ಬೆಂಗಳೂರು: ಗೋರಿಯಾದ್ಮೇಲೆ ಹುಟ್ಟಿದ್ ಸ್ಟೋರಿ ‘ಕಾಣದಂತೆ ಮಾಯಾವಾದನು’. ಈ ಟೈಟಲ್ ಅನ್ನ ನಾವೂ ಎಷ್ಟೋ ಬಾರಿ ಕೇಳಿದ್ದೇವೆ. ಯಾಕಂದ್ರೆ ಅಣ್ಣಾವ್ರ ಸಿನಿಮಾದ ಪುನೀತ್ ರಾಜ್ ಕುಮಾರ್ ಹಾಡಿ ಕುಣಿದ ಗೀತೆಯಿದು. ಅಷ್ಟು ಖ್ಯಾತಿ ಪಡೆದಂತ ಸಾಲನ್ನೇ ಶೀರ್ಷಿಕೆಯಾಗಿ ಬಳಸಿಕೊಂಡು ಅದ್ಬುತ ಸಿನಿಮಾವನ್ನ ಮಾಡಿದೆ ರಾಜ್ ಪತ್ತಿಪಾಟಿ ತಂಡ. ಈ ಸಿನಿಮಾದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಬಾರೀ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಅನಿರುದ್ಧ್ ಶಾಸ್ತ್ರಿ ಬರೆದಿರುವ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಅದ್ಭುತವಾಗಿ, ಮನಸ್ಸಿಗೆ ಮುಟ್ಟುವಂತೆ ಹಾಡಿದ್ದಾರೆ.
ಈಗಾಗಲೇ ನಾವೂ ಸಾಕಷ್ಟು ದೆವ್ವದ ಕಥೆಯನ್ನ ಕೇಳಿರ್ತೀವಿ. ಈ ಸಿನಿಮಾದಲ್ಲೂ ದೆವ್ವ ಇದೆ. ಆದ್ರೆ ಬೇರೆ ಸಿನಿಮಾಗಿಂತ ವಿಭಿನ್ನವಾದ ದೆವ್ವ. ತನ್ನ ಸಂಗಾತಿಯನ್ನ ಕಾಪಾಡುವ ದೆವ್ವ. ನವೀರಾದ ಪ್ರೇಮಕಥೆಯೊಂದಿಗೆ ಹಾರಾರ್ ಟಚ್ ಅನ್ನು ಸಿನಿಮಾಗೆ ನೀಡಲಾಗಿದೆ.
ಈ ಸಿನಿಮಾ ಆರಂಭವಾದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿತ್ತು. ಟ್ಯಾಗಲೈನ್ ವಿಚಾರಕ್ಕೂ ಜನರ ಮೊರೆ ಹೋಗಿದ್ದ ಚಿತ್ರತಂಡ, ಸಿನಿಮಾದ ಮೇಲೆ ಜನರಿಗೆ ಮತ್ತಷ್ಟು ಕುತೂಹಲವನ್ನು ಹೆಚ್ಚು ಮಾಡಿತ್ತು. ಇನ್ನು ಟ್ರೇಲರ್ ಕೂಡ ವಿಭಿನ್ನವಾಗಿ ಮೂಡಿ ಬಂದಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಈಗ ಲಿರಿಕಲ್ ಸಾಂಗ್ ಹೊರಬಂದಿದ್ದು, ಸಿನಿಮಾ ಹೇಗಿರಬಹುದು ಎಂಬ ಕುತೂಹಲವನ್ನು ದುಪ್ಪಟ್ಟು ಮಾಡಿದೆ.
ಪುನೀತ್ ರಾಜ್ ಕುಮಾರ್ ಬಾಲ ನಟನಾಗಿ ನಟಿಸಿದ್ದ ಸಿನಿಮಾದ ಹಾಡಿನ ಸಾಲೇ ಈ ಶೀರ್ಷಿಕೆ. ಹೀಗಾಗಿ ಸಿನಿಮಾದ ಟೈಟಲ್ ನೋಡಿದ ತಕ್ಷಣ ಪುನೀತ್ ರಾಜ್ ಕುಮಾರ್ ಎಲ್ಲರಿಗೂ ನೆನಪಾಗುತ್ತಾರೆ ನಿಜ. ಆದ್ರೆ ಮತ್ತೊಂದು ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಕೂಡ ಪುನೀತ್ ರಾಜ್ ಕುಮಾರ್ ಇದ್ದಾರೆ. ಕಳೆದೋದಾ ಕಾಳಿದಾಸ ಎಂಬ ಹಾಡಿಗೆ ಪುನೀತ್ ರಾಜ್ ಕುಮಾರ್ ಧ್ವನಿಯಾಗಿದ್ದು, ಈ ಸಿನಿಮಾದಲ್ಲೂ ಅವರ ಉಪಸ್ಥಿತಿ ಇರಲಿದೆ.
ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ ‘ಕಾಣದಂತೆ ಮಾಯಾವಾದನು’ ಮೂಲಕ ಪರಿಪೂರ್ಣ ನಾಯಕನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ವಿಕಾಸ್ ಗೆ ನಾಯಕಿಯಾಗಿ ಸಿಂಧು ಲೋಕನಾಥ್ ನಟಿಸಿದ್ದಾರೆ.
ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿದ್ದು, ಚಂದ್ರಶೇಖರ್ ನಾಯ್ಡು, ಸೋಮಸಿಂಗ್, ಪುಷ್ಪಾ ಸೋಮಸಿಂಗ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತವಿದ್ದು, ವಿ. ನಾಗೇಂದ್ರ ಪ್ರಸಾದ್, ಅನಿರುದ್ಧ್ ಶಾಸ್ತ್ರಿ, ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಅಚ್ಯತ್ ಕುಮಾರ್, ರಾಘವ್ ಉದಯ್, ಭಜರಂಗಿ ಲೋಕಿ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.