Advertisement

ಹಲಸು ಸೊಗಸು

08:02 AM Apr 29, 2020 | mahesh |

ಇದು ಹಲಸಿನ ಸೀಸನ್‌. ಹಲಸು ಕೇವಲ ಹಣ್ಣಷ್ಟೇ ಅಲ್ಲ. ಅದನ್ನು ತರಕಾರಿಯಂತೆಯೂ ಬಳಸಬಹುದು. (ಎಳೆ ಹಲಸಿನ ಕಾಯಿ ಪಲ್ಯದ ರುಚಿ ನೆನಪಾಯಿತೇ?) ಸ್ವಲ್ಪ ಫ್ರಿ ಟೈಮ್‌ ಇದ್ದರೆ, ಹಲಸಿನಿಂದ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಬಹುದು. ಈಗಂತೂ ಟೈಮ್‌ ಇದ್ದೇ ಇದೆಯಲ್ಲ; ಮತ್ಯಾಕೆ ತಡ? ಈ ರೆಸಿಪಿಗಳನ್ನು ಟ್ರೈ ಮಾಡಿ.

Advertisement

ಪೋಡಿ
ಬೇಕಾಗುವ ಸಾಮಗ್ರಿ: ಎಳೆಯ ಹಲಸಿನಕಾಯಿ ತೊಳೆ, ಕೆಂಪು ಮೆಣಸಿನ ಕಾಯಿ – 10, ಅಕ್ಕಿ – 1 ಕಪ್‌, ಧನಿಯಾ- 1 ಚಮಚ, ಹುಣಸೆಹಣ್ಣಿನ ರಸ, ಎಣ್ಣೆ, ಇಂಗು, ಉಪ್ಪು.

ಮಾಡುವ ವಿಧಾನ: ಅಕ್ಕಿಯನ್ನು ನೀರಿನಲ್ಲಿ ನೆನೆಸಿ, ನೀರು ಬಸಿದು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಹಲಸಿನ ತೊಳೆಯ ಬೀಜ ತೆಗೆದು, ಸ್ವಲ್ಪ ದೊಡ್ಡ ಹೋಳು ಗಳನ್ನಾಗಿ ಹೆಚ್ಚಿ. ಧನಿಯಾ, ಕೆಂಪು ಮೆಣಸಿನಕಾಯಿ, ಹುಣಸೆ ರಸ, ಉಪ್ಪು, ಇಂಗನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ನಂತರ, ಅದಕ್ಕೆ ಅಕ್ಕಿ ಪುಡಿಯನ್ನು ಬೆರೆಸಿ, ಅಕ್ಕಿ ಹಿಟ್ಟಿನ ಹದದ ಪೇಸ್ಟ್ ತಯಾರಿಸಿ. ಈ ಮಸಾಲೆ ಯನ್ನು ಹಲಸಿನ ತೊಳೆಗೆ ಹಚ್ಚಿ ಎಣ್ಣೆಯಲ್ಲಿ ಗರಿಗರಿಯಾಗಿ ಕರಿಯಿರಿ.

ಚಿಪ್ಸ್
ಬೇಕಾಗುವ ಸಾಮಗ್ರಿ: ಬಲಿತ ಹಲಸಿನ ಕಾಯಿ, ಉಪ್ಪು, ಕೆಂಪು ಮೆಣಸಿನ ಪುಡಿ, ಅರಿಶಿನ, ಕರಿಯಲು ಎಣ್ಣೆ.
ಮಾಡುವ ವಿಧಾನ: ಹಲಸಿನಕಾಯಿಯ ತೊಳೆಗಳನ್ನು ಬಿಡಿಸಿ, (ಬೀಜ ಬೇರ್ಪಡಿಸಿಕೊಳ್ಳಿ) ತೆಳ್ಳಗೆ ಉದ್ದುದ್ದಕ್ಕೆ ಹೆಚ್ಚಿ, ಕಾದ ಎಣ್ಣೆಯಲ್ಲಿ ಗರಿ ಗರಿಯಾಗುವವರೆಗೆ (ಹೊಂಬಣ್ಣ ಬರುವವರೆಗೆ) ಕರಿಯಿರಿ. ಅನಂತರ ಅದನ್ನು ಎಣ್ಣೆಯಿಂದ ತೆಗೆದು ಒಂದು ಪಾತ್ರೆಯೊಳಗೆ ಹಾಕಿ, ಉಪ್ಪು ಮತ್ತು ಖಾರದ ಪುಡಿ (ಮೊದಲೇ ಎರಡನ್ನೂ ಮಿಶ್ರಣ ಮಾಡಿ ಇಡಿ) ಹಾಕಿ ಚೆನ್ನಾಗಿ ಕುಲುಕಿ. ತಣ್ಣಗಾದ ಮೇಲೆ ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಇಡಿ.

ಹಪ್ಪಳ
ಬೇಕಾಗುವ ಸಾಮಗ್ರಿ: ಬಲಿತ ಹಲಸಿನಕಾಯಿ ತೊಳೆ (ಬೀಜ ರಹಿತ), ಮೆಣಸಿನ ಪುಡಿ – 4 ಚಮಚ, ಉಪ್ಪು, ಅರಿಶಿನ, ಎಣ್ಣೆ.

Advertisement

ಮಾಡುವ ವಿಧಾನ: ಹಲಸಿನ ತೊಳೆಗಳನ್ನು ಹಬೆಯಲ್ಲಿ ಚೆನ್ನಾಗಿ ಬೇಯಿಸಿ, ಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ನಂತರ, ಲಿಂಬೆ ಗಾತ್ರದ ಉಂಡೆಗಳನ್ನು ಮಾಡಿ, ಎರಡು ಪ್ಲಾಸ್ಟಿಕ್‌ ಹಾಳೆಗಳ ಮಧ್ಯ ಇಟ್ಟು ಹಪ್ಪಳದ ಮಷೀನ್‌ನಿಂದ ಒತ್ತಿ. (ಪ್ಲಾಸ್ಟಿಕ್‌ ಹಾಳೆಗೆ ಎಣ್ಣೆ ಹಚ್ಚಿದರೆ ಹಿಟ್ಟು ಅಂಟಿಕೊಳ್ಳುವುದಿಲ್ಲ) ಹೀಗೆ ಲಟ್ಟಿಸಿದ ಹಪ್ಪಳಗಳನ್ನು ತೆಳುವಾದ ಬಟ್ಟೆಯ ಮೇಲೆ ಹರಡಿ, ಬಿಸಿಲಿನಲ್ಲಿ 2-3 ದಿನ ಒಣಗಿಸಿರಿ. ಈ ಹಪ್ಪಳಗಳನ್ನು ಹಲವಾರು ತಿಂಗಳ ಕಾಲ ಕೆಡದಂತೆ ಇಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next