Advertisement

ಸುಧೀರ್ಗ ಅವಧಿಯ ಕಬಡ್ಡಿ ಒಪ್ಪಿಗೆಯಾಗುತ್ತಾ? 

03:20 AM Jul 08, 2017 | |

ಸದ್ಯ ಭಾರತದಲ್ಲಿ ಐಪಿಎಲ್‌ ಬಿಟ್ಟರೆ, ಪ್ರೊ ಕಬಡ್ಡಿ ಚಿನ್ನದ ಮೊಟ್ಟೆಯನ್ನು ಇಡುವ ಕೋಳಿ. ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿಯನ್ನು ಬ್ರಾಂಡ್‌ ಮಾಡಿ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿ ಮಾಡಿದ್ದು, ಪ್ರೊ ಕಬಡ್ಡಿ. ಆದರೆ ಕಳೆದ ನಾಲ್ಕು ಆವೃತ್ತಿಯಲ್ಲಿ ಚುಟುಕು ಅವಧಿಯಲ್ಲಿ ಮುಗಿಯುತ್ತಿದ್ದ ಕೂಟ ಈ ಬಾರಿ ದೀರ್ಘಾವಧಿ ರೂಪ ಪಡೆದಿದೆ. ಹೀಗಾಗಿ ಕಬಡ್ಡಿಯನ್ನು ಪ್ರೀತಿಯಿಂದ ಅಪ್ಪಿಕೊಂಡ ವೀಕ್ಷಕರು ಈ ಬಾರಿ ಏನು ಮಾಡುತ್ತಾರೆ? ಸುದೀರ್ಘ‌ ಅವಧಿ ಅವರಿಗೆ ಬೋರು ತರಿಸುತ್ತಾ? ಇಲ್ಲವೇ ಇನ್ನಷ್ಟು ಜನಪ್ರಿಯತೆ ಕೊಡುತ್ತಾರ? ಅನ್ನುವ ಪ್ರಶ್ನೆಗಳು ಉದ್ಭವಿಸಿವೆ.

Advertisement

ಕಳೆದ ನಾಲ್ಕು ಆವೃತ್ತಿಗಳಲ್ಲಿ ಕೂಟ ಸುಮಾರು ಒಂದು ತಿಂಗಳ ಕಾಲ ನಡೆಯುತ್ತಿತ್ತು. ಇದು ಜನರಲ್ಲಿ ಭಾರೀ ರೋಚಕತೆಯನ್ನು ಹುಟ್ಟಿಸಿತ್ತು. ಆವೃತ್ತಿಯಿಂದ ಆವೃತ್ತಿಗೆ ಟಿಆರ್‌ಪಿ ಪ್ರಮಾಣವೂ ಏರಿಕೆಯಾಗಿತ್ತು. ವೀಕ್ಷಕರನ್ನು ಸೆಳೆಯುವಲ್ಲಿ ಭಾರತದಲ್ಲಿ ಐಪಿಎಲ್‌ ನಂತರ ಸ್ಥಾನವನ್ನು ಕಬಡ್ಡಿ ಪಡೆದಿದೆ. ಒಲಿಂಪಿಕ್ಸ್‌ನಲ್ಲಿ ಸ್ಥಾನಪಡೆದ ಕ್ರೀಡೆಗಳಾದ ಫ‌ುಟ್ಬಾಲ್‌, ಬ್ಯಾಡ್ಮಿಂಟನ್‌… ಲೀಗ್‌ಗಳಿಗೂ ಕೂಡ ಕಬಡ್ಡಿಗೆ ಸಿಕ್ಕ ಜನಪ್ರಿಯತೆ ಸಿಕ್ಕಿಲ್ಲ.

