Advertisement
ಏನಿದು ಕಚ್ಚೇತೀವು ದ್ವೀಪ?ಇದು ಮನುಷ್ಯವಾಸಿಗಳು ಇಲ್ಲದ, ಪಾರ್ಕ್ ಸ್ಟ್ರೈಟ್‌ನಲ್ಲಿರುವ ಒಂದು ಪುಟ್ಟ ದ್ವೀಪ. ಇದು 14ನೇ ಶತಮಾನದಲ್ಲಿ ಸಂಭವಿಸಿದ ಭಾರೀ ಜ್ವಾಲಾಮುಖೀ ವೇಳೆ ಸೃಷ್ಟಿಯಾಗಿದೆ ಎಂದು ಇತಿಹಾಸ ಹೇಳುತ್ತದೆ. ಒಟ್ಟು 285 ಎಕರೆ ಜಾಗದಲ್ಲಿ ಈ ದ್ವೀಪವಿದೆ. ರಾಮೇಶ್ವರಂನಿಂದ ತೀರಾ ಸನಿಹದಲ್ಲಿದೆ. ಆರಂಭದಲ್ಲಿ ರಾಮನಾಥಪುರಂನ ರಾಜನ ಒಡೆತನದಲ್ಲಿ ಈ ದ್ವೀಪವಿತ್ತು. ಬಳಿಕ ಮದ್ರಾಸ್ ರೆಸಿಡೆನ್ಸಿಗೆ ಸೇರಿತು. 1921ರಲ್ಲಿ ಶ್ರೀಲಂಕಾ ಮತ್ತು ಭಾರತ ದೇಶಗಳು ಇದನ್ನು ತಮ್ಮದು ಎಂಬ ಹಕ್ಕು ಮಂಡಿಸಿದ್ದವು. ಆದರೆ ಈ ವಿವಾದ ಹಾಗೆಯೇ ಜಾರಿಯಲ್ಲಿತ್ತು. ಸ್ವಾತಂತ್ರಾéನಂತರದಲ್ಲೂ ವಿವಾದ ಮುಂದುವರಿದಿತ್ತು. ಹಾಗೆಯೇ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಇದನ್ನು ಭಾರತ ಮತ್ತು ಶ್ರೀಲಂಕಾ ಎರಡೂ ಆಳ್ವಿಕೆ ನಡೆಸುತ್ತಿದ್ದವು.
ಚೆನ್ನೈಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಉಪಸ್ಥಿತಿಯಲ್ಲೇ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈ ಬಗ್ಗೆ ಪ್ರಸ್ತಾವಿಸಿದ್ದಾರೆ. ಭಾರತ- ಶ್ರೀಲಂಕಾ ನಡುವಿನ ಈ ದ್ವೀಪ ವಿವಾದ ಅತ್ಯಂತ ಮಹತ್ವದ್ದಾಗಿದೆ. ತಮಿಳುನಾಡಿನ ಮೀನುಗಾರರ ಹಿತ ಕಾಯುವುದಕ್ಕಾಗಿ ಈ ವಿವಾದವನ್ನು ಬಗೆಹರಿಸಿ. ಜತೆಗೆ ತಮಿಳುನಾಡಿನ ಒಪ್ಪಿಗೆ ಇಲ್ಲದೇ ಇದನ್ನು ಶ್ರೀಲಂಕಾಕ್ಕೆ ನೀಡಲಾಗಿದೆ. ಈ ಒಪ್ಪಂದವನ್ನು ಮುರಿದು, ದ್ವೀಪದ ಮಾಲಕತ್ವವನ್ನು ಭಾರತದ ಕಡೆಗೆ ತೆಗೆದುಕೊಳ್ಳಿ. ಇದರಿಂದಾಗಿ ನಮ್ಮ ಮೀನುಗಾರರು ನಿರಾತಂಕವಾಗಿ ಈ ಭಾಗದಲ್ಲಿಯೂ ಮೀನುಗಾರಿಕೆ ಮಾಡಬಹುದಾಗಿದೆ. ಅಲ್ಲದೆ ಈ ವಿವಾದ ಬಗೆಹರಿಸಿಕೊಳ್ಳಲು ಇದೇ ಸರಿಯಾದ ಸಮಯ ಎಂದಿದ್ದರು. ವಿವಾದ ಸೃಷ್ಟಿಯಾಗಿದ್ದು ಹೇಗೆ?
