Advertisement
ಪಟ್ಟಣ ಪಂಚಾಯತ್ ಹೊಂದಿರುವ ತಾಲೂಕಿನ ಕಬ್ಬೂರ ಪಟ್ಟಣದ ಸಾರ್ವಜನಿಕರಿಗೆ ಸುಸಜ್ಜಿತ ಬಸ್ ನಿಲ್ದಾಣ ಅವಶ್ಯಕವಾಗಿದೆ. ಪಟ್ಟಣದ ಮಧ್ಯೆ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಆದರೆ ಪ್ರಯಾಣಿಕರು ಬಸ್ ನಿಲ್ದಾಣ ಇಲ್ಲದೇ ಹೆದ್ದಾರಿ ಪಕ್ಕದಲ್ಲಿಯೇ ಬಸ್‌ಗಾಗಿ ಕಾಯಬೇಕಾಗಿದೆ.
Related Articles
Advertisement
ಕಳೆದ ನಾಲ್ಕೈದು ವರ್ಷಗಳ ಹಿಂದೆ ರಾಜ್ಯ ಹೆದ್ದಾರಿ ನಿರ್ಮಾಣವಾಗುವ ಮುನ್ನ ಚಿಕ್ಕದಾದ ಬಸ್ ನಿಲ್ದಾಣ ಇತ್ತು. ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಕಾಮಗಾರಿ ಆರಂಭವಾದಾಗ ಚಿಕ್ಕ ಬಸ್ ನಿಲ್ದಾಣ ತೆರವುಗೊಳಿಸಿದರು. ಈಗ ಹೆದ್ದಾರಿ ನಿರ್ಮಾಣವಾಗಿ ಎರಡು ವರ್ಷ ಕಳೆಯುತ್ತಾ ಬಂದಿದೆ. ಪಟ್ಟಣದ ಜನರಿಗೆ ಅನುಕೂಲವಾಗಲು ಬಸ್ ನಿಲ್ದಾಣವನ್ನು ಯಾಕೆ ನಿರ್ಮಿಸಿಲ್ಲ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಹಳೆ ಬಸ್ ನಿಲ್ದಾಣದ ಜಾಗದಲ್ಲಿ ಈಗಾಗಲೇ ಬೀದಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಇಟ್ಟು ವ್ಯಾಪಾರ -ವಹಿವಾಟು ಆರಂಭಿಸಿದ್ದಾರೆ. ಬಸ್‌ಗಾಗಿ ಪ್ರಯಾಣ ಬೆಳೆಸುವ ಸಾರ್ವಜನಿಕರು ಮಾತ್ರ ನಿಲ್ಲಲು ಸ್ಥಳವಿಲ್ಲದಂತಾಗಿದೆ.
ಮಹಿಳೆಯರು, ವಯೊವೃದ್ಧರು, ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ನಿಲ್ಲಲು ಸ್ಥಳವಿಲ್ಲದಾಗಿದೆ. ರಸ್ತೆಯ ಪಕ್ಕದಲ್ಲಿ ನಿಂತಾಗ ಅನೇಕ ಬಾರಿ ಅಪಘಾತ ಸಂಭವಿಸಿ ಜನರು ಕೈಕಾಲು ಕಳೆದುಕೊಂಡ ಉದಾಹರಣೆಗಳು ಇವೆ.
ಶೌಚಾಲಯವಿಲ್ಲದೆ ಪರದಾಟ: ಬಸ್ ನಿಲ್ದಾಣ ಇಲ್ಲದೇ ಪರದಾಡುತ್ತಿರುವ ಜನರಿಗೆ ಶೌಚಾಲಯ ಇಲ್ಲದೇ ಇರುವುದು ಮತ್ತೂಂದು ಸಂಕಷ್ಟ ತಂದಿದೆ. ದೂರದ ಗ್ರಾಮಗಳಿಂದ ಬಸ್‌ಗಾಗಿ ಕಾಯ್ದು ಕುಳಿತುಕೊಳ್ಳುವ ಪ್ರಯಾಣಿಕರು ಶೌಚಾಲಯಕ್ಕೆ ಹೋಗಲು ಕಿ.ಮೀ. ನಷ್ಟು ದೂರ ಹೋಗಬೇಕು. ಕುಡಿಯುವ ನೀರಿನ ಸಮಸ್ಯೆಯಂತೂ ಹೇಳತೀರದಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣ, ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ಒದಗಿಸಬೇಕು ಎನ್ನುತ್ತಾರೆ ಸ್ಥಳೀಯರು.
ರಾಜ್ಯ ಹೆದ್ದಾರಿ ನಿರ್ಮಾಣ ಮಾಡುವ ಮುನ್ನ ಕೆಶಿಪ್‌ನವರು ಗುರುತಿಸಿದ ಜಾಗವನ್ನು ಪಟ್ಟಣ ಪಂಚಾಯತಿಗೆ ಹಸ್ತಾಂತರಿಸದ ಕಾರಣ ಬಸ್ ತಂಗುದಾಣ ನಿರ್ಮಿಸಲು ತೊಂದರೆಯಾಗಿದೆ. ಶೀಘ್ರ ಕೆಶಿಪ್ ಅಧಿಕಾರಿಗಳಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲಾಗುತ್ತದೆ. – ಎಂ.ಬಿ.ಭೃಂಗಿಮಠ, ಮುಖ್ಯಾಧಿಕಾರಿ
-ಮಹಾದೇವ ಪೂಜೇರಿ