Advertisement

ಕಬಿನಿ ಭರ್ತಿಯತ್ತ; ಅಧಿಕಾರಿಗಳ ಕ್ರಮಕ್ಕೆ ರೈತರ ಆತಂಕ

09:58 AM Jul 29, 2019 | Team Udayavani |

ಎಚ್.ಡಿ.ಕೋಟೆ: ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಕಳೆದ ಇಪ್ಪತ್ತು ದಿನಗಳಿಂದಲೂ ವ್ಯಾಪಕ ಮಳೆಯಾಗುತ್ತಿರುವುದ ರಿಂದ ರಾಜ್ಯದ ಪ್ರಮುಖ ಜಲಾಶಯಗಳ ಲ್ಲೊಂದಾದ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ 2273.16 ಅಡಿಗಳಷ್ಟು ನೀರು ಸಂಗ್ರಹವಾಗಿರುವುದರಿಂದ ರೈತರಲ್ಲಿ ಸಂತಸ ಹಿಮ್ಮಡಿಗೊಳಿಸಿದೆ. ಆದರೆ, ಪಕ್ಕದ ಸುಭಾಷ್‌ ವಿದ್ಯುತ್‌ ಘಟಕದ ಮೂಲಕ 7 ಸಾವಿರ ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ ಹರಿಸುತ್ತಿರು ವುದರಿಂದ ರೈತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಕಳೆದ ವರ್ಷ ಜಲಾಶಯ ಜೂನ್‌ ತಿಂಗಳ ಅಂತ್ಯದಲ್ಲೇ ಭರ್ತಿಯಾಗಿ ಜು.20 ರಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ದಂಪತಿ ಸಮೇತರಾಗಿ ಬಂದು ಬಾಗೀನ ಅರ್ಪಿಸಿದ್ದರು.

ಆತಂಕವಿತ್ತು:ಈ ಬಾರಿ ಪೂರ್ವ ಮುಂಗಾರು ಸಂ ಪೂರ್ಣವಾಗಿ ಕೈಕೊಟ್ಟು, ಮುಂಗಾರು ಮಳೆಯೂ ತಡವಾದ ಪರಿಣಾಮ ಜಲಾಶಯಕ್ಕೆ ನೀರಿನ ಕೊರತೆ ಎದು ರಾಗಿತ್ತು. ಇದರಿಂದಾಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿ ಆತಂಕ ಮನೆ ಮಾಡಿತ್ತು.

ಕಡೆಗೂ ಒಂದು ತಿಂಗಳು ತಡವಾಗಿಯಾದರೂ ವರುಣದೇವ ಕೃಪೆ ತೋರಿ ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರಿನಲ್ಲಿ ಮುಂಗಾರು ಮಳೆ ಅಬ್ಬರಿಸಿದ್ದರಿಂದ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು ಸದ್ಯದಲ್ಲೇ ಜಲಾಶಯ ಭರ್ತಿ ಆಗುವ ಸಾಧ್ಯತೆ ಇದೆ.

ಇಲ್ಲಿನ ಅಧಿಕಾರಿಗಳು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ತಾಳಕ್ಕೆ ಕುಣಿಯುತ್ತಿದ್ದು, ಜಲಾಶಯ ತುಂಬುವ ಮೊದಲೇ ಪಕ್ಕದ ಸುಭಾಷ್‌ ಪವರ್‌ ಹೌಸ್‌ ಮೂಲಕ ಹೆಚ್ಚಿನ ನೀರನ್ನು ಮುಂಭಾಗದ ನದಿಗೆ ಹರಿಬಿಟ್ಟು ರೈತರ ಬದುಕಿನ ಜೊತೆ ಕಣ್ಣಾಮುಚ್ಚಾಲೇ ಆಟ ಆಡುತ್ತಿದ್ದಾರೆ.

