ಹೊಸದಿಲ್ಲಿ : ಭಾರತೀಯ ಸೇನೆ ಇಂದು ಶುಕ್ರವಾರ ಎರಡು ಅತ್ಯಾಧುನಿಕ ಗನ್ ಸಿಸ್ಟಮ್ ಗಳನ್ನು ತನ್ನ ಶಸ್ತ್ರಾಗಾರಕ್ಕೆ ಸೇರಿಸಿಕೊಳ್ಳಲಿದೆ. ಅವೆಂದರೆ ಕೆ9 ವಜ್ರ ಮತ್ತು ಎಂ 777 ಹೊವಿಟ್ಜರ್ ತೋಪು.
ಈ ಎರಡು ಅತ್ಯಾಧುನಿಕ ತೋಪುಗಳನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳುವ ಸಲುವಾಗಿ ಮಹಾರಾಷ್ಟ್ರದ ದೇವಲಾಲಿಯಲ್ಲಿ ಕಾರ್ಯಕ್ರಮವೊಂದು ನಡೆಯಲಿದೆ.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಕೇಂದ್ರ ಸಹಾಯಕ ಸಚಿವ ಸುಭಾಷ್ ಭಾಮರೆ ಮೊದಲಾದವರು ಭಾಗವಹಿಸಲಿದ್ದಾರೆ.
ಈ ವಿಷಯವನ್ನು ತಿಳಿಸಿರುವ ರಕ್ಷಣಾ ಸಚಿವಾಲಯ, ಈ ಅತ್ಯಾಧುನಿಕ ಲಘು ತೋಪುಗಳನ್ನು ಹೆಲಿಕಾಪ್ಟರ್ ಮೂಲಕ ಪರ್ವತ ಪ್ರದೇಶಗಳಲ್ಲೂ ಎತ್ತೂಯ್ಯಬಹುದಾಗಿದೆ ಎಂದು ತಿಳಿಸಿದೆ. ಪರ್ವತ ಪ್ರದೇಶಗಳಲ್ಲಿ ಶತ್ರು ಸೇನೆಯನ್ನು ಎದುರಿಸುವುದಕ್ಕೆ ಈ ತೋಪುಗಳು ತುಂಬ ಪರಿಣಾಮಕಾರಿಯೂ ಸಹಕಾರಿಯೂ ಆಗಲಿವೆ.
ಲಘು ಭಾರದ 145 ಹೊವಿಟ್ಜರ್ ಎಂ-777 ತೋಪುಗಳನ್ನು ಪೂರೈಸುವ ಸಂಬಂಧ ಅಮೆರಕದ ಜತೆಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಪೈಕಿ 25 ತೋಪುಗಳನ್ನು ಸಮರ ಸನ್ನದ್ಧ ಸ್ಥಿತಿಯಲ್ಲಿ ಭಾರತಕ್ಕೆ ತರಲಾಗುವುದು.
ಉಳಿದ 125 ತೋಪುಗಳನ್ನು ಮಹಿಂದ್ರಾ ಡಿಫೆನ್ಸ್ ನೆರವಿನಲ್ಲಿ ಭಾರತದಲ್ಲೇ ನಿರ್ಮಿಸಲಾಗುವುದು. 2019ರ ಮಾರ್ಚ್ ವೇಳೆಗೆ ತೋಪುಗಳ ಪೂರೈಕೆ ಆರಂಭವಾಗುವುದನ್ನು ನಿರೀಕ್ಷಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.