ಆದರೆ ಈ ಆವೃತ್ತಿ ದೀರ್ಘಾವಧಿಯಾಗಿದೆ. ಹೀಗಾಗಿ ಕೆಲವು ಅನುಮಾನಗಳನ್ನು ಹುಟ್ಟಿಸಿದೆ. ಕ್ರೀಡಾಭಿಮಾನಿಗಳು ಇದನ್ನು ಯಾವ ರೀತಿ ಸ್ವೀಕರಿಸುತ್ತಾರೆ ಅನ್ನುವ ಆಧಾರದ ಮೇಲೆ ಯಶಸ್ಸು ನಿಂತಿದೆ. ಒಮ್ಮೆ ಬೋರು ಆಯ್ತು ಅಂಥ ಹಿಂದೇಟು ಹಾಕಿದರೆ ಪ್ರೊ ಕಬಡ್ಡಿ ಮತ್ತೆ ಚುಟುಕು ಅವಧಿಗೆ ಮರಳುವುದು ಅನಿವಾರ್ಯವಾಗಲಿದೆ.
ತಂಡಗಳ ಸಂಖ್ಯೆ ಏರಿಕೆ
ಈ ಬಾರಿ ದೀರ್ಘಾವಧಿ ಕೂಟಕ್ಕೆ ಇದು ಒಂದು ಪ್ರಮುಖ ಕಾರಣವಾಗಿದೆ. ಕಳೆದ ನಾಲ್ಕು ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌, ತೆಲುಗು ಟೈಟಾನ್ಸ್‌, ದಬಾಂಗ್‌ ಡೆಲ್ಲಿ, ಜೈಪುರ್‌ ಪಿಂಕ್‌ಪ್ಯಾಂಥರ್, ಪಾಟ್ನಾ ಪಿರಾಟ್ಸ್‌, ಪುಣೇರಿ ಪಲ್ಟಾನ್‌, ಯು ಮುಂಬಾ, ಬೆಂಗಾಲ್‌ ವಾರಿಯರ್ ತಂಡಗಳು ಸ್ಥಾನ ಪಡೆದಿದ್ದವು. ಆದರೆ ಈ ಬಾರಿ ತಮಿಳುನಾಡು, ಗುಜರಾತ್‌, ಉತ್ತರ ಪ್ರದೇಶ, ಹರ್ಯಾಣ ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ. ಹೀಗಾಗಿ ಸೆಣಸಲಿರುವ ತಂಡಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಗ್ರಾಮೀಣ ಭಾಗದವರು ಏನು ಮಾಡುತ್ತಾರೆ?
ಕಬಡ್ಡಿಯನ್ನು ದೊಡ್ಡ ಪ್ರಮಾಣದಲ್ಲಿ ನೋಡುತ್ತಿರುವುದು ಗ್ರಾಮೀಣ ಜನರು. ನಗರ ಪ್ರದೇಶದಲ್ಲಿ ನೋಡುಗರ ಸಂಖ್ಯೆ ಕಡಿಮೆ ಇದೆ. ಇದು ಈಗಾಗಲೇ 4 ಆವೃತ್ತಿಗಳಲ್ಲಿ ಕಂಡುಬಂದ ಟೀವಿ ಟಿಆರ್‌ಪಿಯಲ್ಲಿ ಸಾಬೀತಾಗಿದೆ. ಈ ದೃಷ್ಟಿಯಿಂದ ಕಬಡ್ಡಿ ಆಯೋಜಕ ಕೂಟ ಗ್ರಾಮೀಣ ವೀಕ್ಷಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿದೆ. ಇವರು ದೀರ್ಘಾವಧಿಯ ಕೂಟವನ್ನು ಒಪ್ಪಿಕೊಳ್ಳುತ್ತಾರೆ ಅನ್ನುವ ಭರವಸೆಯಲ್ಲಿದೆ. ಒಮ್ಮೆ ಜನರು ಒಪ್ಪಿಕೊಂಡಿಲ್ಲ ಅಂದರೆ ಮುಂದಿನ ಆವೃತ್ತಿಯಲ್ಲಿ ಮತ್ತೆ ಬದಲಾವಣೆಯ ಹಾದಿ ತುಳಿಯಲುಬಹುದು.

