Advertisement

ಬಸವ ಮಾಲಾಧಾರಿಗಳಿಂದ ತುಂಬಿದ ಕಬ್ಬಳಿ ಕ್ಷೇತ್ರ

09:41 PM Jan 15, 2020 | Lakshmi GovindaRaj |

ಚನ್ನರಾಯಪಟ್ಟಣ: ತಾಲೂಕಿನ ಪ್ರಸಿದ್ಧ ಕಬ್ಬಳಿ ಕ್ಷೇತ್ರಕ್ಕೆ ಸಾವಿರಾರು ಬಸವ ಮಾಲಾಧಾರಿಗಳು ಆಗಮಿಸಿ ಆರಾಧ್ಯದೈವ ಬಸವೇಶ್ವರಸ್ವಾಮಿಯ ದರ್ಶನ ಪಡೆದು ಪುನೀತರಾದರು. ಸಂಕ್ರಾಂತಿ ಹಬ್ಬದ ಹಿಂದಿನ ದಿನ ರಾತ್ರಿ ವಿವಿಧ ಗ್ರಾಮಗಳಿಂದ ಬಂದಿದ್ದ ಸುಮಾರು 45 ದೇವತೆಗಳಿಗೆ ವಿಶೇಷ ಅಲಂಕಾರ ಮಾಡಿ ಮೆರವಣಿಗೆ ನಡೆಸಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ರಾತ್ರಿಯಿಡೀ ಜಾಗರಣೆ ನಡೆಸಿ ಸ್ವಾಮಿಯ ಧ್ಯಾನ ಮಾಡಿ ದೇವರ ಕೃಪೆಗೆ ಪಾತ್ರರಾದರು.

Advertisement

ಸಾವಿರಾರು ಮಾಲಾಧಾರಿಗಳು: ಇದುವೆ ತಾಲೂಕಿನ ಪ್ರಸಿದ್ಧ ಕ್ಷೇತ್ರ ಕಬ್ಬಳಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆಂದು ಭಕ್ತಾದಿಗಳು ಬರುವಂತೆ ಇಲ್ಲಿಯ ಆರಾಧ್ಯದೈವ ಬಸವೇಶ್ವರಸ್ವಾಮಿ ದರ್ಶನಕ್ಕೆ ಸಾವಿರಾರು ಭಕ್ತಾದಿಗಳು ಬಸವಮಾಲೆ ಧರಿಸಿ ಆಗಮಿಸಿದ್ದರು.

ರಾಜ್ಯದ ಶಬರಿಮಲೆ: ಹಣವಂತರು ಶಬರಿಗಿರಿಗೆ ಹೋಗುತ್ತಾರೆ. ಆದರೆ ಜನ ಸಾಮಾನ್ಯರು ಕಬ್ಬಳಿ ಬಸವಮಾಲೆ ಧರಿಸಿ ದೈವ ಕೃಪೆಗೆ ಪಾತ್ರರಾಗುತ್ತಾರೆ. ದಿ.ಶಿವಾನಂದ ಅವಧೂತ ಸ್ವಾಮೀಜಿ ಅವರು ಕೇವಲ 20 ಮಂದಿಯಿಂದ ಆರಂಭಿಸಿದ ಧನುರ್ಮಾಸ ಪೂಜೆಗೆ ಪ್ರಸ್ತುತ 35 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುತ್ತಿದ್ದಾರೆ.

28 ದಿನ ಪೂಜೆ: ಸಂಕ್ರಾಂತಿ ಹಬ್ಬಕ್ಕೆ 28 ದಿನ ಮೊದಲು ಕ್ಷೇತ್ರ ಕಬ್ಬಳಿಗೆ ಆಗಮಿಸಿ ಬಸವೇಶ್ವರ ದೇವಾಲಯಲ್ಲಿ ಪೂಜೆ ಸಲ್ಲಿಸಿ ಇಲ್ಲಿನ ಪುಷ್ಕರಣಿಯಿಂದ ಕಲಶ ತೆಗೆದುಕೊಂಡು ಹೋಗಿ ಮಾಲೆ ಧರಿಸುವ ಭಕ್ತಾದಿಗಳು ನೇಮ ನಿಷ್ಟೆಯಿಂದ ನಡೆದುಕೊಳ್ಳುತ್ತಾರೆ.

ವೈಭವದ ಮೆರವಣಿಗೆ: ತ್ಯಾಗ ಜೀವನ ಅನುಸರಿಸಿ, ತ್ರಿಕಾಲ ಪೂಜೆಯೊಂದಿಗೆ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ಸಂಕ್ರಾಂತಿ ಹಿಂದಿನ ದಿನ ತಮ್ಮ ಗ್ರಾಮಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡಿ ಕಾಲ್ನಡಿಗೆಯಲ್ಲಿ ಗ್ರಾಮದೇವತೆಯೊಂದಿಗೆ ಶ್ರೀಕ್ಷೇತ್ರ ಕಬ್ಬಳಿ ಬಸವೇಶ್ವರಸ್ವಾಮಿ ನಾಮಸ್ಮರಣೆಯೊಂದಿಗೆ ವೈಭವೋಪೇತ ಮೆರವಣಿಗೆಯೊಂದಿಗೆ ಕಬ್ಬಳಿಗೆ ಆಗಮಿಸುತ್ತಾರೆ.

Advertisement

ಕಲ್ಯಾಣಿಯಲ್ಲಿ ತೆಪ್ಪೋತ್ಸವ: ಲಕ್ಷ ದೀಪೋತ್ಸವ ಶ್ರೀಕ್ಷೇತ್ರದಲ್ಲಿ ವಿಶೇಷವಾಗಿ ನಡೆಯುತ್ತದೆ. ದೇವಾಲಯದ ಬಲಭಾಗದಲ್ಲಿ ಇರುವ ಕಲ್ಯಾಣಿಯಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕ್ಷೇತ್ರದ ಬಸವೇಶ್ವರಸ್ವಾಮಿ, ಚೌಡೇಶ್ವರಿ ದೇವಿಯ ತೆಪ್ಪೋತ್ಸವ ನಡೆಯುತ್ತದೆ. ತೆಪ್ಪೋತ್ಸವ ಮುಕ್ತಾಯವಾದ ಬಳಿಕ ಶ್ರೀಕ್ಷೇತ್ರಕ್ಕೆ ಆಗಮಿಸಿದ ಎಲ್ಲಾ ಸದ್ಬಕ್ತರಿಗೆ ಆದಿಚುಂಚನಗಿರಿ ಶಾಖಾ ಮಠದಿಂದ ಪ್ರಸಾದ ನೀಡಲಾಗುತ್ತಿದೆ.

ಕಬ್ಬಳಿ ಧನುರ್ಮಾಸ ಪೂಜೆ ಅಂತ್ಯ
ಚನ್ನರಾಯಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿಯಲ್ಲಿ ಧನುರ್ಮಾಸ ಪೂಜೆ ಮುಕ್ತಾಯದ ಅಂಗವಾಗಿ ಚೌಡೇಶ್ವರಿ ದೇವಿ ಹಾಗೂ ಬಸವೇಶ್ವರಸ್ವಾಮಿ ಉತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.

ಧನುರ್ಮಾಸ ಮುಕ್ತಾಯದಯಲ್ಲಿ ಮುಂಜಾನೆಯಿಂದಲೇ ಸನ್ನಿಧಿಯಲ್ಲಿ ಬಸವೇಶ್ವರಸ್ವಾಮಿ ಮೂಲ ವಿಗ್ರಹಕ್ಕೆ ಜಲ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ ಜರುಗಿತು. ಬಳಿಕ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು, ಭಕ್ತರು ಹಣ್ಣು-ಕಾಯಿ ಅರ್ಪಿಸಿ ಶ್ರೀಕ್ಷೇತ್ರದ ಅಧಿದೇವತೆ ಬಸವೇಶ್ವರಸ್ವಾಮಿ ದರ್ಶನ ಪಡೆದು ಪುನೀತರಾದರು.