1974ರಿಂದ 76ರ ವರೆಗೆ ನಡೆದ ಭಾರತ ಪ್ರಧಾನಿ ಇಂದಿರಾ ಗಾಂಧಿ ಮತ್ತು ಶ್ರೀಲಂಕಾ ಪ್ರಧಾನಿ ಸಿರಿಮಾವೋ ಬಂಡಾರನಾಯಕೆ ಅವರ ಮಾತುಕತೆ ವೇಳೆಯಲ್ಲೇ ಈ ದ್ವೀಪದ ವಿವಾದ ಒಂದು ರೀತಿಯಲ್ಲಿ ಇತ್ಯರ್ಥವಾದರೆ, ಮತ್ತೂಂದು ರೀತಿಯಲ್ಲಿ ಉಗಮವಾಯಿತು. ಅಂದರೆ, ಲಂಕಾ ಕಡೆಯಿಂದ ಈ ಒಪ್ಪಂದಕ್ಕೆ ಯಾವುದೇ ಪ್ರತಿರೋಧ ಬರಲಿಲ್ಲ. ಆದರೆ, ಆಗಲೇ ತಮಿಳುನಾಡಿನ ಸರಕಾರ ಮತ್ತು ಮೀನುಗಾರರು ಈ ಒಪ್ಪಂದಕ್ಕೆ ತೀವ್ರ ಆಕ್ಷೇಪವೆತ್ತಿದರು. ಅಲ್ಲದೆ ಆಗ ಈ ದ್ವೀಪವನ್ನೇ ಗುರುತಾಗಿರಿಸಿಕೊಂಡು ಮೆರಿಟೈಮ್ ಬೌಂಡರಿಯನ್ನೂ ಮಾಡಲಾಯಿತು. ಇದಾದ ಮೇಲೆ ಈ ವಿವಾದ ಇನ್ನಷ್ಟು ತೀವ್ರಗೊಂಡಿತು. ಏಕೆಂದರೆ, ಈ ದ್ವೀಪದಾಟಿ ಭಾರತೀಯ ಮೀನುಗಾರರು ಮೀನು ಹಿಡಿಯುವಂತಿಲ್ಲ ಎಂಬ ನಿಯಮ ರೂಪಿಸಲಾಯಿತು. ಅಲ್ಲದೆ, ಭಾರತೀಯ ಮೀನುಗಾರರು ಈ ದ್ವೀಪವನ್ನು ಕೇವಲ ವಿಶ್ರಾಂತಿ ತೆಗೆದುಕೊಳ್ಳಲು, ಮೀನು ಹಿಡಿಯುವ ಬಲೆ ಒಣಗಿಸಿಕೊಳ್ಳಲು ಮಾತ್ರ ಉಪಯೋಗಿಸಿಕೊಳ್ಳಬೇಕು ಮತ್ತು ಸೆಂಟ್ ಆ್ಯಂಟನಿ ಹಬ್ಬದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಯಿತು. ಇದಾದ ಮೇಲೂ ಅಸಮಾಧಾನದಿಂದ ಇದ್ದರೂ ಭಾರತೀಯ ಮೀನುಗಾರರು ತಂಟೆ ತಕರಾರಿಲ್ಲದೇ ಸುಮ್ಮನಿದ್ದರು. ಆದರೆ ಭಾರತದ ಗಡಿಯೊಳಗೆ ಇದ್ದ ಸಮುದ್ರದಲ್ಲಿ ಮೀನುಗಳ ಸಂಖ್ಯೆ ಕಡಿಮೆಯಾಯಿತು. ಹೀಗಾಗಿ ಅನಿವಾರ್ಯವಾಗಿ ಮೀನುಗಾರರು ಗಡಿದಾಟಿ ಹೋಗಲು ಶುರು ಮಾಡಿದರು. ಜತೆಗೆ, ಆಧುನಿಕ ರೀತಿಯಲ್ಲಿ ಮೀನು ಹಿಡಿಯುವ ತಂತ್ರಜ್ಞಾನ ರೂಪಿಸಿಕೊಂಡರು. ಇದರಿಂದಾಗಿ ಶ್ರೀಲಂಕಾ ನೌಕಾ ಪಡೆ, ಭಾರತೀಯ ಮೀನುಗಾರರನ್ನು ಬಂಧಿಸಲು ಶುರು ಮಾಡಿತು.