ಹೊಸ ಸ್ಟಾರ್‌ಗಳ ಉಗಮ
ರಾಷ್ಟ್ರೀಯ ತಂಡದಲ್ಲಿ ಆಡಿದರೂ ಅವರನ್ನು ಗುರುತಿಸದ ಜನ ಇಂದು ಗುರುತಿಸುತ್ತಿದ್ದಾರೆ. ಅವರ ಅಭಿಮಾನಿಗಳಾಗಿದ್ದಾರೆ. ಸಿಕ್ಕಾಗ ಆಟೋಗ್ರಾಪ್‌ ತಗೋತಾರೆ, ಸೆಲ್ಫಿà ತೆಗೆದುಕೊಳ್ಳುತ್ತಾರೆ. ಇಂಥದೊಂದು ದೊಡ್ಡ ಬೆಳವಣಿಗೆ ಸಾಧ್ಯವಾಗಿದ್ದು, ಪ್ರೊ ಕಬಡ್ಡಿಯಿಂದ. ಚಿಕ್ಕ ಮಗುವೊಂದು ಕಟಿಂಗ್‌ ಶಾಪ್‌ಗೆ ಹೋಗಿ ನನಗೆ ಜಾನ್‌ ಕುನ್‌ ಲೀ ಹಾಗೆ ಕಟಿಂಗ್‌ ಮಾಡಿ ಅಂತ ಹೇಳುತ್ತೆ. ಇಂದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಬಡ್ಡಿ ಆಟವನ್ನು ಪ್ರೀತಿಸುತ್ತಾರೆ. ಸ್ಟಾರ್‌ ಆಟಗಾರರ ಅಭಿಮಾನಿಗಳಾಗಿದ್ದಾರೆ. ರಾಹುಲ್‌ ಚೌಧರಿ, ಪ್ರದೀಪ್‌ ನರ್ವಾಲ್‌, ಮಂಜಿತ್‌ ಚಿಲ್ಲರ್‌, ಅಜಯ್‌ ಠಾಕೂರ್‌, ಜಾನ್‌ ಕುನ್‌ ಲೀ…ಇವರಿಗೆಲ್ಲಾ ದೊಡ್ಡ ಅಭಿಮಾನಿ ವರ್ಗ ಹುಟ್ಟಿಕೊಂಡಿದೆ. ತಮ್ಮ ಮೆಚ್ಚಿನ ಸ್ಟಾರ್‌ ಯಾವ ತಂಡದಲ್ಲಿ ಇರುತ್ತಾರೋ ಅದೇ ತಂಡವನ್ನು ಬೆಂಬಲಿಸುತ್ತಾರೆ. ಈ ಬಾರಿ ಮತ್ತಷ್ಟು ತಂಡಗಳು ಸೇರ್ಡೆಯಾಗಿರುವುದರಿಂದ ಹೊಸ ಸ್ಟಾರ್‌ಗಳು ಹುಟ್ಟಿಕೊಳ್ಳಲಿದ್ದಾರೆ.

Advertisement

ಯುವ ಪ್ರತಿಭೆಗಳಿಗೆ ಅವಕಾಶ
ಈ ಬಾರಿ ನಾಲ್ಕು ಫ್ರಾಂಚೈಸಿಗಳನ್ನು ಹೆಚ್ಚಿಸಿರುವುದು ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ದೊರಕಿಸಿದೆ. ಕರ್ನಾಟಕ, ಹರ್ಯಾಣ, ಆಂಧ್ರ, ತಮಿಳುನಾಡು, ಉತ್ತರ ಪ್ರದೇಶ…ಹೀಗೆ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿನ ಹೊಸ ಆಟಗಾರಿಗೆ ಅವಕಾಶ ಸಿಕ್ಕಿದೆ. ಲಕ್ಷಾಂತರ ರೂ. ಗಳಿಗೆ ಹರಾಜು ಆಗಿದ್ದಾರೆ. ಕಬಡ್ಡಿಯಲ್ಲಿ ನೆಲೆ ಕಂಡುಕೊಳ್ಳುತ್ತೇವೆ ಎಂದು ಕನಸು ಕಾಣದವರು ಇಂದು ಕಬಡ್ಡಿಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ.

138 ಪಂದ್ಯಗಳು

ಇಲ್ಲಿಯವರೆಗೆ ಎಲ್ಲಾ ಆವೃತ್ತಿಯಲ್ಲಿ ನಡೆಯುತ್ತಿದ್ದು, 60 ಪಂದ್ಯಗಳು ಮಾತ್ರ. ಲೀಗ್‌ನಲ್ಲಿ ಪ್ರತಿ ತಂಡ 14 ಪಂದ್ಯವನ್ನು ಆಡಬೇಕಾಗಿತ್ತು. ಅಗ್ರ ನಾಲ್ಕು ತಂಡಗಳು ನೇರವಾಗಿ ಸೆಮಿಫೈನಲ್‌ ತಲುಪುತ್ತಿದ್ದವು. ಆದರೆ ಈ ಬಾರಿ ಒಟ್ಟು 138 ಪಂದ್ಯಗಳು ನಡೆಯಲಿವೆ. ಪ್ರತಿ ತಂಡ ಲೀಗ್‌ನಲ್ಲಿ 22 ಪಂದ್ಯಗಳನ್ನು ಆಡಬೇಕಾಗಿದೆ. ಸೆಮಿಫೈನಲ್‌ ಹಂತದಲ್ಲಿಯೂ ಬದಲಾವಣೆ ಮಾಡಲಾಗಿದೆ. ಕ್ವಾಲಿಫೈಯರ್‌ 1, ಕ್ವಾಲಿಫೈಯರ್‌ 2, ಕ್ವಾಲಿಫೈಯರ್‌ 3 ಎಂದು ಮಾಡಲಾಗಿದೆ. ಹೀಗಾಗಿ ಪಂದ್ಯಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.

