ಬೆಂಗಳೂರು: ಕಿಚ್ಚ ಸುದೀಪ್, ಉಪೇಂದ್ರ ಮತ್ತು ಶ್ರೀಯಾ ಶರಣ್ ಅಭಿನಯದ ಪ್ಯಾನ್ ಇಂಡಿಯಾ ಸಿನೆಮಾ ʻಕಬ್ಜʼ ರಿಲೀಸ್‌ಗೆ ದಿನಗಣನೆ ಆರಂಭವಾಗಿದೆ. ಎಸ್. ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಎರಡು ಹಾಡುಗಳನ್ನು ಈಗಾಗಲೇ ಹೈದರಾಬಾದ್ ಮತ್ತು ಚೆನ್ನೈನಲ್ಲಿ ರಿಲೀಸ್ ಮಾಡಲಾಗಿದೆ. ಅದಲ್ಲದೆ ಚಿತ್ರತಂಡ, ಫೆ.26ರಂದು ರಾಜ್ಯದಲ್ಲಿ ಅದ್ದೂರಿಯಾಗಿ ಆಡಿಯೋ ಲಾಂಚ್ ಕಾರ್ಯಕ್ರಮ ಆಯೋಜಿಸಿದೆ.
ಟ್ರೈಲರ್ ರಿಲೀಸ್ ಆದ ಬಳಿಕ ಭಾರತೀಯ ಸಿನೆಮಾ ಲೋಕದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಕಬ್ಜ ಚಿತ್ರ, ಮಾ. 17ರಂದು ವಿಶ್ವದಾದ್ಯಂತ 1,000 ಕ್ಕೂ ಹೆಚ್ಚು ಪರದೆ ಮೇಲೆ ಬಿಡುಗಡೆಗೆ ಸಜ್ಜಾಗಿದೆ. ಈ ಮೊದಲೇ ಚಿತ್ರದ ಹಾಡುಗಳು ಹಿಟ್ ಆಗಿದ್ದು ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಕೈಚಳಕದಲ್ಲಿ ಮೂಡಿಬಂದ ʼನಮಾಮಿʼ ಹಾಡು ಕೂಡಾ ಗುರುವಾರ ಬಿಡುಗಡೆಯಾಗಿದೆ.
ಫೆ.26ರಂದು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಂಜೆ 7 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಸ್ಯಾಂಡಲ್‌ವುಡ್‌ನ ಗಣ್ಯರು ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಚಿತ್ರದ ನಿರ್ದೇಶಕ ಎಸ್. ಚಂದ್ರು ಹೇಳಿದ್ದಾರೆ.
ಒಂಭತ್ತು ಭಾಷೆಗಳಲ್ಲಿ ʻಕಬ್ಜʼ ತೆರೆಕಾಣಲಿದ್ದು , ಅತ್ಯಧಿಕ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಪ್ಯಾನ್ ಇಂಡಿಯಾ ಸಿನಮಾ ಎಂಬ ಖ್ಯಾತಿಗೆ ʻಕಬ್ಜʼ ಪಾತ್ರವಾಗಲಿದೆ.
ಇದನ್ನೂ ಓದಿ: ಹೊಸಬರ ಚಿತ್ರ ‘ಬಾ ನಲ್ಲೆ ಮದುವೆಗೆ’