Advertisement

ಕಬಡ್ಡಿ  ಆಟಗಾರನಿಗೆ ರಾಷ್ಟ್ರ ರಕ್ಷಣೆಯ ಛಲ

09:58 AM Feb 14, 2018 | |

ಕ್ರೀಡೆಯಲ್ಲಿದ್ದ ಅಪಾರ ಆಸಕ್ತಿಯ ಜತೆಗೆ ದೇಶ ಸೇವೆ ಮಾಡಬೇಕೆಂಬ ತುಡಿತವೇ ಅವರ ಸೇನೆಗೆ ಸೇರುವ ಹಾದಿ ಯನ್ನು ಸುಲಭಗೊಳಿಸಿತ್ತು. ಎನ್‌ಸಿಸಿಯ ನಿರಂತರ ಕಾರ್ಯ ಚಟುವಟಿಕೆಯಲ್ಲಿದ್ದ ಅನುಭವ ಅವರ ಹಾದಿಯನ್ನು ಮತ್ತಷ್ಟು ಸರಳಗೊಳಿಸಿತ್ತು. 

Advertisement

ಮಂಗಳೂರು : ಊರಲ್ಲಿ ಎಲ್ಲೇ ಕಬಡ್ಡಿ ಇದ್ದರೂ ಹಾಜರ್‌. ಶಾಲಾ ದಿನಗಳಿಂದಲೇ ಆಟೋಟಗಳಲ್ಲಿ ತೀವ್ರ ಆಸಕ್ತಿ.
ಇಂತಹ ತರುಣ ಇಂದು ಗಡಿಯಲ್ಲಿ ದೇಶ ಕಾಯುವ ಸೈನಿಕ. ಆಟೋಟಗಳಲ್ಲಿದ್ದ ಆಸಕ್ತಿ ರಾಷ್ಟ್ರಸೇವೆಯ ತುಡಿತ ಮೂಡಿಸಿದ್ದು ಬಂಟ್ವಾಳ ತಾಲೂಕಿನ ಇರಾದ ಸೂತ್ರಬೈಲಿನ ದಿನೇಶ್‌ ಎಸ್‌. ಅವರನ್ನು ಸೈನಿಕನನ್ನಾಗಿ ಮಾಡಿತು.


ಸೇನಾ ಕ್ಯಾಂಪ್‌ನಲ್ಲಿ ಸಹವರ್ತಿಗಳೊಂದಿಗೆ.

ಇರಾ ಗ್ರಾ.ಪಂ. ಸದಸ್ಯರಾಗಿದ್ದ ದಿ| ಚಂದಪ್ಪ ಸುವರ್ಣ ಸೂತ್ರಬೈಲು ಹಾಗೂ ಭಾರತಿ ದಂಪತಿಯ 6 ಮಂದಿ ಪುತ್ರರಲ್ಲಿ ಮೂರನೆಯವರಾದ ದಿನೇಶ್‌ ಎಳವೆಯಲ್ಲೇ ಸೇನೆಯ ಬಗ್ಗೆ ತೀವ್ರ ಕುತೂಹಲ, ಆಸಕ್ತಿ ಇಟ್ಟುಕೊಂಡಿದ್ದರು. ಸೇನೆಯ ಮೂಲಕ ದೇಶಸೇವೆ ಮಾಡಬೇಕೆಂಬ ತುಡಿತ ಅವರಲ್ಲಿ ಅದಾಗಲೇ ಜಾಗೃತಿಯಾಗಿದ್ದು, ಹೆತ್ತವರು, ಸೋದರರ ಬೆಂಬಲದಿಂದ ಹೆಮ್ಮೆಯ ಸೈನಿಕನಾಗಿದ್ದಾರೆ.

ಸೇನೆಗೆ ಸೇರಲು ಮೆಟ್ಟಿಲಾದ ಎನ್‌ಸಿಸಿ
ಇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಂಚಿ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದ ದಿನೇಶ್‌ ಅವರು ಬಳಿಕ ಬಂಟ್ವಾಳದ ಎಸ್‌.ವಿ.ಎಸ್‌. ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಪಡೆದರು. ಕಾಲೇಜಿನಲ್ಲಿದ್ದಾಗ ಎನ್‌ಸಿಸಿಯಲ್ಲಿ ಅವರು ಸಕ್ರಿಯವಾಗಿದ್ದು, ಸೇನೆಗೆ ಸೇರುವ ಆಸಕ್ತಿ ನೂರ್ಮಡಿಯಾಗಿತ್ತು. ಇದರೊಂದಿಗೆ ಶಾಲಾ ಜೀವನದಲ್ಲಿ ನಿರಂತರವಾಗಿ ಆಟೋಟಗಳಲ್ಲಿ ಭಾಗಿಯಾಗುತ್ತಿದ್ದರು.

