Advertisement

ಕಬ್ಬಿನಾಲೆ: ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಊರು

01:00 AM Mar 12, 2019 | Harsha Rao |

ಕುಂದಾಪುರ: ಕೇವಲ 5 ನಿಮಿಷ ನೆಟ್‌ವರ್ಕ್‌ ಇಲ್ಲದಿದ್ದರೆ ಈಗ ಸಮಯ ಕಳೆಯುವುದು ಕಷ್ಟ ಎನ್ನುವ ಸ್ಥಿತಿ ಈಗಿನದು. ಆದರೆ ಕಬ್ಬಿನಾಲೆ, ದೇವರಬಾಳು ಎಂಬ ಉಡುಪಿ ಜಿಲ್ಲೆಯ ನಕ್ಸಲ್‌ ಪೀಡಿತ ದುರ್ಗಮ ಊರುಗಳು ವರ್ಷಾನು ಗಟ್ಟಲೆಯಿಂದ ನೆಟ್‌ವರ್ಕ್‌ ವಂಚಿತವಾಗಿವೆ. 

Advertisement

ಇಲ್ಲಿನ ಜನ ಒಂದು ದೂರವಾಣಿ ಕರೆ ಮಾಡಬೇಕಾದರೆ 5 ಕಿ.ಮೀ. ಹೋಗಬೇಕು. ಅದು ಕೇವಲ ಬಿಎಸ್ಸೆನ್ನೆಲ್‌ ಮಾತ್ರ. ಬೇರೆ ಖಾಸಗಿ ನೆಟ್‌ವರ್ಕ್‌ಗೆ ಸಿಗಬೇಕಿದ್ದರೆ ಕನಿಷ್ಠ 7 ಕಿ.ಮೀ. ಕ್ರಮಿಸಬೇಕು. ಇದು ಜಗತ್ತಿನ ಒಂದು ಭಾಗ 5ಜಿಯತ್ತ ದಾಪುಗಾಲಿಡು ತ್ತಿರುವ ಹೊತ್ತಿನಲ್ಲಿ ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮದಲ್ಲಿರುವ ಕಬ್ಬಿನಾಲೆ, ದೇವರಬಾಳು, ಕಟ್ಟಿನಾಡಿ, ಕಾರೇಬೈಲು ಊರುಗಳ ಸ್ಥಿತಿಗತಿ. 

ಒಂದು ಕರೆಗೆ 5 ಕಿ.ಮೀ.!
ಬಿಎಸ್ಸೆನ್ನೆಲ್‌ ಸಿಮ್‌ ಇದ್ದವರು ಕರೆ ಮಾಡಬೇಕಾದರೆ ಕಬ್ಬಿನಾಲೆ, ದೇವರಬಾಳುವಿನಿಂದ 5 ಕಿ.ಮೀ. ದೂರದಲ್ಲಿರುವ ಚಕ್ರಾ ಮೈದಾನದೆಡೆಗೆ ಬರಬೇಕು. ಇನ್ನು ಇತರ ಖಾಸಗಿ ಕಂಪೆನಿಗಳ ಸಂಪರ್ಕ ಹೊಂದಿರುವವರಿಗೆ 7 ಕಿ.ಮೀ. ದೂರದ ಹಳ್ಳಿಹೊಳೆ ಪೇಟೆಗೆ ಬಂದರೆ ಮಾತ್ರ ಸಿಗ್ನಲ್‌ ಸಿಗುತ್ತದೆ. 

ಎಷ್ಟು ಅಂತರ?
ಈ ಊರುಗಳು ಹಳ್ಳಿಹೊಳೆಯಿಂದ 7 ಕಿ.ಮೀ., ಸಿದ್ದಾಪುರದಿಂದ 20 ಕಿ.ಮೀ., ಕುಂದಾಪುರದಿಂದ 40 ಕಿ.ಮೀ. ಹಾಗೂ ತಾಲೂಕು ಕೇಂದ್ರವಾದ ಬೈಂದೂರಿನಿಂದ 48 ಕಿ.ಮೀ. ಅಂತರದಲ್ಲಿವೆ. 

ಮನೆಗಳೆಷ್ಟು?
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಬ್ಬಿನಾಲೆಯಲ್ಲಿ ಸುಮಾರು 40, ದೇವರಬಾಳುವಿನಲ್ಲಿ ಸುಮಾರು 35, ಕಟ್ಟಿನಾಡಿಯಲ್ಲಿ 25, ಕಾರೇಬೈಲಿನಲ್ಲಿ ಸುಮಾರು 60 ಮನೆಗಳಿದ್ದು, ಒಟ್ಟು 160ಕ್ಕೂ ಹೆಚ್ಚು ಮನೆಗಳ ಜನ ಮೊಬೈಲ್‌ ನೆಟ್‌ವರ್ಕ್‌ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ. 

Advertisement

ನಕ್ಸಲ್‌ ಪೀಡಿತ ಊರುಗಳು
ದೇವರಬಾಳುವಿನಲ್ಲಿ 2005ರಲ್ಲಿ ಇಬ್ಬರು ನಕ್ಸಲರು ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದರೆ, 2008ರಲ್ಲಿ
ನಕ್ಸಲ್‌ ದಾಳಿಗೆ ಕೃಷಿಕರೊಬ್ಬರು ಸಾವನ್ನಪ್ಪಿದ್ದರು. ಇದರಿಂದಲೇ ಹೊರಜಗತ್ತಿಗೆ ಹೆಚ್ಚು ಪರಿಚಿತವಾ
ಗಿರುವ ಊರುಗಳಿವು. ಈಗ ನಕ್ಸಲ್‌ ಚಟುವಟಿಕೆ ಅಷ್ಟೇನೂ ಇಲ್ಲದಿದ್ದರೂ ಭೀತಿಯಂತೂ ಇದ್ದೇ ಇದೆ. 

29 ಸ್ಥಿರ ದೂರವಾಣಿ
ಕಬ್ಬಿನಾಲೆಯಲ್ಲಿ 6, ದೇವರಬಾಳುವಿನಲ್ಲಿ 4, ಕಟ್ಟಿನಾಡಿಯಲ್ಲಿ 7, ಕಾರೇಬೈಲು 12 ಸ್ಥಿರ ದೂರವಾಣಿ ಹಾಗೂ ಇತರ ದೂರವಾಣಿಗಳು ಇದೆ. ಇಲ್ಲಿರುವ ಸುಮಾರು 160 ಮನೆಗಳ ಪೈಕಿ ಪ್ರತೀ ಮನೆಯಲ್ಲಿ ಕನಿಷ್ಠ 2 ಮೊಬೈಲ್‌ ಫೋನ್‌ ಇದ್ದು, ಕೆಲವು ಮನೆಗಳ ಎಲ್ಲರಲ್ಲಿಯೂ ಮೊಬೈಲ್‌ ಇದೆ. ಆದರೆ ನೆಟ್‌ವರ್ಕ್‌ ಮಾತ್ರ ಇಲ್ಲ. 

ಜನರು ಅರ್ಜಿ ಸಲ್ಲಿಸಲಿ
ಕಬ್ಬಿನಾಲೆ, ದೇವರಬಾಳು ಪ್ರದೇಶದಲ್ಲಿ ಬಿಎಸ್‌ಎನ್‌ಎಲ್‌ ಟವರ್‌ ಅಗತ್ಯತೆ ಕುರಿತು ಅಲ್ಲಿನ ಯಾರಾದರೂ 2-3 ಮಂದಿ ಬಿಎಸ್‌ಎನ್‌ಎಲ್‌ನ ಮಂಗಳೂರಿನ ಪ್ರಾದೇಶಿಕ ಕಚೇರಿಗೆ ಅರ್ಜಿ ಸಲ್ಲಿಸಲಿ. ಇದರಲ್ಲಿ ಆ ಭಾಗದ ಬಿಎಸ್‌ಎನ್‌ಎಲ್‌ ಬಳಕೆದಾರರ ಸಿಮ್‌ ನಂಬರ್‌ಗಳನ್ನು ಕೂಡ ಸೇರಿಸಿ ಕಳುಹಿಸಲಿ. ಆದಾಯ ಬರುವುದನ್ನು, ಜನರಿಗೆ ನೆಟ್‌ವರ್ಕ್‌ ಇಲ್ಲದೆ ತೊಂದರೆಯಾಗುತ್ತಿರುವುದನ್ನೆಲ್ಲ ಪರಿಶೀಲಿಸಿ, ಕ್ರಮಕೈಗೊಳ್ಳಲಾಗುವುದು. 
 – ವಿಜಯಲಕ್ಷ್ಮೀ ಆಚಾರ್ಯ ಡಿಜಿಎಂ, ಬಿಎಸ್ಸೆನ್ನೆಲ್‌ ಉಡುಪಿ

ಸಲ್ಲಿಸಿದರೂ ಪ್ರಯೋಜನವಿಲ್ಲ
ಯಾರಾದರೂ ತುರ್ತು ಅನಾರೋಗ್ಯಕ್ಕೀಡಾದಾಗ, ಗಂಭೀರವಾದಾಗ ವಾಹನ ಕರೆ ತರಬೇಕಾದರೆ ಹೋಗಿಯೇ ಹೇಳಬೇಕು. ಫೋನ್‌ ಮಾಡಲು ನೆಟ್‌ವರ್ಕ್‌ ಸಿಗುವುದಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ದೇವರಬಾಳು, ಕಬ್ಬಿನಾಲೆ, ಕಾರೇಬೈಲುಗಳಿಗೆ ಅನುಕೂಲವಾಗುವಂತೆ ಈ ಭಾಗದಲ್ಲಿ ಎಲ್ಲಿಯಾದರೂ ಒಂದು ಟವರ್‌ ನಿರ್ಮಿಸಿದರೆ ತುಂಬಾ ಪ್ರಯೋಜನಕಾರಿ. 
 – ಗಣೇಶ್‌ ಕಬ್ಬಿನಾಲೆ, ಸ್ಥಳೀಯರು

– ಪ್ರಶಾಂತ್‌ ಪಾದೆ
 

Advertisement

Udayavani is now on Telegram. Click here to join our channel and stay updated with the latest news.

Next