Advertisement

ಕಾವಾಡಿ, ಮಾವುತರರೊಂದಿಗೆ ಸಿನಿ ತಾರೆಯರು

11:37 AM Sep 24, 2018 | |

ಮೈಸೂರು: ನಾಡಹಬ್ಬ ದಸರಾ ಸಂಭ್ರಮಕ್ಕೆ ಸಜ್ಜಾಗುತ್ತಿರುವ ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಭಾನುವಾರ ಸ್ಯಾಂಡಲ್‌ವುಡ್‌ ಸಿನಿಮಾ ತಾರೆಗಳ ಕಲರವ ಜೋರಾಗಿತ್ತು. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸೇರಿದಂತೆ ಚಿತ್ರರಂಗದ ಕೆಲವು ನಟರು ಅರಮನೆಯಲ್ಲಿ ಬೀಡುಬಿಟ್ಟಿರುವ ಗಜಪಡೆ ಹಾಗೂ ಅದರೊಂದಿಗೆ ಆಗಮಿಸಿರುವ ಕಾವಾಡಿ ಮತ್ತು ಮಾವುತರ ಕುಟುಂಬಸ್ಥರೊಂದಿಗೆ ಕಾಲ ಕಳೆದರು. 

Advertisement

ಬಹುತೇಕ ಸಂದರ್ಭದಲ್ಲಿ ಸಿನಿಮಾ ಚಿತ್ರೀಕರಣ ಸೇರಿದಂತೆ ಚಿತ್ರರಂಗದ ಕಾರ್ಯಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದ ನಟ ದರ್ಶನ್‌ ಹಾಗೂ ಇನ್ನಿತರ ಕಲಾವಿದರು ಭಾನುವಾರ ಮೈಸೂರು ಅರಮನೆ ಹಾಗೂ ಮೃಗಾಲಯದಲ್ಲಿ ವಿಶೇಷ ಕ್ಷಣಗಳನ್ನು ಕಳೆದರು. ನಾಡಹಬ್ಬ ದಸರೆಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯೊಂದಿಗೆ ನಗರಕ್ಕಾಗಮಿಸಿರುವ ಮಾವುತರು ಮತ್ತು ಕಾವಾಡಿಗಳ ಕುಟುಂಬಕ್ಕೆ ನಟ ದರ್ಶನ್‌ ವಿಶೇಷ ಆತಿಥ್ಯ ಆಯೋಜಿಸಿದ್ದರು. ಹೀಗಾಗಿ ಚಾಲೆಂಜಿಂಗ್‌ ಸ್ಟಾರ್‌ ಜತೆಯಲ್ಲಿ ಪಾಲ್ಗೊಂಡಿದ್ದ ನಟರು, ಗಜಪಡೆ ಕಾವಾಡಿ ಮತ್ತು ಮಾವುತರ ಕುಟುಂಬಸ್ಥರ ಕುಶಲೋಪರಿ ವಿಚಾರಿಸಿದರು. 

ಗಜಪಡೆ ಕಂಡು ಸಂತಸ: ವಿಶೇಷ ಸಂದರ್ಭದಲ್ಲಿ ಅರಮನೆಗೆ ಭೇಟಿ ನೀಡಿದ ಸಿನಿಮಾ ತಾರೆಯರು ಅರಮನೆ ಅಂಗಳದಲ್ಲಿ ವಾಸ್ತವ್ಯ ಹೂಡಿರುವ ದಸರಾ ಆನೆಗಳನ್ನು ಕಂಡು ಸಂತಸಗೊಂಡರು. ಗಜಪಡೆಯ ಸಾರಥಿ ಅರ್ಜುನ ಸೇರಿದಂತೆ ಗಜಪಡೆಯ ಆನೆಗಳೊಂದಿಗೆ ಕಾಲಕಳೆದ ನಟರು, ಆನೆಗಳನ್ನು ಮುಟ್ಟಿ, ಅವುಗಳೊಂದಿಗೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು.

ಅರಮನೆಗೆ ಆಗಮಿಸಿದ್ದ ಚಿತ್ರರಂಗದ ನಟರೊಂದಿಗೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸಾಥ್‌ ನೀಡಿದರು. ಗಜಪಡೆ ಮಾವುತರು ಮತ್ತು ಕಾವಾಡಿಗಳ ಕುಟುಂಬಕ್ಕೆ ನಟ ದರ್ಶನ್‌ ಆಯೋಜಿಸಿದ್ದ ಆತಿಥ್ಯ ಕಾರ್ಯಕ್ರಮದಲ್ಲಿ ಭಾಗಿಯಾದ ರಾಜವಂಶಸ್ಥ ಯದುವೀರ್‌, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಕಾರ್ಯವನ್ನು ಶ್ಲಾ ಸಿದರು. 

ವಿಶೇಷ ಭೋಜನ ವ್ಯವಸ್ಥೆ: ನಟ ದರ್ಶನ್‌ ಆಯೋಜಿಸಿದ್ದ ಆತಿಥ್ಯದ ಪ್ರಯುಕ್ತ ಗಜಪಡೆ ಮಾವುತರು ಮತ್ತು ಕಾವಾಡಿಗಳ ಕುಟುಂಬಸ್ಥರಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ನಟ ದರ್ಶನ್‌ ಸಹ ಮಾವುತರು ಮತ್ತು ಕಾವಾಡಿ ಕುಟುಂಬಸ್ಥರೊಂದಿಗೆ ಊಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

