Advertisement

ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ ಕಬಿನಿ ಒಡಲು

03:16 PM May 28, 2023 | Team Udayavani |

ಎಚ್‌.ಡಿ.ಕೋಟೆ: ಪ್ರತಿವರ್ಷ ಮೇ ಕೊನೆ ವಾರ ಇಲ್ಲವೆ ಜೂನ್‌ ಮೊದಲ ವಾರದಲ್ಲಿ ಆರಂಭಗೊಳ್ಳಬೇಕಾದ ಮುಂಗಾರು ಮಳೆ ಈ ಬಾರಿ ಒಂದೆರಡು ತಿಂಗಳು ಮುಂಚಿತವಾಗಿ ಆರಂಭಗೊಂಡಿದೆಯಾದರೂ ತಾಲೂಕಿನ ಕಬಿನಿ ಜಲಾಶಯದ ಒಡಲು ದಿನದಿಂದ ದಿನಕ್ಕೆ ತೀರ ಇಳಿಮುಖವಾಗುತ್ತಿದೆ.

Advertisement

ಕಬಿನಿ ಜಲಾಶಯ ಎಂದೊಡನೆ ನೆನಪಾಗೋದು ನೆರೆಯ ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆದಾಗಲೆಲ್ಲಾ ತಮಿಳುನಾಡಿಗೆ ನೀರು ಹರಿಸುವ ತೊಟ್ಟಿ ಎಂದು. ತಮಿಳುನಾಡಿಗೆ ನೀರು ಹರಿಸಬೇಕಾದ ಸಂದರ್ಭದಲ್ಲೆಲ್ಲಾ ಪ್ರಮುಖ ಪಾತ್ರವಹಿಸಿರುವ ಕಬಿನಿ ಜಲಾಶಯದ ಒಡಲು ದಿನದಿಂದ ದಿನಕ್ಕೆ ಬರಿದಾಗ ತೊಡಗಿದ್ದು ರೈತರು ಹಾಗೂ ಜನರಲ್ಲಿ ಆತಂಕ ಮೂಡಿಸಿದೆ.

11 ಸಾವಿರ ಕ್ಯೂಸೆಕ್‌ ನೀರಿನ ಸಾಮರ್ಥ್ಯ ಕಡಿಮೆ: ಜಲಾಶಯದ ಗರಿಷ್ಠ ನೀರಿನ ಮಟ್ಟ (ಸಮುದ್ರಮಟ್ಟದಿಂದ) 2284 ಅಡಿ, ಈ ದಿನದ ನೀರಿನ ಮಟ್ಟ 2251.67 ಅಡಿ ಜಲಾಶಯದ ಒಳಹರಿವು 329 ಕ್ಯೂಸೆಕ್‌, ಹೊರಹರಿವು 500 ಕ್ಯೂಸೆಕ್‌ ಇದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಜಲಾಶಯದ ನೀರಿನ ಶೇಖರಣೆ 2261 ಅಡಿಗಳ ನೀರಿತ್ತು. ಆದರೆ ಈ ಬಾರಿ ಕಳೆದ ಸಾಲಿಗೆ ಹೋಲಿಕೆ ಮಾಡಿದಾಗ 11 ಸಾವಿರ ಕ್ಯೂಸೆಕ್‌ ನೀರಿನ ಸಾಮರ್ಥ್ಯ ಕಡಿಮೆ ಇದೆ. ಕುಡಿಯುವ ನೀರಿಗಾಗಿ ಪ್ರತಿದಿನ 500 ಕ್ಯೂಸೆಕ್‌ ನೀರು ಹೊರಹರಿಯ ಬಿಡಲಾಗುತ್ತಿದೆ.

ಕ್ಷೀಣಿಸುತ್ತಿದೆ ನೀರಿನ ಪ್ರಮಾಣ: ನೆರೆಯ ಕೇರಳ ರಾಜ್ಯದ ವೈನಾಡಿನಲ್ಲಿ ಮಳೆಯಾದಾಗ ಮಾತ್ರ ಕಬಿನಿ ಒಳಹರಿವಿನಲ್ಲಿ ಏರಿಕೆಯಾಗಬೇಕು. ಕೇರಳ ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಜಲಾಶ ಯದ ಒಳಹರಿವಿನಲ್ಲಿ ತೀರ ಇಳಿಕೆ ಕಂಡು ಬಂದಿದೆ. ಮುಂಗಾರು ಮಳೆ ಆರಂಭಕ್ಕೆ ಇನ್ನೂ ಸುಮಾರು 1 ತಿಂಗಳ ಕಾಲಾವಕಾಶ ಇದೆ. ಈಗಲೇ ಜಲಾಶಯದ ಒಡಲು ಬಹುತೇಕ ಕ್ಷೀಣಿಸಿದ್ದು, ದಿನಗಳು ಉರುಳಿದಂತೆ ಮತ್ತಷ್ಟು ನೀರಿನ ಶೇಖ ರಣ ಪ್ರಮಾಣ ಕ್ಷೀಣಿಸುವುದರಲ್ಲಿ ಸಂಶಯ ಇಲ್ಲ.

