Advertisement

ವಿಮ್ಸ್ ಆಸ್ಪತ್ರೆ ಘಟನೆ ತಪ್ಪಿತಸ್ಥರ ವಿರುದ್ಧ ಕ್ರಮ ಶತಸಿದ್ಧ: ಸಚಿವ ಡಾ.ಕೆ.ಸುಧಾಕರ್‌

05:37 PM Sep 17, 2022 | Team Udayavani |

ಬೆಂಗಳೂರು: ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯಲ್ಲಿ ರೋಗಿಗಳು ಸಾವಿಗೀಡಾದ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಈ ಘಟನೆಗೆ ಕಾರಣವಾದವರ ವಿರುದ್ಧ ನೂರಕ್ಕೆ ನೂರು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ಸಾವಿಗೀಡಾದ ಕೂಡಲೇ ಡಾ.ಸ್ಮಿತಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಸಮಿತಿಯವರು ನಿನ್ನೆ ಇಡೀ ದಿನ ಆಸ್ಪತ್ರೆಯಲ್ಲಿದ್ದು ಮಾಹಿತಿ ಪಡೆದಿದ್ದಾರೆ. ಇನ್ನೂ ಕೆಲ ಎಲೆಕ್ಟ್ರಿಕ್‌ ಎಂಜಿನಿಯರ್‌ ಗಳನ್ನು ಅಲ್ಲಿಗೆ ಕರೆದೊಯ್ಯಬೇಕು ಎಂದು ಸಮಿತಿಯವರು ಹೇಳಿದ್ದು, ಅದಕ್ಕೂ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲಿ ಈ ಕುರಿತ ವರದಿ ಬರಲಿದೆ. ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಈ ದುರ್ಘಟನೆಯಿಂದಾಗಿ ನಮಗೂ ನೋವಾಗಿದೆ. ಸಾವಿಗೀಡಾದ ರೋಗಿಗಳು ಆಸ್ಪತ್ರೆಗೆ ದಾಖಲಾದಾಗ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಆದರೂ ಸರ್ಕಾರದಿಂದ ತನಿಖೆಯನ್ನು ನಡೆಸಲಾಗುತ್ತಿದೆ. ತನಿಖಾ ವರದಿ ಬಂದ ನಂತರ ಅದನ್ನು ಪರಿಶೀಲಿಸಲಾಗುವುದು. ನೊಂದವರ ಕುಟುಂಬಕ್ಕೆ ಈಗಾಗಲೇ 5 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ನಾಳೆ ನಾನೇ ಬಳ್ಳಾರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಿದ್ದೇನೆ. ಸರ್ಕಾರ ಯಾವುದೇ ಅಂಶವನ್ನು ಮುಚ್ಚಿಡುವುದಿಲ್ಲ. ಪ್ರತಿಯೊಬ್ಬರ ಜೀವವೂ ಸರ್ಕಾರಕ್ಕೆ ಬಹಳ ಮುಖ್ಯ ಎಂದರು.

ಯಾವುದೇ ಶಾಸಕರು ಹೇಳಿದಾಕ್ಷಣ ಆಸ್ಪತ್ರೆಗೆ ನಿರ್ದೇಶಕರನ್ನು ನೇಮಿಸಲು ಸಾಧ್ಯವಿಲ್ಲ. ನಿರ್ದೇಶಕರನ್ನು ನೇಮಿಸಲು ಕೆಲ ನಿಯಮಗಳಿರುತ್ತವೆ. ಅರ್ಹರಾದವರನ್ನು ಮಾತ್ರ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ. ಕರುಣಾಕರ ರೆಡ್ಡಿ, ಸಚಿವ ಶ್ರೀರಾಮುಲು, ಸಚಿವ ಆನಂದ್‌ ಸಿಂಗ್‌ ಎಲ್ಲರೂ ಬಳ್ಳಾರಿಯಲ್ಲಿದ್ದಾರೆ. ಈ ಪ್ರಕ್ರಿಯೆ ಹೇಗೆ ನಡೆದಿದೆ ಎಂಬುದು ಅವರೆಲ್ಲರಿಗೂ ಗೊತ್ತಿದೆ. ಇದರಲ್ಲಿ ರಾಜಕಾರಣ ಮಾಡುವವರ ಘನತೆಯೇ ಕಡಿಮೆಯಾಗುತ್ತದೆ. ಇಂತಹ ವಿಚಾರದಲ್ಲಿ ಆರೋಪ ಮಾಡುವುದು ಬಹಳ ಸುಲಭ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next