ಎಚ್.ಡಿ.ಕೋಟೆ: ಆಗಸ್ಟ್‌ನಲ್ಲಿ ಕೇರಳದ ವೈನಾಡು, ಜಲಾನಯನ ಪ್ರದೇಶದಲ್ಲಿ ಮಳೆ ಕೈಕೊಟ್ಟ ಪರಿಣಾಮ ತಾಲೂಕಿನ ಜೀವನಾಡಿ ಕಬಿನಿ ಜಲಾಶಯದ ಒಳಹರಿವು ತೀರಾ ಕುಸಿತ ಕಂಡಿದೆ. ಈ ನಡುವೆ ತಮಿಳುನಾಡಿಗೆ ನೀರು ಹರಿಸುತ್ತಿದ್ದು, ನೀರಿನ ಸಂಗ್ರಹ ಮಟ್ಟ(2284)ದಲ್ಲಿ ಗಣನೀಯವಾಗಿ ಇಳಿಗೆ ಆಗುತ್ತಿದೆ.
ಜುಲೈನಲ್ಲಿ ಮುಂಗಾರು ಮಳೆ ಅಬ್ಬರಿಸಿದ್ದರಿಂದ ಒಳ ಹರಿವು 25 ಸಾವಿರ ಕ್ಯೂಸೆಕ್‌ಗೆ ಏರಿಕೆ ಆಗಿ, ಜಲಾಶಯ 15 ದಿನದಲ್ಲಿ ಭರ್ತಿ ಆಗಿತ್ತು. ನದಿಗೆ 20 ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು. ಆದರೆ, ಜುಲೈ ಕೊನೆಯ ವಾರದಿಂದಲೂ ಮಳೆ ಕಡಿಮೆ ಆಗಿದ್ದರಿಂದ ಇದೀಗ ಡ್ಯಾಂನ ಒಳಅರಿವು 950ಕ್ಕೆ ಇಳಿದಿದೆ. ಜಲಾಶಯದ ಇತಿಹಾಸದಲ್ಲೇ ಆಗಸ್ಟ್‌ನಲ್ಲಿ ಕನಿಷ್ಠ ಮಟ್ಟಕ್ಕೆ ಒಳಹರಿವು ಇಳಿಕೆ ಆಗಿದೆ.
ಇದರ ನಡುವೆ ಸರ್ಕಾರವು ನೆರೆಯ ತಮಿಳುನಾಡಿಗೆ ನಿತ್ಯ 5000 ಕ್ಯೂಸೆಕ್, ಬಲದಂಡೆ ನಾಲೆಗೆ 2300 ಕ್ಯೂಸೆಕ್, ಎಡದಂಡೆ ನಾಲೆಗೆ 25 ಕ್ಯೂಸೆಕ್ ನೀರು ಹರಿಸಿತ್ತು. ಈಗಲೂ 2000 ಕ್ಯೂಸೆಕ್‌ನಷ್ಟು ನೀರು ತಮಿಳುನಾಡಿಗೆ ಹರಿಯುತ್ತಲೇ ಇದ್ದು, ಜಲಾಶಯದ ಸಂಗ್ರಹಮಟ್ಟ 2275.72ಕ್ಕೆ ಅಡಿಗೆ ತಲುಪಿದೆ.
ಭತ್ತದ ಬೆಳೆಗೆ ನೀರಿಲ್ಲ?: ಈ ಬಾರಿ ಜಲಾಶಯ ಭರ್ತಿಯಾಗಿ ಅಚ್ಚುಕಟ್ಟು ಪ್ರದೇಶದ ಬಲ, ಎಡದಂಡೆ ನಾಲೆಗೆ ಹಂತವಾಗಿ ನೀರು ಹರಿಸುವುದಾಗಿ ಹೇಳಿದ್ದ ಅಧಿಕಾರಿಗಳು, ಸ್ವಲ್ಪ ನೀರು ಹರಿ ಬಿಟ್ಟಿದ್ದರು. ಆದರೆ, ಈಗ ಭತ್ತದ ಬೆಳೆಗೆ ನೀರು ಸಿಗುವುದು ಕಷ್ಟ ಎಂಬ ಮಾತು ಅಧಿಕಾರಿಗಳ ಮೂಲಗಳಿಂದ ಕೇಳಿಬಂದಿದೆ. ಇದರಿಂದ ಭತ್ತದ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತರಲ್ಲಿ ಆತಂಕ ಮನೆ ಮಾಡಿದೆ.
ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸಂಪೂರ್ಣ ನಿಲ್ಲಿಸಿ, ನಾಲೆಗಳಿಗೆ ಬಿಡುವಂತೆ ರೈತರು ಮನವಿ ಮಾಡಿದ್ದಾರೆ.
ಈ ಬಾರಿ ಜಲಾಶಯ ತುಂಬಿದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಬೆಳೆ ನಾಟಿಗೆ ಮುಂದಾಗಿದ್ದರು. ಆದರೆ, ಈಗ ಡ್ಯಾಂನಲ್ಲಿ ನೀರು ಕುಸಿತಕಂಡಿದೆ. ಭತ್ತ ಬೆಳೆಗೆ ನೀರು ಕೊಡದಿದ್ದರೆ, ಬೀದಿಗಿಳಿದು ಹೋರಾಟ ಮಾಡ್ತೇವೆ.
-ಎಚ್.ಬಿ.ಶಿವಲಿಂಗಪ್ಪ, ಅಚ್ಚುಕಟ್ಟು ಪ್ರದೇಶದ ರೈತ ಹೋರಾಟಗಾರ.
ಜಲಾಶಯದ ಒಳ ಹರಿವು ಕ್ಷೀಣಿಸಿದೆ. ಈ ಬಾರಿ ಭತ್ತದ ಬೆಳೆಗೆ ನೀರು ಕಷ್ಟ. ನೀರು ಕೊಡುತ್ತೇವೆ ಎಂದು ನಾವೂ ಹೇಳಿಲ್ಲ, ಕುಡಿಯುವ ನೀರಿಗೆ ಯಾವುದೇ ತೊಂದರೆಯಿಲ್ಲ.
-ಚಂದ್ರಶೇಖರ್, ಇಇ, ಕಬಿನಿ ಜಲಾಶಯ, ಬೀಚನಹಳ್ಳಿ.
– ಬಿ.ನಿಂಗಣ್ಣಕೋಟೆ