ಗಂಗಾವತಿ: 70 ದಶಕದಲ್ಲಿ ಆಹಾರಧಾನ್ಯಗಳ ಕೊರತೆಯ ಪರಿಣಾಮ ರಸಾಯನಿಕ ಗೊಬ್ಬರ,ಕ್ರಿಮಿನಾಶಕಗಳು ಮತ್ತು ಹೈಬ್ರೀಡ್ ಬೀಜ ತಳಿಗಳ ಬಳಕೆಯಿಂದಾಗಿ ಆಹಾರ ಧಾನ್ಯಗಳ ಉತ್ಪನ್ನ ಹೆಚ್ಚಳವಾಗಿದ್ದು ಇದರ ಪರಿಣಾಮ ಮನುಷ್ಯ ಮತ್ತು ಇತರೆ ಪ್ರಾಣಿಗಳ ದೇಹದಲ್ಲಿ ಶೇ.27 ರಷ್ಟು ವಿಷ ಸೇರ್ಪಡೆಯಾಗಿದ್ದು ಇದು ಅತ್ಯಂತಬ ಕಳವಳಕಾರಿಯಾಗಿದೆ ಎಂದು ಕನ್ಹೇರಿ ಸಿದ್ದಿಗಿರಿ ಸಂಸ್ಥಾನಮಠದ ಅದೃಶ್ಯ ಕಾಡಾಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಅವರು ಆನೆಗೊಂದಿ ವಾಲೀಕಿಲ್ಲಾ ಆದಿಶಕ್ತಿ ದೇಗುಲದ ದುರ್ಗಾಮಾತಾ ಗೋಶಾಲಾ ಟ್ರಸ್ಟ್ ಹಮ್ಮಿಕೊಂಡಿದ್ದ ಸಾವಯವ ಕೃಷಿ ಮತ್ತು ದೇಶಿ ಗೋ ತಳಿಗಳ ಸಂವರ್ಧನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿಯಲ್ಲಿ ರಸಾಯನಿಕ ಬಳಕೆಯ ಪರಿಣಾಮ ಮನುಷ್ಯನಿಗೆ 50 ವರ್ಷ ತುಂಬುವುದರೊಳಗೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳಾಗುತ್ತಿವೆ. ರಾಜ್ಯದಲ್ಲಿ ಒಂದು ಮನುಷ್ಯರ ಹುಚ್ಚಾಸ್ಪತ್ರೆ ಇತ್ತು ಈಗ ಜಿಲ್ಲೆಗೊಂದು ಮಾಡಬೇಕಾಗಿದೆ. ಪ್ರತಿ ಮನೆಯಲ್ಲೂ ಬಂಜೆತನ ಕಾಡುತ್ತಿದೆ. ಚಿಕ್ಕ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣುತ್ತಿರಲಿಲ್ಲ. ಈಗ ಪ್ರತಿ ತಾಲೂಕು ಕೇಂದ್ರದಲ್ಲಿ ಎರಡು ಮೂರು ಮಕ್ಕಳ ಆಸ್ಪತ್ರೆಗಳಿವೆ. ಕೃಷಿ ಉತ್ಪನ್ನ ಹೆಚ್ಚಳದಿಂದ ಹಣದ ಜತೆ ರೋಗ ರುಜೀನುಗಳು ವ್ಯಾಪಕವಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಬಬಂದು 75 ವರ್ಷಗಳು ಕಳೆದರೂ ಸಾವಯವ ಭಾರತೀಯ ದೇಶಿ ಕೃಷಿ ಕುರಿತ ಒಂದು ಪಾಠ ಪ್ರವಚನಗಳಿಲ್ಲ. ಗೋವುಗಳ ಸಂಪತ್ತು ಇಲ್ಲದೇ ಸಾವಯವ ಕೃಷಿ ಅಸಾಧ್ಯ. ದೇಶಿ ಗೋವುಗಳ ಪಾಲನೆಯಿಂದ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಆದ್ದರಿಂದ ಕೃಷಿಕರು ದೇಶಿಯ ಕೃಷಿ ಪದ್ಧತಿಯನ್ನು ಈಗಲಾದರೂ ಅಳವಡಿಸಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು.
ಇದನ್ನೂ ಓದಿ : ಪುತ್ತೂರು: ಆಟೋ ರಿಕ್ಷಾದಲ್ಲಿ ಬಂದು ಆಸ್ಪತ್ರೆಯಿಂದ ಬ್ಯಾಟರಿ ಕಳವು
ದೇಶಿ ಕೃಷಿ ಕಾಯಕವನ್ನು ತಿರಸ್ಕಾರ ಮಾಡಿದ ದೇಶಗಳು ಎಂದಿಗೂ ಉದ್ದಾರವಾಗಲ್ಲ. ಗ್ರಾಮೀಣ ಭಾಗದ ಸ್ವಾಸ್ಥ್ಯವನ್ನು ಉತ್ತಮಪಡಿಸಲು ದೇಶಿ ಕೃಷಿ ಗೋಸಾಕಾಣಿಕೆ ಮತ್ತು ಉಪ ಕಸುಬುಗಳ ಮೂಲಕ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಆದಿಶಕ್ತಿ ದುರ್ಗಾಮಾತೆ ಗೋ ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಆನೆಗೊಂದಿ ವಾಲೀಕಿಲ್ಲಾ ಆದಿಶಕ್ತಿ ದೇವಾಲಯದ ಅರ್ಚಕ ಬ್ರಹ್ಮಾನಾಂದ ಸ್ವಾಮೀಜಿ, ವ್ಯವಸ್ಥಾಪಕ ರಾಜಣ್ಣ ಇದ್ದರು.