮೋಟಾರು ವಾಹನ ಕಾಯ್ದೆ ಕಠಿನವಾಗಿರುವುದರಿಂದ ಹೆಲ್ಮೆಟ್‌ ಧರಿಸದೆ ಓಡಾಟ ಮಾಡುವ ದ್ವಿಚಕ್ರ ವಾಹನ ಸವಾರರು ಪೊಲೀಸರ ಕಣ್ಣು ತಪ್ಪಿಸಿದರೂ ಸಿ.ಸಿ. ಕೆಮರಾ ಗಮನ ಹರಿಸಲಿದೆೆ. ಈ ವಿಚಾರ ತಿಳಿದ ಬಹುತೇಕ ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಇದ್ದಾರೆ.

ಬರಲಿವೆ ಇನ್ನಷ್ಟು ಸಿ.ಸಿ. ಕೆಮರಾ
ಕಡಬ ಠಾಣೆಯ ವ್ಯಾಪ್ತಿಗೆ ಬರುವ ರಾಮಕುಂಜ, ಆತೂರು, ಕೊçಲ ಹಾಗೂ ಕಡಬ ಪೇಟೆಯ ಕಾಲೇಜು ಕ್ರಾಸ್‌ ಬಳಿ ಶೀಘ್ರ ಸಿ.ಸಿ. ಕೆಮರಾ ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಹೊಸದಾಗಿ ಬೆಳ್ಳಾರೆ ಪೊಲೀಸ್‌ ಠಾಣೆ ಆರಂಭವಾಗುವ ಮೊದಲು ಕಡಬ ಪೊಲೀಸ್‌ ಠಾಣೆ 26 ಗ್ರಾಮಗಳ ವಿಶಾಲ ಭೌಗೋಳಿಕ ಪ್ರದೇಶವನ್ನು ಹೊಂದಿತ್ತು. ಪ್ರಸ್ತುತ ಕಡಬ, ಚಾರ್ವಾಕ, ಬಲ್ಯ, ನೂಜಿಬಾಳ್ತಿಲ, ಕೊçಲ, 102ನೇ ನೆಕ್ಕಿಲಾಡಿ, ಬಂಟ್ರ, ಹಳೆನೇರೆಂಕಿ, ರಾಮಕುಂಜ, ಐತ್ತೂರು, ಕುಂತೂರು, ಪೆರಾಬೆ, ದೋಳ್ಪಾಡಿ, ಆಲಂಕಾರು, ಕೋಡಿಂಬಾಳ, ಕುಟ್ರಾಪ್ಪಾಡಿ, ಬಿಳಿನೆಲೆ, ಕೊಂಬಾರು ಹೀಗೆ ಒಟ್ಟು 18 ಗ್ರಾಮಗಳು ಕಡಬ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಬರುತ್ತಿದೆ. ಈ ಎಲ್ಲ ಗ್ರಾಮಗಳಲ್ಲಿಯೂ ಸಿ.ಸಿ. ಕೆಮರಾ ಅಳವಡಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿದೆ.

ಪತ್ತೆಗೆ ಸಹಕಾರಿ
ಸಿಸಿ ಕೆಮರಾಗಳನ್ನು ಅಳವಡಿಸಿರುವುದರಿಂದ ಪೊಲೀಸರಿಗೆ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚಲು ಸುಲಭವಾಗುತ್ತದೆ. ಮುಖ್ಯವಾಗಿ ಕಳ್ಳತನದ ಆರೋಪಿಗಳನ್ನು ಹಿಡಿಯಲು ಅನುಕೂಲವಾಗುತ್ತದೆ. ಮಂದೆ ಹಂತ ಹಂತವಾಗಿ ಠಾಣೆ ವ್ಯಾಪ್ತಿಯ ಎಲ್ಲ ಪ್ರಮುಖ ಭಾಗಗಳಲ್ಲಿ ಸಿ.ಸಿ. ಕೆಮರಾ ಅಳವಡಿಸಲಾಗುತ್ತದೆ.
– ರುಕ್ಮ ನಾಯ್ಕ , ಕಡಬ ಎಸ್‌ಐ

-ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next