Advertisement
ಮಾನವೀಯತೆಯ ನಂದಾದೀಪ, ವೈಚಾರಿಕತೆಯ ಪ್ರದೀಪ, ಶಿಕ್ಷಣದ ಹೊಂಗಿರಣ ಕೆ.ಟಿ.ಗಟ್ಟಿ ಎಂಬ ಪ್ರಖರ ಸೂರ್ಯ ಇಂದು ಅಸ್ತಂಗತರಾಗಿದ್ದಾರೆ. ಗಟ್ಟಿ ಅವರು ತಮ್ಮ ಪ್ರಥಮ ಕೃತಿ “ಶಬ್ದಗಳು’ ಕಾದಂಬರಿಯಲ್ಲೇ ಮಾನವ ದೇಹದ ಸಾಧ್ಯತೆಗಳ ಬಗ್ಗೆ ವಿಚಾರ ಮಂಥನ ಮಾಡಿದವರು. ಆ ಕೃತಿಯ ಮೂಲಕ ಓದುಗರಲ್ಲಿ ಸಂಚಲನ ಮೂಡಿಸಿದ ಅದ್ವಿತೀಯರು.
Related Articles
ಮಾನವೀಯತೆಯ ಸಾಕಾರವಾಗಿದ್ದ ಕೆ.ಟಿ.ಗಟ್ಟಿ ಅವರಲ್ಲಿ ದೇವರು, ದಿಂಡರು, ಪೂಜೆ ಪುನಸ್ಕಾರಗಳಿರಲಿಲ್ಲ. ಇದ್ದುದು ಮಾನವೀಯ ಸಂಬಂಧಗಳು ಮತ್ತು ಪುಸ್ತಕಗಳ ನಂಟು. ನೆಹರೂ ಅವರಂತೆ ಪುಟಗಳನ್ನು ಬಿಡಿ ಬಿಡಿ ವಾಕ್ಯಗಳನ್ನು ಓದದೆ ಇಡಿಯ ಪುಟವನ್ನು ಶೀಘ್ರವಾಗಿ ಗ್ರಹಿಸುವ ಬಗೆ ಅವರ ಅನನ್ಯತೆ. ಅದನ್ನು ಎಲ್ಲರಿಗೂ ತಿಳಿಸಿ ಕೊಟ್ಟಿದ್ದರು. ಭಾಷಾ ಶಾಸ್ತ್ರದ ಅರಿವಿದ್ದ ಅವರು ಇಂಗ್ಲಿಷ್ ಉಚ್ಚಾರದ ಬಗೆಗೂ ಉತ್ತಮ ಪರಿಜ್ಞಾನ ಹೊಂದಿದ್ದರು. ಅವರ “ಅಬ್ರಾಹ್ಮಣ’, “ಕರ್ಮಣ್ಯೇ ವಾಧಿಕಾರಸ್ತೇ’ ಕೃತಿಗಳು ಸಾಮಾಜಿಕ ಸಂಚಲನವನ್ನೇ ಉಂಟು ಮಾಡಿದ್ದವು ಎನ್ನಲಡ್ಡಿಯಿಲ್ಲ. ಅವರ ಅಷ್ಟೂ ಕಾದಂಬರಿಗಳಲ್ಲಿ ಜನರ ಹೆಸರಾಗಲಿ, ಸ್ಥಳನಾಮಗಳಾಗಲೀ ಎಲ್ಲೂ ಪುನರಾವರ್ತನೆ ಆದುದು ಎಂಬುದೇ ಇಲ್ಲ. ಪಯಣದ ಆರಂಭದಲ್ಲಿ ಶುರುವಾಗುವ ಕಥೆ, ಕಾದಂಬರಿಯ ಮೊಳಕೆ ಬಸ್ ಇಳಿಯುವಾಗ ಪೂರ್ಣ ಹಂದರವಾಗಿ ರೂಪುಗೊಳ್ಳುತ್ತದೆ. ಅತ್ಯಂತ ಬಡ ಹಿನ್ನೆಲೆಯಿಂದ ಬಂದ ಗಟ್ಟಿಯವರ ಬೌದ್ಧಿಕ ಶ್ರೀಮಂತಿಕೆ ಅಪಾರ. ಅವರ “ಕೆಂಪು ಕಳವೆ’ ಕಾದಂಬರಿ ರೇಡಿಯೋದಲ್ಲಿ ಪ್ರಸಾರವಾಗಿ ಅಪಾರ ಜನಮನ್ನಣೆ ಪಡೆದಿತ್ತು.