ಸಂಜೆ 6.30ಕ್ಕೆ ಕಬ್ಬಳಿ ಮಠದ ಶಿವಪುತ್ರಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಉತ್ಸವ ಗ್ರಾಮದ ರಾಜಬೀದಿಯಲ್ಲಿ ಸಾಗಿ ಬೋರೆಮೇಗಲ ಬಸವೇಶ್ವರಸ್ವಾಮಿ ಸನ್ನಿಧಿಗೆ ಆಗುಮಿಸಿತು. ರಾತ್ರಿ 8.30ರಲ್ಲಿ ಚೌಡೇಶ್ವರಿ ದೇವಿ ಉತ್ಸವ ಮಂಗಳವಾದ್ಯದೊಂದಿಗೆ ಪ್ರಾರಂಭಗೊಂಡು ಬಸವೇಶ್ವರಸ್ವಾಮಿ ಶ್ರೀಕ್ಷೇತ್ರದಲ್ಲಿ ದೇಗುಲದ ಸುತ್ತ ಮೂರು ಸುತ್ತು ಪ್ರದಕ್ಷಣೆ ಬಂದ ಬಳಿಕ ದೇವಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.

ಶ್ರೀಕ್ಷೇತ್ರಕ್ಕೆ ತುಮಕೂರು, ತಿಪಟೂರು, ತುರುವೇಕೆರೆ, ಮಂಡ್ಯ, ನಾಗಮಂಗಲ, ಕೆಆರ್‌ಪೇಟೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಬಸವ ಮಾಲಾಧಾರಿಗಳು ಬಸವ ಕಳಶ ಹೊತ್ತು ಗ್ರಾಮದೇವತೆಯನ್ನು ಉತ್ಸವದಲ್ಲಿ ಕರೆತಂದಿದರು. ಉತ್ಸವದಲ್ಲಿ ಸುಮಾರು ನಲವತ್ತೈದಕ್ಕೂ ಹೆಚ್ಚು ಗ್ರಾಮದೇವತೆಯರು ಪಾಲ್ಗೊಂಡಿದ್ದು, ಡೊಳ್ಳು ಕುಣಿತ, ಚಿಲಿಪಿಲಿ ಬೊಂಬೆ, ವೀರಗಾಸೆ ಕುಣಿತ ಹಾಗೂ ವಿವಿಧ ಕಲಾ ತಂಡಗಳು ಮೇಳೈಸಿದವು. ಬಸವ ಮಾಲಾಧಾರಿಗಳು ದೇಗುಲದ ಆವರಣದಲ್ಲಿ ಬಸವ ಜಪ ಹಾಗೂ ಭಜನೆ ನಡೆಸಿದರು.

ಶ್ರೀಕ್ಷೇತ್ರ ಕಬ್ಬಳಿಗೆ ಆಗುಸಿದ್ದ ದೇವತೆಗಳಿಗೆ ಬುಧವಾರ ಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿದ್ದು, ಮಠದ ವತಿಯಿಂದ ಮಡಿಲಕ್ಕಿ ನೀಡಿ ಗೌರವಿಸಿ ಸ್ವಗ್ರಾಮಗಳಿಗೆ ವೈಭವದ ಉತ್ಸವದೊಂದಿಗೆ ಕಳಿಸಿಕೊಡಲಾಯಿತು. ಆದಿಚುಂಚನಗಿರಿ ಹಾಸನ ಶಾಖಾ ಮಠದ ಕಾರ್ಯದರ್ಶಿ ಶಂಭುನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾಮಠದ ಸ್ವಾಮೀಜಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next