Advertisement

ಕಾಬೂಲ್‌ ರೋದನ

12:24 AM Aug 17, 2021 | Team Udayavani |

ಕಾಬೂಲ್‌: ಅಫ್ಘಾನಿಸ್ಥಾನವು ತಾಲಿಬಾನ್‌ ಉಗ್ರರ ಕೈವಶವಾಗುತ್ತಿದ್ದಂತೆ ಇಡೀ ದೇಶದಲ್ಲಿ ಅಸ್ಥಿರತೆ ಮನೆ ಮಾಡಿದೆ. ಅಲ್ಲಿನ ನಾಗರಿಕರಲ್ಲಿ ಮೂಡಿರುವ ಆತಂಕದ ಛಾಯೆಗೆ ಸೋಮವಾರ ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡುಬಂದ ಘೋರ ದೃಶ್ಯಾವಳಿಗಳೇ ಸಾಕ್ಷಿ ಹೇಳಿವೆ.

Advertisement

ಉಗ್ರರ ಕೈಗೆ ಸಿಲುಕಿ ಸಾಯುವ ಬದಲು ಎಲ್ಲಾದರೂ ಹೋಗಿ ಜೀವ ಉಳಿಸಿಕೊಳ್ಳೋಣ ಎಂಬ ಧಾವಂತದಲ್ಲಿ ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಧಾವಿಸಿ ಬಂದ ಅಫ್ಘಾನ್‌ ನಾಗರಿಕರು ಹತಾಶೆ, ಅಸಹಾಯಕತೆಯಿಂದ ಸಿಕ್ಕ ಸಿಕ್ಕ ವಿಮಾನಗಳನ್ನು ಏರಲು ಯತ್ನಿಸುತ್ತಿರುವ ಭಯಾನಕ ದೃಶ್ಯಗಳು ಜಗತ್ತಿನಾದ್ಯಂತ ವೈರಲ್‌ ಆಗಿವೆ. ಈ ಗೊಂದಲಗಳ ನಡುವೆ 8 ಮಂದಿ ಸಾವಿಗೀಡಾಗಿದ್ದಾರೆ.

ವಿಮಾನದಿಂದ ಬಿದ್ದು 3 ಸಾವು :

ಅಮೆರಿಕದ ಯೋಧರನ್ನು ಹೊತ್ತು ಹೊರಟಿದ್ದ ವಾಯುಪಡೆ ವಿಮಾನವನ್ನು ಏರಲು ಅಫ್ಘಾನಿಗಳು ದುಸ್ಸಾಹಸ ಪಟ್ಟ ಕರುಳು ಹಿಂಡುವ ದೃಶ್ಯಗಳು ಸೆರೆಯಾಗಿವೆ. ಜಮಾಯಿಸಿದ್ದ ಜನರು ಸಿಕ್ಕ ಸಿಕ್ಕ ಕಡೆಯಿಂದೆಲ್ಲ ವಿಮಾನದೊಳಗೆ ನುಗ್ಗಲು ಯತ್ನಿಸಿದರು. ಕೆಲವರು ವಿಮಾನದ ಚಕ್ರ ಮತ್ತು ರೆಕ್ಕೆಗಳಿಗೆ ತಮ್ಮನ್ನು ಕಟ್ಟಿಕೊಂಡಿದ್ದರು. ಪ್ರವಾಹ ದಂತೆ ಹರಿದುಬಂದ ಜನರನ್ನು ಚದುರಿಸಲು ಯೋಧರು ಗಾಳಿಯಲ್ಲಿ  ಗುಂಡು ಹಾರಿಸಬೇಕಾಯಿತು. ಬಳಿಕ ವಿಮಾನ ಹಾರಿದಾಗ ರೆಕ್ಕೆ ಮತ್ತು ಚಕ್ರದಲ್ಲಿದ್ದ ಮೂವರು ಆಕಾಶದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಇದಲ್ಲದೆ ಇನ್ನೂ ಐವರು ಏರ್‌ಪೋರ್ಟ್‌ನಲ್ಲಿ  ಸಾವಿಗೀಡಾಗಿದ್ದಾರೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಫ್ಘಾನ್‌ನ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸುವುದಕ್ಕಾಗಿ ಕಾಬೂಲ್‌ ಏರ್‌ಪೋರ್ಟ್‌ನಲ್ಲಿ ನಿಯೋಜಿಸಲಾಗಿರುವ ಯೋಧರ ಸಂಖ್ಯೆಯನ್ನು 6 ಸಾವಿರಕ್ಕೇರಿಸುವುದಾಗಿ ಅಮೆರಿಕ ಘೋಷಿಸಿದೆ. ರವಿವಾರವಷ್ಟೇ ಅಧ್ಯಕ್ಷರ ಅರಮನೆ ಪ್ರವೇಶಿಸಿದ್ದ ಉಗ್ರರು ಸೋಮವಾರ ಅಫ್ಘಾನ್‌ ಸಂಸತ್ತನ್ನು ನಿಯಂತ್ರಣಕ್ಕೆ ಪಡೆದಿದ್ದಾರೆ. ಉನ್ನತ ನಾಯಕರು ಕುಳಿತುಕೊಳ್ಳುವ ಕುರ್ಚಿಗಳಲ್ಲಿ ಬಂದೂಕುಧಾರಿ ಉಗ್ರರು ಆಸೀನರಾಗಿರುವ ಫೋಟೋಗಳು ಬಿಡುಗಡೆಯಾಗಿವೆ. ಅಫ್ಘಾನ್‌ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಭಾರತವು ಸೋಮವಾರ ವಿಶ್ವಸಂಸ್ಥೆ ಭದ್ರತ ಮಂಡಳಿಯ ತುರ್ತು ಸಭೆ ಕರೆದು ಚರ್ಚಿಸಿದೆ.