Advertisement

ನಟ ದರ್ಶನ್‌ಗೆ ನಟರಾದ ಪ್ರಜ್ವಲ್‌ ದೇವರಾಜ್‌, ಸೃಜನ್‌ ಲೋಕೇಶ್‌, ಪ್ರಣಮ್‌ ದೇವರಾಜ್‌, ನಟ ದೇವರಾಜ್‌ ಅವರ ಪತ್ನಿ ಚಂದ್ರಲೇಖ, ಹಾಸ್ಯನಟರಾದ ಮಂಡ್ಯ ರಮೇಶ್‌, ವಿಶ್ವ ಹಾಗೂ ಕುಟುಂಬಸ್ಥರು ಸಾಥ್‌ ನೀಡಿದರು. ಇದೇ ಸಂದರ್ಭದಲ್ಲಿ ನಟ ದರ್ಶನ್‌ ಅವರು ಮಾವುತರ ಕುಟುಂಬಕ್ಕೆ ಬಟ್ಟೆ, ಬೆಡ್‌ ಶೀಟ್‌, ಮಕ್ಕಳಿಗೆ ಶಾಲಾ ಬ್ಯಾಗ್‌ ವಿತರಿಸಿದರು. 

ಪ್ರಾಣಿ ದತ್ತುಪಡೆದ ನಟರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಕನ್ನಡ ಚಿತ್ರರಂಗದ ನಟರಾದ ದರ್ಶನ್‌, ಸೃಜನ್‌ ಲೋಕೇಶ್‌ ಹಾಗೂ ದೇವರಾಜ್‌ ಕುಟುಂಬಸ್ಥರು ತಮ್ಮ ನೆಚ್ಚಿನ ಪ್ರಾಣಿಗಳನ್ನು ದತ್ತು ಪಡೆದರು. ಮೃಗಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಟ ದೇವಾರಜ್‌ ಕುಟುಂಬದವರು ಚಿರತೆ ದತ್ತು ಪಡೆದರೆ,

ನಟ ದರ್ಶನ್‌ ಮತ್ತು ಸೃಜನ್‌ ಲೋಕೇಶ್‌ ಜಿರಾಫೆ ಮರಿ ದತ್ತು ಪಡೆದರೆ, ಹಾಸ್ಯ ನಟ ಕೀರ್ತಿ ಮೊಸಳೆ ದತ್ತು ಸ್ವೀಕಾರ ಮಾಡಿದರು. ಇದೇ ವೇಳೆ ಕೆಲವು ದಿನಗಳ ಹಿಂದಷ್ಟೇ ಜನಿಸಿರುವ ಜಿರಾಫೆ ಮರಿಗೆ “ತೂಗುಲೋಕ್‌’ ಎಂದು ನಾಮಕರಣ ಮಾಡಿದ ನಟ ಸೃಜನ್‌ ಲೋಕೇಶ್‌, ಈ ಹಿಂದೆ ತಾವು ಹಾಗೂ ದರ್ಶನ್‌ ಒಟ್ಟಾಗಿ ದತ್ತು ಪಡೆದ ಹುಲಿಗಳು ನಮ್ಮಂತೆ ಜತೆಯಾಗಿ ನಡೆಯುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು. 

ಈ ಬಾರಿಯ ದಸರೆಯಲ್ಲಿ ಪುತ್ರ ಆದ್ಯವೀರ್‌ ಭಾಗವಹಿಸುತ್ತಿರುವುದು ಸಂತಸದ ವಿಷಯ. ದಸರಾ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಸಾಕಷ್ಟು ತೊಡಗಿಸಿಕೊಂಡಿರುತ್ತೇನೆ. ಹೀಗಾಗಿ ನಮ್ಮ ಕುಟುಂಬಕ್ಕೆ ಎಂಟ್ರಿಯಾಗಿರುವ ಹೊಸ ಸದಸ್ಯರನ್ನು ಗಮನಿಸಿಕೊಳ್ಳುವುದು ಕಷ್ಟ. ಅರಮನೆಯಲ್ಲಿ ಅ.10ರಿಂದ ದಸರಾ ಕಾರ್ಯಕ್ರಮಗಳು ಆರಂಭವಾಗಲಿದ್ದು, ಅ.19ರಂದು ವಿಜಯದಶಮಿ ಇದೆ. ಎಲ್ಲಾ ಕಾರ್ಯಕ್ರಮಗಳು ಪ್ರತಿವರ್ಷದಂತೆ ನಡೆಯುತ್ತದೆ. 
-ಯದುವೀರ್‌ ಒಡೆಯರ್‌, ರಾಜವಂಶಸ್ಥ. 

ಅರಣ್ಯ ಇಲಾಖೆ ರಾಯಾಭಾರಿಯಾದ ನಂತರ ಉತ್ತಮ ಗಾಳಿ ಸಿಕ್ಕಿದೆ. ಗಿಡ ನೆಟ್ಟು ಸೆಲ್ಫಿ ತೆಗೆದುಕೊಳ್ಳುವುದು ದೊಡ್ಡದಲ್ಲ. ಕ್ರಮವಾಗಿ ಅರಣ್ಯ ಬೆಳೆಸಬೇಕಿದೆ. ನಾವು ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದೆ. ವೀಕೆಂಡ್‌ ನೆಪದಲ್ಲಿ ದುಡ್ಡನ್ನು ಖರ್ಚು ಮಾಡುವ ಯುವಕರು, ಇದೇ ಹಣದಲ್ಲಿ ಪ್ರಾಣಿಗಳನ್ನು ದತ್ತು ಪಡೆಯಲಿ. ಕಾಡು ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಿಲ್ಲ. ಈ ಕಾರಣದಿಂದ ಮೃಗಾಲಯಕ್ಕೆ ಬಂದು ದತ್ತು ಪಡೆಯಿರಿ.
-ದರ್ಶನ್‌ ತೂಗುದೀಪ್‌, ನಟ. 

Advertisement

Udayavani is now on Telegram. Click here to join our channel and stay updated with the latest news.

Next