Advertisement
ಕಾಲೇಜ್ ಡೇ ಅಂದ ಮೇಲೆ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡಾ ಸ್ಪರ್ಧೆಗಳು, ಪ್ರೋತ್ಸಾಹ- ಇವೆಲ್ಲಾ ಸಾಮಾನ್ಯ. ಇತ್ತೀಚೆಗೆ ಒಂದು ದಿನ ಕಾಲೇಜ್ ಡೇಗಾಗಿ ಕಬಡ್ಡಿ ಸ್ಪರ್ಧೆ ನಡೆಯುತ್ತಿತ್ತು. ಅದನ್ನು ವೀಕ್ಷಿಸುತ್ತ ಒಂದು ಸಲ ನನ್ನ ಫ್ಲ್ಯಾಶ್‌ಬ್ಯಾಕ್ ಕಡೆಗೆ ಸಾಗಿದೆ.
Related Articles
Advertisement
ಉಜಿರೆಯಲ್ಲಿ ನಡೆದ ವಿಭಾಗ ಮಟ್ಟದ ಪಂದ್ಯಾಟದಲ್ಲಿ ಮೊದಲ ಪಂದ್ಯ ನಮ್ಮದೇ. ಹತ್ಯಡ್ಕದಂತಹ ಸಾಮಾನ್ಯ ಹಳ್ಳಿಯ ಶಾಲೆಯಿಂದ ಬಂದಿದ್ದ ನಮಗೆ ಆತಿಥೇಯ ತಂಡದೆದುರು ಆಡುವುದೇ ಒಂದು ಹೆಮ್ಮೆ ಅನಿಸಿತ್ತು.
ಅಂತೂ ಮೊದಲ ಪಂದ್ಯ ಆರಂಭವಾಯಿತು. ಅತ್ಯುತ್ಸಾಹದಿಂದ ಆಡಲು ಇಳಿದ ನಮ್ಮ ತಂಡ ಒಗ್ಗಟ್ಟಾಗಿ ಆಡಿ ಎರಡೇ ನಿಮಿಷದಲ್ಲಿ ಎದುರಾಳಿ ತಂಡವನ್ನು ಆಲೌಟ್ ಮಾಡಿತ್ತು! ಈ ಸಾಧನೆ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದ್ದಲ್ಲದೆ ಗೆಲುವು ಸುಲಭವಾಗಿಯೇ ದೊರಕಬಹುದೆಂದು ಭಾವಿಸಿದ್ದೆವು. ಆದರೆ, ಕೆಲವೇ ಕ್ಷಣಗಳಲ್ಲಿ ಪಂದ್ಯದ ದಿಕ್ಕೇ ಬದಲಾಯಿತು.
ರೈಡಿಂಗ್ ಸಂದರ್ಭದಲ್ಲಿ ನಾನು ಮತ್ತು ಸಂತೋಷ್ ಗಾಯಗೊಂಡು ಹೊರನಡೆದಿದ್ದರಿಂದ ತಂಡದ ಭಾರ ಸುಮಂತ್‌ನ ಮೇಲೆ ಬಿತ್ತು. ಎದುರಾಳಿ ತಂಡವೂ ಅವಕಾಶವನ್ನು ಉಪಯೋಗಿಸಿ ಮುನ್ನುಗ್ಗತೊಡಗಿತು. ತಂಡ ಸೋಲಿನತ್ತ ಮುಖ ಮಾಡಿದಾಗ ಮತ್ತೆ ನಾನು ತಂಡವನ್ನು ಸೇರಿಕೊಂಡರೂ ಒತ್ತಡ ನಿಭಾಯಿಸಲಾಗದೆ ಸೋಲನುಭವಿಸಬೇಕಾಯಿತು. ಸೋಲು ಸಣ್ಣ ಅಂತರದ್ದಾದರೂ ಅವಸರದಿಂದ ತೆಗೆದುಕೊಂಡ ನಿರ್ಧಾರಗಳೇ ಅದಕ್ಕೆ ಕಾರಣ ಎಂಬುದು ಸ್ಪಷ್ಟವಾಗಿತ್ತು. ವೈಯಕ್ತಿಕವಾಗಿ ನಾಯಕತ್ವ ವಿಚಾರದಲ್ಲಿ ನನಗೆದುರಾದ ಮೊದಲ ಸೋಲು ಅದಾಗಿತ್ತು.
ದಿನವಿಡೀ ಮಾಡಿದ ಅಭ್ಯಾಸಗಳು, ಕೈ-ಕಾಲುಗಳಲ್ಲಿ ತರಚಿದ ಗಾಯ, ಮನೆಯಲ್ಲಿ ಅಜ್ಜಿಯ ದಿನನಿತ್ಯದ ಬೈಗುಳ, ಅಪ್ಪನ ಎಚ್ಚರಿಕೆ, ಮಳೆಯಲ್ಲೂ ಕೆಸರಲ್ಲೂ ಆಡಿದ ನೆನಪು- ಎಲ್ಲವೂ ಅಂದೇ ಕೊನೆಯಾಗಿತ್ತು. ಮುಂದಿನ ವರ್ಷ ಹೈಸ್ಕೂಲ್‌ಗೆ ತೆರಳಲಿದ್ದ ನಮಗೆ ಅದು ಕೊನೆಯ ಅವಕಾಶವಾಗಿತ್ತು.
ಅದೇನೇ ಇರಲಿ, ಕಾಲೇಜ್‌ಡೇ ಕಬಡ್ಡಿ ನೋಡುತ್ತ ನೋಡುತ್ತ ಹಳೆಯ ನೆನಪು ಸ್ಮತಿಪಟಲದಲ್ಲಿ ಹಾದುಹೋಗಿ ಮತ್ತೆ ಕಬಡ್ಡಿ ಆಡಬೇಕು ಎಂಬ ಆಸೆ ಚಿಗುರಿದ್ದಂತೂ ನಿಜ.
ತುಳಸೀಧರ ಎಂ.ನಿಕಟಪೂರ್ವ ವಿದ್ಯಾರ್ಥಿ ಎಸ್‌ಡಿಎಂಐಟಿ, ಉಜಿರೆ