Advertisement

2273.16 ಅಡಿ ನೀರಿದೆ: ಈಗ ಮಳೆ ಕ್ಷೀಣಿಸಿದ್ದು ಕಳೆದೆರಡು ದಿನಗಳ ಹಿಂದೆ 10 ಸಾವಿರ ಕ್ಯೂಸೆಕ್‌ ಇದ್ದ ಒಳಹರಿವಿನ ಪ್ರಮಾಣ 6 ಸಾವಿರಕ್ಕೆ ಕುಸಿದಿದೆ. ಈಗ 2284 ಅಡಿ (19.52 ಟಿ.ಎಂ.ಸಿ) ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ 2273.16 ಅಡಿ ನೀರು ಸಂಗ್ರಹವಿದ್ದು, 7 ಸಾವಿರ ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ.

ಒಟ್ಟಾರೆ ತಡವಾಗಿಯಾದರೂ ಮುಂಗಾರು ಮಳೆ ಆಗಮಿಸಿ ಎಡಬಿಡದೆ ಸುರಿದ ಪರಿಣಾಮ ರಾಜ್ಯದ ಜೀವನಾಡಿ ಎನಿಸಿರುವ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದರೂ, ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗೆ ನೀರು ಹರಿಸದೇ, ನೆರೆ ರಾಜ್ಯ ತಮಿಳುನಾಡಿಗೆ ಹೆಚ್ಚಿನ ನೀರು ಹರಿಸುತ್ತಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದ್ದು, ರೈತರ ನೆರವಿಗೆ ಬಾರದ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಶಪಿಸುತ್ತಿದ್ದಾರೆ.

ಖಾರೀಫ್‌ ಬೆಳೆಗೆ ಸಿಗುವುದೇ ನೀರು?: 2284 ಅಡಿಗಳ ಗರಿಷ್ಟ ಸಾಮರ್ಥ್ಯದ ಕಬಿನಿ ಜಲಾಶಯ ತನ್ನ ಎಡದಂಡೆ-ಬಲದಂಡೆ ಯಲ್ಲಿ 1.13 ಲಕ್ಷ ಎಕರೆಯಷ್ಟು ಅಚ್ಚುಕಟ್ಟು ವ್ಯಾಪ್ತಿ ಹೊಂದಿದ್ದರೂ, ಕಳೆದ 2-3 ವರ್ಷ ಗಳಿಂದ ತಮಿಳುನಾಡು ಖ್ಯಾತೆ ಹಾಗೂ ಸುಭಾಷ್‌ ವಿದ್ಯುತ್‌ ಘಟಕದ ಅಧಿಕಾರಿಗಳು ಮತ್ತು ಜಲಾಶಯದ ಅಧಿಕಾರಿಗಳ ಕಣ್ಣಾ ಮುಚ್ಚಾಲೆಯಿಂದಾಗಿ ಎರಡು ಬೆಳೆಗೆ ನೀರು ಸಿಗದೇ, ಒಂದು ಬೆಳೆಗೆ ಮಾತ್ರ ನೀರು ಸಿಗುತ್ತಿತ್ತು. 2ನೇ ಬೇಸಿಗೆ ಬೆಳೆಗೆ ಗದ್ದೆಗಳನ್ನು ಹದಮಾಡಿದರೂ ಇದುವರೆಗೆ ನೀರು ಸಿಕ್ಕಿಲ್ಲ. ಈಗ ಜಲಾಶಯ ಭರ್ತಿಗೂ ಮೊದಲೇ ತಮಿಳುನಾಡಿಗೆ ಹೆಚ್ಚಿನ ನೀರು ಹರಿಸುತ್ತಿರು ವುದರಿಂದ ಈ ಬಾರಿ ಮುಂಗಾರು ಖಾರೀಫ್‌ ಬೆಳೆಗೆ ನೀರು ಕೈತಪ್ಪುವ ಆತಂಕ ಎದುರಾಗಿದೆ.

 

● ಬಿ.ನಿಂಗಣ್ಣ ಕೋಟೆ

Advertisement

Udayavani is now on Telegram. Click here to join our channel and stay updated with the latest news.

Next