24 ಬ್ರಾಂಡ್ಸ್‌
ಮೊದಲ ಬಾರಿಗೆ ಪ್ರೊ ಕಬಡ್ಡಿ ಆರಂಭವಾದಾಗ ಕಂಪನಿಗಳು 
ಪ್ರಾಯೋಜಕತ್ವಕ್ಕೆ ಬರುತ್ತವಾ? ಇತರೆ ಕ್ರೀಡಾ ಲೀಗ್‌ಗಳಂತೆ(ಐಪಿಎಲ್‌ ಹೊರತುಪಡಿಸಿ) ಇದುವೊಂದು ಬಂದು ಮಾಯವಾಗುವ ಲೀಗ್‌ ಆಗುತ್ತೆ ಅಂದುಕೊಂಡವರೆ ಹೆಚ್ಚು. ಆದರೆ ಇಂದು ಪ್ರೊ ಕಬಡ್ಡಿ ಭರ್ಜರಿಯಾಗಿ ಬೆಳೆದಿದೆ. ಮೊದಲ ಆವೃತ್ತಿಯಲ್ಲಿ ಬೆರಳೆಣಿಕೆಯಷ್ಟು ಕಂಪನಿಗಳು ಕಂಡುಬರುತ್ತಿದ್ದವು. ಆದರೆ 5ನೇ ಆವೃತ್ತಿಯಲ್ಲಿ ಭರ್ಜರಿ 24 ಕಂಪನಿಗಳು ಪ್ರಾಯೋಜಕತ್ವಕ್ಕೆ ಮುಂದೆ ಬಂದಿವೆ. ವಿವೋ ಮೊಬೈಲ್‌ ಕಂಪನಿ ಮೂರು ವರ್ಷದ ಅವಧಿಗೆ 300 ಕೋಟಿ ರೂ.ಗೆ ಟೈಟಲ್‌ ಪ್ರಾಯೋಜಕತ್ವವನ್ನು ಪಡೆದಿರುವುದು ಇದರ ಶ್ರೀಮಂತಿಕೆಯನ್ನು ತೋರಿಸುತ್ತದೆ.

13  ವಾರ
ಟೂರ್ನಿ ಆರಂಭವಾಗಿ 1 ತಿಂಗಳ ಅವಧಿಯಲ್ಲಿಯೇ ಅಂತ್ಯವಾಗುತ್ತಿತ್ತು. ಹೀಗಾಗಿ ಕಬಡ್ಡಿ ವೀಕ್ಷಕರಿಗೆ ಹಬ್ಬದ ವಾತಾವರಣ ಚುಟುಕು ಅವಧಿಯಾಗಿತ್ತು. ಈ ಬಾರಿ ತಂಡಗಳ ಸಂಖ್ಯೆ ಏರಿಕೆಯಾಗಿರುವುದರಿಂದ ಪಂದ್ಯಗಳ ಸಂಖ್ಯೆಯೂ ಏರಿಕೆಯಾಗಿದೆ. ಅದೇ ರೀತಿ ಪಂದ್ಯ ನಡೆಯುವ ಕಾಲಾವಧಿಯೂ ದೀರ್ಘ‌ವಾಗಿದೆ. ಸುಮಾರು 3 ತಿಂಗಳಕಾಲ ನಡೆಯಲಿದೆ. ಈ ದೀರ್ಘಾವಧಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾ ಅನ್ನುವುದೇ ಪ್ರಶ್ನೆಯಾಗಿದೆ.

ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ಗೂ ಕಬಡ್ಡಿ ಪ್ರವೇಶ?
ಹೌದು, ಇಂತಹವೊಂದು ಆಸೆ ಚಿಗುರಿದೆ. ಇದಕ್ಕೆ ಮುಖ್ಯ ಕಾರಣ ಪ್ರೊ ಕಬಡ್ಡಿಯ ಯಶಸ್ಸು. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟ ಪ್ರಯತ್ನ ನಡೆಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ಪ್ರವೇಶ ಪಡೆದರೆ ಕಬಡ್ಡಿ ಮತ್ತಷ್ಟು ಜನಪ್ರಿಯತೆಯನ್ನು ಪಡೆಯಲಿದೆ. ಸದ್ಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಬಡ್ಡಿಗೆ ಅವಕಾಶ ಕಲ್ಪಿಸಬೇಕು ಅನ್ನುವ ಗುರಿಯನ್ನು ಹೊಂದಲಾಗಿದೆ. ಒಮ್ಮೆ ಕಾಮನ್‌ವೆಲ್ತ್‌, ಒಲಿಂಪಿಕ್ಸ್‌ನಲ್ಲಿ ಅವಕಾಶ ಸಿಕ್ಕರೆ ಅದರ ಚಿತ್ರಣವೇ ಬದಲಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next