Advertisement
ವರ್ಷಗಳ ಹಿಂದೆ ಮೆದುಳಿನ ಸ್ಟ್ರೋಕ್‌ಗೆ ಒಳಗಾಗಿದ್ದ ಅವರು ಸುರಕ್ಷಿತವಾಗಿ ಹೊರಬಂದರೂ ಇತ್ತೀಚಿನ ವರ್ಷಗಳಲ್ಲಿ ಅದರ ಪರಿಣಾಮ ಅವರ ಚಿತ್ತ, ದೇಹದ ಮೇಲೆ ಆಗದಿರಲಿಲ್ಲ. ಇನ್ನು ಬರೆಯುವುದು ಏನೂ ಇಲ್ಲ, ಬರೆದು ಮುಗಿದಿದೆ ಎಂದು ನಾಲ್ಕು ವರ್ಷಗಳಿಂದ ಅವರು ಹೇಳುತ್ತಲೇ ಇದ್ದರು. ಕೊನೆಯವರೆಗೂ ಅವರ ಲೇಖನಿ ನಿಲ್ಲದಿರಲಿ ಎಂಬುದೇ ನನ್ನ ಹಾರೈಕೆಯಾಗಿತ್ತು. ಆದರೆ ಆ ಆಶಯ ಈಡೇರಲಿಲ್ಲ ಎಂಬುದೇ ನನಗೆ ತೀರಾ ದುಃಖ ವನ್ನುಂಟು ಮಾಡಿದೆ.
1977ರಲ್ಲಿ ನನ್ನ ಪತ್ರಕ್ಕೆ ಉತ್ತರವಾಗಿ ನಮ್ಮ ಮನೆ ಬಾಗಿಲಲ್ಲಿ ಪ್ರತ್ಯಕ್ಷರಾದವರು. ಉಜಿರೆಯ ವನಶ್ರೀಯಲ್ಲಿ¨ªಾಗ ಸಾಹಿತ್ಯ, ತೋಟದ ಕೃಷಿಯಲ್ಲಿ ನಿರಂತರ ತೊಡಗಿಕೊಂಡಿರುತ್ತಿದ್ದ ಗಟ್ಟಿಯವರು ನನ್ನನ್ನು ಕಂಪ್ಯೂಟರ್ ಬಳಕೆಗೂ ಪ್ರೇರೇಪಿಸಿದವರು. ಅರ್ಧಗಂಟೆಯಲ್ಲಿ ನೀವದರಲ್ಲಿ ಮಾಸ್ಟರ್ ಆಗ ಬಹುದು ಎಂದು ಹುರಿ ದುಂಬಿಸಿ ದವರು. ಹಾಗೆ ಆಧುನಿಕ ತಾಂತ್ರಿಕತೆ ಬಗ್ಗೆ ಮನದ ಮೂಲೆಯಲ್ಲೋ ಕುತೂಹಲದ ಕಿಂಡಿ ತೆರೆದಿಟ್ಟುಕೊಂಡಿದ್ದವರು. ಅಂಥವರು ಈ ಕೊನೆಯ ವರ್ಷಗಳಲ್ಲಿ ಸ್ಮಾರ್ಟ್ ಫೋನ್ ಆದರೂ ಉಪಯೋಗಿ ಸುತ್ತಿದ್ದರೆ ಕ್ರಿಯಾ ಶೀಲವಾಗಿರುತ್ತಿದ್ದರೇನೋ ಎಂದು ನಾನು ಅಂದು ಕೊಳ್ಳುವುದಿದೆ. ಅದು ಪೂರ್ಣ ಸತ್ಯವೋ ತಿಳಿದಿಲ್ಲ.
ಕೊರೊನಾ ಕಾಲದ ನಿರ್ಬಂಧ ಹಲವರನ್ನು ಮೂಲೆಗುಂಪಾಗಿಸಿದಂತೆ ನಮ್ಮ ಗಟ್ಟಿಯವರೂ ನಿಶ್ಚೇತನರಾಗುತ್ತಾ ನಡೆದರು. ನನ್ನ ಸಾಹಿತ್ಯ ಸ್ನೇಹ ಬಂಧ, ನನ್ನೆಲ್ಲ ಸಾಧನೆಗಳಿಗೆ ಮೂಲಾಧಾರವಾಗಿದ್ದ ಅವರ ಅಗಲಿಕೆ ನನ್ನ ಪಾಲಿಗಂತೂ ತುಂಬಲಾರದ ನಷ್ಟ.ಗಟ್ಟಿಯವರು ನಮ್ಮ ಸಾಹಿತ್ಯ ಕ್ಷೇತ್ರದ ಅನರ್ಘ್ಯ ನಿಧಿ. ಅವರನ್ನು ಕನ್ನಡ ನಾಡು ಹೇಗೆ ಕಂಡಿತು ಎಂಬ ಬಗ್ಗೆ ಮಾತು ಅನಗತ್ಯ. ಅವರು ಅಂತಹ ವಿಚಾರಗಳಿಗೆ ಹೊರತಾಗಿ ಬದುಕಿದವರು. ಕೇವಲ ಸಾಹಿತ್ಯವನ್ನೇ ಕೊನೆವರೆಗೂ ಉಸಿರಾಡಿ ಇಲ್ಲಿಂದ ಹೊರಟವರು. ಆದರೆ ಅವರ ಸಾಹಿತ್ಯ ಕೃತಿಗಳು, ವಿಚಾರಧಾರೆ ಮೂಲಕ ಸಾಹಿತ್ಯಾಸಕ್ತರೆಲ್ಲರ ಹೃದಯಗಳಲ್ಲಿ ಸದಾ ಜ್ವಲಂತರಾಗಿರುವವರು. ಅದರಲ್ಲಿ ಎರಡು ಮಾತಿಲ್ಲ. ಶ್ಯಾಮಲಾ ಮಾಧವ