ನೀರು ಹರಿಸುವುದಕ್ಕೆ ಅವಕಾಶವೇ ಇಲ್ಲ: ಬೇಸಿಗೆ ಆರಂಭಗೊಳ್ಳುತ್ತಿದ್ದಂತೆಯೇ ನೀರಿನ ಸಮಸ್ಯೆ ತಲೆದೂರಿದಾಗ ಕೃಷಿ ಮತ್ತು ಅಂತರ್ಜಲದ ನೀರಿನ ಪ್ರಮಾಣ ಹೆಚ್ಚಿಸಲು ನಾಲೆಗಳ ಮೂಲಕ ನೀರು ಹರಿಸಿ ಕೆರೆಕಟ್ಟೆಗಳಲ್ಲಿ ನೀರು ಶೇಖರಿಸಿ ಕೊಂಡು ಅಂತರ್ಜಲ ಹೆಚ್ಚಿಸುವ ಕಾರ್ಯ ಮಾಮೂಲಾಗಿ ನಡೆಯುತ್ತಿತ್ತು. ಆದರೀಗ ಒಳಹರಿವಿನಲ್ಲಿ ತೀರ ಇಳಿಕೆಯಾಗಿದ್ದು, ಜಲಾಶಯದಲ್ಲಿಯೂ ನೀರಿನ ಶೇಖರಣಾ ಸಾಮರ್ಥ್ಯ ತೀರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕೆರೆಕಟ್ಟೆಗಳನ್ನು ತುಂಬಿಸಿಕೊಳ್ಳುವುದಕ್ಕಾಗಲಿ ನಾಲೆಗಳ ಮೂಲಕ ನೀರು ಹರಿಸುವುದಕ್ಕಾಗಲಿ ಅವಕಾಶ ಇಲ್ಲ ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.

Advertisement

ನೀರಿನ ಸಮಸ್ಯೆ ಪರಿಹರಿಸುವುದೇ ಕಷ್ಟಕರ: ಸದ್ಯದ ನೀರಿನ ಶೇಖರಣಾ ಸಾಮರ್ಥ್ಯವನ್ನು ಗಮನಿಸಿದಾಗ ಮಳೆಯಾಗಿ ಜಲಾಶಯದ ಒಳಹರಿವು ಹೆಚ್ಚಾಗುವ ತನಕ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದೇ ಕಷ್ಟಕರವಾಗಿದೆ ಅನ್ನುವ ಅಂಶ ತಿಳಿದು ಬಂದಿದೆ. ಒಟ್ಟಾರೆ ಸದ್ಯದ ಸ್ಥಿತಿಯಲ್ಲಿ ಕಬಿನಿ ಜಲಾಶಯದ ಒಡಲು ಬಹುತೇಕ ಬರಿದಾಗಿದ್ದು ರೈತರಲ್ಲಿ ಆತಂಕ ಮೂಡಿಸಿದೆ.

ಕಬಿನಿ ಜಲಾಶಯದ ಒಡಲು ಈ ಬಾರಿ ಇಷ್ಟು ಪ್ರಮಾಣದಲ್ಲಿ ಇಳಿಕೆಯಾಗಿರುವುದು ಅಚ್ಚರಿ ಉಂಟು ಮಾಡಿದೆ. ಕೃಷಿಗೆ ನೀರಿನ ಸಮಸ್ಯೆ ಎದುರಾದರೂ ಕುಡಿಯುವ ನೀರಿಗೆ ಭಯಪಡಬೇಕಾದ ಅಗತ್ಯ ಇಲ್ಲ. ಮಳೆ ಆರಂಭಗೊಳ್ಳುತ್ತಿದ್ದಂತೆಯೇ ಜಲಾಶಯ ಭರ್ತಿಯಾಗುವುದರಲ್ಲಿ ಸಂಶಯ ಇಲ್ಲ. – ಪ್ರಸಾದ್‌, ರೈತ

ನೀರು ಅಮೂಲ್ಯ ಬೇಸಿಗೆ ಕಾಲದಲ್ಲಿ ಹನಿಹನಿ ನೀರಿನ ಸಂರಕ್ಷಣೆಗೂ ಜನಸಾಮಾನ್ಯರು ಎಚ್ಚರವಹಿಸಬೇಕು. ಮಳೆಗಾಲ ಆರಂಭಗೊಳ್ಳಲು ಇನ್ನೂ ಒಂದು ತಿಂಗಳಿರುವಾಗಲೇ ಕಬಿನಿ ಜಲಾಶಯ ದಿನದಿಂದ ದಿನಕ್ಕೆ ಬರಿದಾಗುತ್ತಿರುವುದು ಅಘಾತ ಉಂಟು ಮಾಡಿದೆ. – ಪಿ.ಆರ್‌.ಪಳನಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ, ರೈತ ಸಂಘ

– ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next