ಕಾಠ್ಮಂಡು (ನೇಪಾಲ), ಡಿ. 9: ಸೌತ್ ಏಶ್ಯನ್ ಗೇಮ್ಸ್ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತ ಅವಳಿ ಚಿನ್ನವನ್ನು ತನ್ನದಾಗಿಸಿಕೊಂಡಿದೆ. ಪುರುಷರ ಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾವನ್ನು 51-18 ಅಂಕಗಳಿಂದ ಮಣಿಸಿತು. ವನಿತೆಯರು ಆತಿಥೇಯ ನೇಪಾಲವನ್ನು 50-13ರಿಂದ ಹಿಮ್ಮೆಟ್ಟಿಸಿದರು.
Advertisement
ಪುರುಷರ ವಿಭಾಗದಲ್ಲಿ ನಿತೇಶ್ ಕುಮಾರ್, ವಿಶಾಲ್ ಭಾರದ್ವಾಜ್, ಸುನೀಲ್ ಕುಮಾರ್, ಪರ್ವೇಶ್ ಭೈನ್ಸ್ ವಾಲ್, ನವೀನ್ ಕುಮಾರ್, ಪವನ್ ಶೆಹ್ರಾವತ್ ಮತ್ತು ದೀಪಕ್ ಹೂಡಾ ಅಮೋಘ ಪ್ರದರ್ಶನವಿತ್ತರು. ವನಿತಾ ವಿಭಾಗದಲ್ಲಿ ರಿತು ಕುಮಾರಿ, ನಿಶಾ, ಪುಷ್ಪಾ, ಸಾಕ್ಷಿ ಕುಮಾರ್, ಪ್ರಿಯಾಂಕಾ, ರಿತು ನೇಗಿ, ದೀಪಿಕಾ ಹೆನ್ರಿ ಜೋಸೆಫ್ ನೇಪಾಲಕ್ಕೆ ತಲೆಯೆತ್ತಿ ನಿಲ್ಲಲು ಆಸ್ಪದವನ್ನೇ ನೀಡಲಿಲ್ಲ.
ಸೌತ್ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ವನಿತಾ ಫುಟ್‌ಬಾಲ್ ತಂಡ ಹ್ಯಾಟ್ರಿಕ್ ಚಿನ್ನದ ಸಾಧನೆಗೈದಿದೆ. ಸೋಮವಾರದ ಫೈನಲ್‌ನಲ್ಲಿ ಭಾರತ ತಂಡ 2-0 ಗೋಲುಗಳಿಂದ ಆತಿಥೇಯ ನೇಪಾಲವನ್ನು ಮಣಿಸಿತು. 29ರ ಹರೆಯದ ಸ್ಟ್ರೈಕರ್ ಬಾಲಾ ದೇವಿ ಭಾರತದ ತಾರಾ ಆಟಗಾರ್ತಿಯಾಗಿ ಗೋಚರಿಸಿದರು. ಪಂದ್ಯದ ಎರಡೂ ಅವಧಿಗಳಲ್ಲಿ ಒಂದೊಂದು ಗೋಲು ಬಾರಿಸಿ ಗೆಲುವಿನ ರೂವಾರಿಯಾಗಿ ಮೂಡಿಬಂದರು.