ಕಾಬೂಲ್ : ಅಫ್ಘಾನಿಸ್ಥಾನದಲ್ಲಿನ ಭಾರತೀಯ ರಾಯಭಾರಿ ಮನ್‌ಪ್ರೀತ್ ವೋರಾ ಅವರು ಇಂದು ಮಂಗಳವಾರ ಬೆಳಗ್ಗೆ ಶಾಂತಿ ಪ್ರಕ್ರಿಯೆ ಸಭೆಯಲ್ಲಿ ಪಾಲ್ಗೊಂಡಿರುವಂತೆಯೇ ಅವರ ನಿವಾಸದ ಒಳಗಿರುವ ಟೆನಿಸ್ ಕೋರ್ಟ್‌ನಲ್ಲಿ ಉಗ್ರರು ಹಾರಿಸಿದ ರಾಕೆಟ್ ಬೆಳಗ್ಗೆ 10.25ರ ಹೊತ್ತಿಗೆ ಬಂದು ಬಿದ್ದಿದೆ. ಆದರೆ ಯಾವುದೇ ಜೀವ ಹಾನಿ ಆಗಿಲ್ಲ.
ಭಾರತೀಯ ರಾಯಭಾರಿಯ ನಿವಾಸವು ಅತ್ಯಂತ ಬಿಗಿ ಭದ್ರತೆಯ ರಾಜತಾಂತ್ರಿಕ ಪ್ರದೇಶದಲ್ಲಿ ಇದೆ. ವಾರದ ಹಿಂದಷ್ಟೇ ಬಿಗಿ ಭದ್ರತೆಯ ಈ ರಾಜತಾಂತ್ರಿಕ ಪ್ರದೇಶದಲ್ಲಿ ಟ್ರಕ್ ಬಾಂಬ್ ದಾಳಿ ನಡೆದು 40ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
ಇಂಡಿಯನ್ ಎಕ್ಸ್‌ಪ್ರೆಸ್ ಜತೆಗಿನ ಮಾತುಕತೆಯಲ್ಲಿ ರಾಯಭಾರಿ ವೋರಾ ಅವರು “ಕಾಬೂಲ್‌ನಲ್ಲಿರುವ ಇಂಡಿಯಾ ಹೌಸ್ ಆವರಣದೊಳಗೆ ಇಂದು ಬೆಳಗ್ಗೆ 10.25ರ ಹೊತ್ತಿಗೆ ರಾಕೆಟ್ ಎರಗಿತು; ಆದರೆ ಯಾವುದೇ ಜೀವ ಹಾನಿ ಆಗಿಲ್ಲ’ ಎಂದು ಹೇಳಿದರು
“ಭಾರತವು ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದೆ; ಹಾಗಾಗಿ ಭಯೋತ್ಪಾದನೆಗೆ ಅದು ಹೆದರುವುದಿಲ್ಲ’ ಎಂದವರು ಹೇಳಿದರು.
ಕಾಬೂಲ್‌ನಲ್ಲಿನ ಇಂಡಿಯಾ ಹೌಸ್ ಅತ್ಯಂತ ಭವ್ಯ ಕಟ್ಟಡವಾಗಿದ್ದು ಅಫ್ಘಾನಿಸ್ಥಾನದಲ್ಲಿ ಕಳೆದ ಹಲವು ದಶಕಗಳಿಂದ ಆಗಿರುವ ಬದಲಾವಣೆಗೆ ಅದು ಸಾಕ್ಷೀಭೂತವಾಗಿದೆ. ಇಂಡಿಯಾ ಹೌಸ್ ಕಟ್ಟಡದೊಳಗಿನ ಟೆನಿಸ್ ಕೋರ್ಟ್ ಅತ್ಯಂತ ವೈಭವೋಪೇತ ನೋಟವನ್ನು ಹೊಂದಿದೆ.