ಬೆಂಗಳೂರು: ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಭದ್ರತೆ ನೀಡಲು ಪೊಲೀಸ್ ಇಲಾಖೆಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ ಹಿನ್ನೆಲೆಯಲ್ಲಿ ಗುರುವಾರ “ಕಾಲಾ’ ಚಿತ್ರವು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಇದಕ್ಕೂ ಮುನ್ನ ಕಾವೇರಿ ವಿಷಯವಾಗಿ ರಜನಿಕಾಂತ್ ನೀಡಿದ ಹೇಳಿಕೆಯನ್ನು ಖಂಡಿಸಿ,ಕನ್ನಡಪರ ಸಂಘಟನೆಗಳು
“ಕಾಲಾ’ ಬಿಡುಗಡೆಗೆ ತಡೆಯೊಡ್ಡಿದ್ದವು. ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ಅಡ್ಡಿಪಡಿಸುವ ಬೆದರಿಕೆಯಿದ್ದು
ಸೂಕ್ತ ರಕ್ಷಣೆ ನೀಡಲು ನಿರ್ದೇಶಿಸುವಂತೆ ಕೋರಿ ಚಿತ್ರ ನಿರ್ಮಾಣ ಸಂಸ್ಥೆಯು ರಿಟ್ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಪೀಠವು, ಚಿತ್ರ ಪ್ರದರ್ಶನದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿತ್ತು.
ಚಿತ್ರ ಬಿಡುಗಡೆಗೆ ಅನುಮತಿ ದೊರಕಿರುವ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಭೂಮಿಕಾ ಸೇರಿದಂತೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.
ಈ ಹಿಂದೆ ಚಿತ್ರವನ್ನು ಗೋಲ್ಡಿ μಲಮ್ಸ್ ಸಂಸ್ಥೆಯು ರಾಜ್ಯಾದ್ಯಂತ ವಿತರಿಸುವುದಕ್ಕೆ ಮುಂದಾಗಿತ್ತು. ಆದರೆ, ಬಿಡುಗಡೆಗೆ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗೋಲ್ಡಿ ಫಿಲಮ್ಸ್‌ನವರು ಚಿತ್ರದ ವಿತರಣೆಯನ್ನು ಕೈಬಿಟ್ಟಿದ್ದು, ಈಗ ನಿರ್ಮಾಪಕ -ವಿತರಕ ಕನಕಪುರ ಶ್ರೀನಿವಾಸ್ ಅವರು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಶ್ರೀನಿವಾಸ್,”ಕಾಲಾ’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರದ ಬಿಡುಗಡೆಗೆ ಸಮಸ್ಯೆ ಯಾಗದಂತೆ ನ್ಯಾಯಾಲಯದಿಂದ ಆದೇಶವಿದೆ.
ಅಹಿತಕರ ಘಟನೆಗಳನ್ನು ತಡೆಯುವುದಕ್ಕೆ ಪೊಲೀಸರು ಇದ್ದಾರೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲ. ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇನೆ’ಎಂದು ಹೇಳಿದರು.