Related Articles
ಎಲ್‌ಟಿಟಿಐ ಬಲಿಷ್ಠವಾಗಿದ್ದ ಕಾಲದಲ್ಲಿ ಈ ದ್ವೀಪದ ಸುತ್ತ ಯಾವುದೇ ಸಮಸ್ಯೆ ಇರಲಿಲ್ಲ. ಇದಕ್ಕೆ ಕಾರಣವೂ ಇದೆ. ಈ ದ್ವೀಪ, ರಾಮೇಶ್ವರಂಗೆ ಹೇಗೆ ಹತ್ತಿರವಿದೆಯೋ, ಹಾಗೆಯೇ ಶ್ರೀಲಂಕಾದ ಜಾಫಾ°ಗೂ ಹತ್ತಿರವಿದೆ. ಇಲ್ಲಿ ಎಲ್‌ಟಿಟಿಇ ಪ್ರಾಬಲ್ಯ ಹೆಚ್ಚಾಗಿತ್ತು. ಹೀಗಾಗಿ ಈ ದ್ವೀಪದ ಬಳಿಗೆ ಶ್ರೀಲಂಕಾ ಮೀನುಗಾರರು ಮೀನುಗಾರಿಕೆಗಾಗಿ ಬರುತ್ತಿರಲಿಲ್ಲ. ಆದರೆ 2010ರ ಅನಂತರ ಎಲ್‌ಟಿಟಿಇ ಅಳಿದ ಮೇಲೆ ಇಲ್ಲಿಗೆ ಲಂಕಾ ಮೀನುಗಾರರು ಬರಲು ಶುರು ಮಾಡಿದರು. ಜತೆಗೆ ಈ ದ್ವೀಪದ ಸುತ್ತಲಿನ ಸಮುದ್ರ ಪ್ರದೇಶವನ್ನು ಶ್ರೀಲಂಕಾ ತನ್ನ ವಶಕ್ಕೆ ತೆಗೆದುಕೊಂಡಿತು.
Advertisement
ಕೇಂದ್ರ ಸರಕಾರ ವರ್ಸಸ್ ತಮಿಳುನಾಡು ಸರಕಾರ1974ರಿಂದ 76ರ ಅವಧಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದಾಗಲೇ ಕೇಂದ್ರ ಸರಕಾರ ಮತ್ತು ತಮಿಳುನಾಡು ಸರಕಾರದ ನಡುವೆ ವೈಮನಸ್ಸು ಮೂಡಿತು. ಇದಕ್ಕೆ ಪ್ರತಿಯಾಗಿ 1991ರಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ಕಚ್ಚೇತೀವು ದ್ವೀಪವನ್ನು ವಾಪಸ್ ಭಾರತದ ವಶಕ್ಕೆ ಪಡೆಯಬೇಕು ಎಂಬ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. 2008ರಲ್ಲಿ ಆಗಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ಕೇಂದ್ರ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಕಚ್ಚೇತೀವು ದ್ವೀಪವನ್ನು ಕೊಡುಗೆಯಾಗಿ ನೀಡಿದ್ದು ಅಸಂವಿಧಾನಿಕ ಎಂದೇ ವಾದಿಸಿದ್ದರು. ಅವಕಾಶಕ್ಕೆ ಕಾಯುತ್ತಿದೆಯೇ ಬಿಜೆಪಿ?
ಸದ್ಯ ಶ್ರೀಲಂಕಾ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಸಂಕಷ್ಟ ಅನುಭವಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತ ಎಲ್ಲ ರೀತಿಯ ನೆರವು ಒದಗಿಸುತ್ತಿದೆ. ಸ್ಟಾಲಿನ್ ಹೇಳಿದ ಹಾಗೆ ಈ ದ್ವೀಪದ ಬಗ್ಗೆ ಮಾತುಕತೆ ನಡೆಸಲು ಭಾರತಕ್ಕೆ ಇದು ಸಕಾಲ. ಅಲ್ಲದೆ ಈ ದ್ವೀಪವು ಮೀನುಗಾರರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದರಿಂದ ಈಗ ವಿವಾದ ಬಗೆಹರಿಸಿದರೆ, ಪ್ರಧಾನಿ ಮೋದಿ ಅವರ ಇಮೇಜ್ ಇನ್ನಷ್ಟು ವೃದ್ಧಿಯಾಗಬಹುದು. ಅಲ್ಲದೆ ರಾಜಕೀಯವಾಗಿಯೂ ಬಿಜೆಪಿಗೆ ಹೆಚ್ಚು ಲಾಭವಾಗಬಹುದು ಎಂಬ ವಿಶ್ಲೇಷಣೆ ಇದೆ. ಇದಕ್ಕೆ ಪೂರಕವೆಂಬಂತೆ, ಇತ್ತೀಚೆಗಷ್ಟೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು, ಶ್ರೀಲಂಕಾಕ್ಕೆ ಭೇಟಿ ನೀಡಿ ಬಂದಿದ್ದರು. ಅಲ್ಲದೆ, ಲಂಕಾ ಮೀನುಗಾರರೂ, ಈ ದ್ವೀಪ ತಮ್ಮಿಂದ ಕೈಬಿಡಬಹುದು ಎಂಬ ಆತಂಕದಲ್ಲಿದ್ದಾರೆ. ಏಕೆಂದರೆ ಭಾರತ ಈಗ ಮಾಡುತ್ತಿರುವ ಸಹಾಯದಿಂದಾಗಿ ಅಲ್ಲಿನ ಸರಕಾರ, ಈ ದ್ವೀಪವನ್ನು ಲೀಸ್‌ಗೆ ಕೊಡಬಹುದು ಎಂಬ ಆತಂಕವೂ ಅವರಲ್ಲಿದೆ.