Advertisement

ಕನ್ನಡಕ್ಕೆ ಬಂದ್ರು ಕಬೀರ್‌ ಬೇಡಿ: ಕರಿ ಹೈದ ಕರಿ ಅಜ್ಜ ಚಿತ್ರದಲ್ಲಿ ರಾಜನಾಗಿ  ಮಿಂಚು

10:13 AM Dec 07, 2022 | Team Udayavani |

ಹಾಲಿವುಡ್‌ ಮತ್ತು ಬಾಲಿವುಡ್‌ನ‌ಲ್ಲಿ ತನ್ನ ವಿಭಿನ್ನ ಅಭಿನಯದ ಮೂಲಕ ಗುರುತಿಸಿಕೊಂಡಿರುವ, ಅಂತರಾಷ್ಟ್ರೀಯ ಖ್ಯಾತಿಯ ನಟ ಕಬೀರ್‌ ಬೇಡಿ. “ಸಂದೀಕನ್‌’ ಟಿವಿ ಸೀರಿಸ್‌ ಮೂಲಕ ಯುರೋಪ್‌ ನಾದ್ಯಂತ ಪ್ರಸಿದ್ದಿ ಪಡೆದ ಅಪ್ಪಟ ಭಾರತದ ಪ್ರತಿಭೆ ಕಬೀರ್‌ ಬೇಡಿ ಅವರಿಗೆ ದೇಶ-ವಿದೇಶಗಳಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ತನ್ನ ವಿಭಿನ್ನ ಮ್ಯಾನರಿಸಂ, ವಿಶಿಷ್ಟ ಧ್ವನಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ನಟನಾಗಿ ಗುರುತಿಸಿಕೊಂಡಿರುವ ಕಬೀರ್‌ ಬೇಡಿ, ಈಗ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸುವ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ.

Advertisement

ಹೌದು, ತುಳುನಾಡಿನ ದೈವ ಕೊರಗಜ್ಜನ ಕುರಿತಾಗಿ ತಯಾರಾಗುತ್ತಿರುವ “ಕರಿ ಹೈದ ಕರಿ ಅಜ್ಜ’ ಸಿನಿಮಾದಲ್ಲಿ ನಟ ಕಬೀರ್‌ ಬೇಡಿ ರಾಜನಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ “ಕರಿ ಹೈದ ಕರಿ ಅಜ್ಜ’ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿ ಸಿರುವ ಕಬೀರ್‌ ಬೇಡಿ, ತಮ್ಮ ಮೊದಲ ಕನ್ನಡ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದ್ದಾರೆ.

“ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದು, ತುಂಬ ಖುಷಿ ತಂದಿದೆ. “ಕರಿ ಹೈದ ಕರಿ ಅಜ್ಜ’ ಸಿನಿಮಾದಲ್ಲಿ ನನ್ನದು ರಾಜನ ಪಾತ್ರ. ಆದಿವಾಸಿ ಸಮುದಾಯದ ದೈವದ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಇಡೀ ಚಿತ್ರತಂಡ ಸಾಕಷ್ಟು ಪರಿಶ್ರಮ ವಹಿಸಿ, ಒಂದು ಒಳ್ಳೆಯ ಸಿನಿಮಾವನ್ನು ತೆರೆಗೆ ತರುತ್ತಿದೆ. ಶ್ರುತಿ, ಭವ್ಯಾ, ಭರತ್‌ ಸೂರ್ಯ ಮುಂತಾದ ಕಲಾವಿದರ ಜೊತೆ ಅಭಿನಯಿಸಿದ್ದು ಒಳ್ಳೆಯ ಅನುಭವ. ಇದೊಂದು ಅಪರೂಪದ ಸಿನಿಮಾವಾಗಲಿದೆ’ ಎಂಬ ವಿಶ್ವಾಸ ಕಬೀರ್‌ ಬೇಡಿ ಅವರದ್ದು.

ಇನ್ನು ಬೆಂಗಳೂರು ನಂಟನ್ನು ಮೆಲುಕು ಹಾಕಿರುವ ಕಬೀರ್‌ ಬೇಡಿ, “ಗಿರೀಶ್‌ ಕಾರ್ನಾಡ್‌ ಅವರ ಮೂಲಕ ಕನ್ನಡ ರಂಗಭೂಮಿ ಮತ್ತು ಬೆಂಗಳೂರಿನ ನಂಟು ಬೆಳೆಯಿತು. ಕಾರ್ನಾಡ್‌ ಅವರೊಂದಿಗೆ ಅನೇಕ ಬಾರಿ ಬೆಂಗಳೂರಿನ ನೃತ್ಯ ಗ್ರಾಮಕ್ಕೆ ಬರುತ್ತಿದ್ದ ನೆನಪು ಎಂದಿಗೂ ಮರೆಯುವಂತಿಲ್ಲ. ಕನ್ನಡದಲ್ಲಿ ಮೊದಲ ಬಾರಿಗೆ ಒಳ್ಳೆಯ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಮುಂದೆಯೂ ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತವಾಗಿಯೂ ಕನ್ನಡದಲ್ಲಿ ಅಭಿನಯಿಸಲು ಸಿದ್ದ’ ಎನ್ನುತ್ತಾರೆ.

“ಧ್ರುತಿ ಕ್ರಿಯೇಷನ್ಸ್‌’ ಮತ್ತು “ಸಕ್ಸಸ್‌ ಫಿಲಂಸ್‌’ ಬ್ಯಾನರ್‌ನಡಿ “ಕರಿ ಹೈದ ಕರಿ ಅಜ್ಜ’ ಸಿನಿಮಾವನ್ನು ತ್ರಿವಿಕ್ರಮ್‌ ಸಾಫ‌ಲ್ಯ ನಿರ್ಮಿಸುತ್ತಿದ್ದು, ಸಿನಿಮಾಕ್ಕೆ ಸುಧೀರ್‌ ಅತ್ತಾವರ್‌ ನಿರ್ದೇಶನವಿದೆ. ಈಗಾಗಲೇ ಬೆಳ್ತಂಗಡಿ ಸುತ್ತಮುತ್ತ ಈ ಚಿತ್ರದ ಬಹುತೇಕ ಚಿತ್ರೀಕರಿಸಲಾಗಿದೆ.

Advertisement

ಕೊರಗಜ್ಜನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ಕೊರಗಜ್ಜನ ಜನಾಂಗದವರೊಂದಿಗೆ ಚರ್ಚಿಸಿ 12ನೇ ಶತಮಾನದಲ್ಲಿದ್ದ ಕೊರಗಜ್ಜನ ಬಗ್ಗೆ ಯಾರಿಗೂ ಗೊತ್ತಿರದ ನಿಜ ಬದುಕಿನ ವಿಷಯವನ್ನು ತಿಳಿಸುವ ಪ್ರಯತ್ನ ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ ಎಂಬುದು ಚಿತ್ರದ ಕಥಾಹಂದರದ ಬಗ್ಗೆ ಚಿತ್ರತಂಡ ಮಾತು.

Advertisement

Udayavani is now on Telegram. Click here to join our channel and stay updated with the latest news.

Next