ವಾಲಿಬಾಲ್‌, 100 ಮೀ., 200 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ ಇತ್ಯಾದಿಗಳಲ್ಲಿ ಸಕ್ರಿಯವಾಗಿ ತಮ್ಮ ಶಾಲೆ,
ಕಾಲೇಜನ್ನು ಪ್ರತಿನಿಧಿಸುತ್ತಿದ್ದರು. ಕಬಡ್ಡಿಯಲ್ಲಿ ಗಮನಾರ್ಹ ಸಾಧನೆ ತೋರುತ್ತಿದ್ದರಿಂದ ಓರ್ವ ಯಶಸ್ವಿ ಆಟಗಾರನ ಪಟ್ಟಕ್ಕೇರಿದ್ದರು.

Advertisement

ಎಸ್‌ವಿಎಸ್‌ ಕಾಲೇಜಿನ ಕಬಡ್ಡಿ ತಂಡವನ್ನು ದಿನೇಶ್‌ ಅವರು ರಾಜ್ಯಮಟ್ಟದ ಪಂದ್ಯಾಟದಲ್ಲಿದಲ್ಲಿ ಪ್ರತಿನಿಧಿಸಿದ್ದರು. ಭಾರತ್‌ ಫ್ರೆಂಡ್ಸ್‌ ಕ್ಲಬ್‌ ಇರಾ ಇದರ ಸಕ್ರಿಯ ಸದಸ್ಯರಾಗಿ, ಕರಾವಳಿ ವ್ಯಾಪ್ತಿಯಲ್ಲಿ ನಡೆದ ವಿವಿಧ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಉತ್ತಮ ಕಬಡ್ಡಿ ಆಟಗಾರ ಎಂಬ ಮಾನ್ಯತೆಯನ್ನೂ ಪಡೆದಿದ್ದರು.

ಸೇನೆಗೆ ಸುಲಭ ಸೇರ್ಪಡೆ
ನಿರಂತರ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದರಿಂದ ಮತ್ತು ಎನ್‌ ಸಿಸಿಯಲ್ಲಿನ ಅನುಭವ ದಿನೇಶ್‌ ಅವರನ್ನು ಸೇನೆಗೆ ಸೇರಲು ಪ್ರೇರಣೆ ನೀಡಿತು. ಮಂಗಳೂರಲ್ಲಿ ನಡೆದ ಸೇನಾ ನೇಮಕಾತಿ  ರ‍್ಯಾಲಿಯಲ್ಲಿ ಅವರು ಭಾಗಿಯಾಗಿದ್ದು 2004 ಜ. 14ರಂದು ಸೇನೆಗೆ ಸೇರ್ಪಡೆಗೊಂಡರು. ಬಳಿಕ ಬೆಂಗಳೂರಿನ ಎಎಸ್‌ಸಿ ಸೆಂಟರ್‌ನಲ್ಲಿ ಒಂದು ವರ್ಷ ತರಬೇತಿ ಪಡೆದಿದ್ದು ಅಸ್ಸಾಂಗೆ ಮೊದಲ ಪೋಸ್ಟಿಂಗ್‌ ಆಗಿತ್ತು. 

ಮನೆಯಲ್ಲೊಬ್ಬ ಸೈನಿಕನಿದ್ದಾನೆ  ಎಂಬುದೇ ಹೆಮ್ಮೆ
ಶಾಲಾ-ಕಾಲೇಜು ಹಂತದಲ್ಲೇ ಸೇನೆಗೆ ಸೇರಿ ದೇಶಸೇವೆ ಮಾಡುವ ಬಗ್ಗೆ ವಿದ್ಯಾರ್ಥಿಗಳು ಪಣತೊಡಬೇಕು. ದಿನೇಶ್‌ ಕೂಡ ಇದೇ ರೀತಿಯಲ್ಲಿ ಸೇನೆ ಸೇರಿಕೊಂಡಿದ್ದಾನೆ. ಸೇನೆಯಲ್ಲಿ ನಮ್ಮ ಮನೆಯ ಸದಸ್ಯರೊಬ್ಬರಿದ್ದಾರೆ ಎಂಬುದೇ ನಮಗೆ ಹೆಮ್ಮೆ. ಯುವ ಸಮುದಾಯ ಜಾತಿ-ಧರ್ಮದ ಆಧಾರದಲ್ಲಿ ಮನಸ್ಸುಗಳನ್ನು ಒಡೆವ ಬದಲು ಸೇನೆಗೆ ಸೇರಿ ದೇಶಸೇವೆ ಮಾಡುವಂತಾಗಬೇಕು.
-ಅನಿಲ್‌ ಕುಮಾರ್‌ ಸೂತ್ರಬೈಲು
(ದಿನೇಶ್‌ ಸಹೋದರ)

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next