Advertisement

ಶಸ್ತ್ರಸಜ್ಜಿತ ತಾಲಿಬಾನ್‌ ಉಗ್ರರು ಅಫ್ಘಾನ್‌ನ ಟೋಲೋ ನ್ಯೂಸ್‌ ಎಂಬ ಸುದ್ದಿವಾಹಿನಿಯ ಕಚೇರಿಯನ್ನು ಪ್ರವೇಶಿಸಿ, ಸರಕಾರವು ಭದ್ರತೆಗಾಗಿ ವಿತರಿಸಿದ್ದ ಶಸ್ತ್ರಾಸ್ತ್ರಗಳನ್ನು ಕಸಿದೊ ಯ್ದಿದ್ದಾರೆ. ಇನ್ನು ನಾವು ರಕ್ಷಣೆ ನೀಡುತ್ತೇವೆ ಎಂದಿದ್ದಾರೆ.

ನಗದು ಹೊತ್ತೂಯ್ದ ಘನಿ! :

ರವಿವಾರ ಕಾಬೂಲನ್ನು ಉಗ್ರರು ವಶಕ್ಕೆ ಪಡೆಯುತ್ತಿದ್ದಂತೆ ದೇಶ ತೊರೆದಿದ್ದ ಅಫ್ಘಾನ್‌ನ ಮಾಜಿ ಅಧ್ಯಕ್ಷ ಅಶ್ರಫ್ ಘನಿ ತಜಕಿಸ್ಥಾನಕ್ಕೆ ತೆರಳಿದ್ದರು. ಆದರೆ ಅವರ ವಿಮಾನ ಇಳಿಯಲು ತಜಕಿಸ್ಥಾನ ಸರಕಾರ ಅವಕಾಶ ನೀಡದ ಹಿನ್ನೆಲೆಯಲ್ಲಿ ಅವರು ಒಮನ್‌ಗೆ ತೆರಳಿದ್ದು, ಅಲ್ಲಿಂದ ಅಮೆರಿಕಕ್ಕೆ ತೆರಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ದೇಶ ಬಿಟ್ಟು ಪರಾರಿಯಾಗುವ ವೇಳೆ ಘನಿ 4 ಕಾರುಗಳು ಮತ್ತು ಒಂದು ಹೆಲಿಕಾಪ್ಟರ್‌ ತುಂಬುವಷ್ಟು ನಗದನ್ನು ಒಯ್ದಿದ್ದಾರೆ. ಇನ್ನಷ್ಟು ಹಣಕ್ಕೆ ಜಾಗ ಇಲ್ಲದೆ ಬಿಟ್ಟು ಹೋಗಿದ್ದಾರೆ ಎಂದು ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ.

ಕಾಬೂಲ್‌ನಲ್ಲಿ 500 ಭಾರತೀಯರು : ವಿದೇಶಾಂಗ ಸಚಿವಾಲಯದ ಸಿಬಂದಿ, ಅರೆಸೇನಾ ಯೋಧರ ಸಹಿತ 500ರಷ್ಟು ಭಾರತೀಯರು ಇನ್ನೂ ಕಾಬೂಲ್‌ನಲ್ಲೇ ಇದ್ದಾರೆ. ತಾಲಿಬಾನ್‌ ಕರ್ಫ್ಯೂ ಹೇರಿದೆ. ಹೀಗಾಗಿ ವಿಮಾನನಿಲ್ದಾಣಕ್ಕೆ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವುದೇ ದೊಡ್ಡ ಸವಾಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next