ಚೆನ್ನೈ: ಹೆಸರಾಂತ ನಟಿ, ಕವಯತ್ರಿ ಲೀನಾ ಮಣಿಮೇಕಲೈ ಸಾಕ್ಷ್ಯಚಿತ್ರದ ಪೋಸ್ಟರ್ ನಲ್ಲಿ ಹಿಂದೂ ದೇವತೆ ಕಾಳಿ ಸಿಗರೇಟ್ ಸೇದುತ್ತಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಚಿತ್ರದ ನಿರ್ಮಾಪಕಿಯನ್ನು ಬಂಧಿಸುವಂತೆ ಹಲವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಸಿಂಗರ್ ಸಿಧು ಮೂಸೆವಾಲಾ ಹತ್ಯೆ ಮಾಡಿದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಂಕಿತ್ ಸಿರ್ಸಾ ಬಂಧನ
ಲೀನಾ ನಿರ್ದೇಶನದ “ಕಾಳಿ” ಸಾಕ್ಷ್ಯ ಚಿತ್ರದ ಪೋಸ್ಟರ್ ನಲ್ಲಿ ಕಾಳಿ ಮಾತೆಯ ಒಂದು ಕೈಯಲ್ಲಿ ಸಿಗರೇಟ್, ಮತ್ತೊಂದು ಕೈಯಲ್ಲಿ ಸಲಿಂಗಿ ಬೆಂಬಲಿತ ಬಾವುಟವನ್ನು ನೀಡಿದ್ದು, ಇದರಿಂದಾಗಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ನಲ್ಲಿ ಹಿಂದೂ ದೇವತೆಯನ್ನು ಕೆಟ್ಟದ್ದಾಗಿ ಚಿತ್ರಿಸಿರುವುದನ್ನು ವಿರೋಧಿಸಿ ಟ್ವೀಟರ್ ನಲ್ಲಿ #ArrestLeenaManimekalai ಎಂಬ ಹ್ಯಾಶ್ ಟ್ಯಾಗ್ ಸಾಮಾಜಿ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.
ಲೀನಾ ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ, ಕೆಲವೇ ಹೊತ್ತಿನಲ್ಲಿ ನೆಟ್ಟಿಗರು ತೀವ್ರವಾಗಿ ವಿರೋಧಿಸಿ ಟ್ವೀಟ್ ಮಾಡಲು ಪ್ರಾರಂಭಿಸಿದ್ದರು. ಕೂಡಲೇ ವಿವಾದಿತ ಪೋಸ್ಟರ್ ಅನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
ಇದೊಂದು ಧರ್ಮನಿಂದನೆ, ಹಿಂದೂಗಳ ಭಾವನೆ ಧಕ್ಕೆ ತಂದಿರುವ ಲೀನಾ ಮಣಿಮೇಕಲೈ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕ್ರಮ ತೆಗೆದುಕೊಳ್ಳಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.