ಗಂಗಾವತಿ: ಹಾಲುಮತ ಕುರುಬ ಜನಾಂಗದವರ ಎಸ್ಟಿ ಹೋರಾಟಕ್ಕೆ ಆರೆಸ್ಸೆಸ್ ಬೆಂಬಲ ನೀಡಿದರೆ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಯಾಕೆ ಹೊಟ್ಟೆ ಉರಿ ಎಂದು ಕುರುಬರ ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಪ್ರಶ್ನಿಸಿದರು.
ಗಂಗಾವತಿಯಲ್ಲಿ ಎಸ್ಟಿ ಹೋರಾಟ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಐದು ವರ್ಷಗಳ ಕಾಲ ಆಡಳಿತ ನಡೆಸಿದ ಸಿದ್ದರಾಮಯ್ಯ ಕುರುಬ ಜನಾಂಗವನ್ನು ಎಸ್ಟಿ ಮೀಸಲಾತಿಗೆ ಸೇರ್ಪಡೆ ಮಾಡುವ ಶಿಫಾರಸ್ಸನ್ನು ಕೇಂದ್ರ ಸರಕಾರಕ್ಕೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದರು. ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಎಸ್ಟಿ ಮೀಸಲಾತಿ ಮಾಡಲಿಲ್ಲ ಎಂದರು.
ಈಗ ಸಚಿವ ಈಶ್ವರಪ್ಪನವರ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದೆ. ಇದಕ್ಕೆ ರಾಜ್ಯದ ಹಾಲುಮತ ಸಮಾಜದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಸಮಾವೇಶ ಗಳಿಗೆ ಲಕ್ಷಾಂತರ ಜನ ಹರಿದು ಬರುತ್ತಿದ್ದಾರೆ. ಇದನ್ನು ಕಂಡು ಸಿದ್ದರಾಮಯ್ಯನವರು ಹೋರಾಟಕ್ಕೆ ಬೆಂಬಲಿಸಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಇಡೀ ರಾಜ್ಯದ ಹಾಲುಮತದವರು ಸಿದ್ದರಾಮಯ್ಯ ನವರನ್ನು ಬೆಂಬಲಿಸಿ ಸಿಎಂ ಮಾಡಿದ್ದಾರೆ. ಇದಕ್ಕೆ ಅಂದು ತಾವು ಸೇರಿ ಎಚ್.ವಿಶ್ವನಾಥ,ಎಚ್.ಎಂ. ರೇವಣ್ಣ ಹಾಗೂ ಕಾಂಗ್ರೆಸ್ ಮುಖಂಡರು ಬೆಂಬಲಿಸಿದ್ದರು. ಇದನ್ನು ಸಿದ್ದರಾಮಯ್ಯ ಮರೆತ್ತಿದ್ದಾರೆ ಇದು ಸರಿಯಲ್ಲ ಎಂದರು.
ಸಮಾವೇಶ: ಕಾಗಿನೆಲೆ ಪೀಠದ ಗುರುಗಳು ಮತ್ತು ನಾಲ್ಕು ವಿಭಾಗದ ಗುರುಗಳ ನೇತೃತ್ವದಲ್ಲಿ ಎಸ್ಟಿ ಹೋರಾಟ ಸಮಿತಿ ಹೋರಾಟ ನಡೆಸುತ್ತಿದೆ. ಕಾಗಿನೆಲೆ ಕ್ಷೇತ್ರದಿಂದ ಪೂಜ್ಯರ ನೇತೃತ್ವದಲ್ಲಿ ಜ.14 ರಿಂದ ಬೆಂಗಳೂರು ಚಲೋ ಪಾದಯಾತ್ರೆ ನಡೆಯಲಿದೆ.
ಫೆ.07ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದರು.