Advertisement

ಹೊರಗುತ್ತಿಗೆ ಸಿಬ್ಬಂದಿಗೆ ನಿಯಮಿತವಾಗಿ ವೇತನ ನೀಡದಿದ್ದರೆ ಶಿಸ್ತುಕ್ರಮ : ಸಚಿವ ಸುಧಾಕರ್‌

08:17 PM Jun 29, 2021 | Team Udayavani |

ಮಡಿಕೇರಿ : ಕೋವಿಡ್‌ ಅವಧಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡ ನರ್ಸಿಂಗ್‌ ಸಿಬ್ಬಂದಿಗಳಿಗೆ ತಕ್ಷಣ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಭರವಸೆ ನೀಡಿದ್ದಾರೆ.

Advertisement

ಅನೇಕ ದಿನಗಳಿಂದ ಹೊರ ಗುತ್ತಿಗೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಈ ಸಿಬ್ಬಂದಿಗೆ ಇದುವರೆಗೂ ವೇತನ ನೀಡಿಲ್ಲ ಎಂಬುದನ್ನು ಕೊಡಗು ಜಿಲ್ಲಾ ಕೋವಿಡ್‌ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಂಗಳವಾರ ಈ ಭರವಸೆ ನೀಡಿದರು.

ಹಿರಿಯ ಶಾಸಕ ಕೆ.ಜೆ. ಬೋಪಯ್ಯ ಅವರು ಈ ವಿಷಯ ಗಮನಕ್ಕೆ ತರುತ್ತಿದ್ದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಅನೇಕ ದಿನಗಳಾದರೂ ವೇತನ ನೀಡದ ಅಧಿಕಾರಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಿಂದಲೇ ಇಲಾಖೆ ಆಯುಕ್ತ ತ್ರೀಲೋಕಚಂದ್ರ ಹಾಗೂ ವೈದ್ಯಕೀಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್‌ ಅವರಿಗೆ ದೂರವಾಣಿ ಕರೆ ಮಾಡಿ ತಕ್ಷಣವೇ ವೇತನ ಬಿಡುಗಡೆಗೆ ಕ್ರಮ ಜರುಗಿಸುವಂತೆ ಆದೇಶ ನೀಡಿದರು.

ಇನ್ನು ಮುಂದೆ ಇಂತಹ ಬೆಳವಣಿಗೆಗಳನ್ನು ಸಹಿಸಲು ಸಾಧ್ಯವಿಲ್ಲ. ಕೆಳ ಹಂತದಲ್ಲಿ ಕಷ್ಟಪಟ್ಟು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವೇತನ ವಿಳಂಬವಿಲ್ಲದೆ ನೀಡಬೇಕು. ಇಂತಹ ದೂರುಗಳು ಪುನಾರವರ್ತನೆ ಆಗದಂತೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಮೆಡಿಕಲ್‌ ಕಾಲೇಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ :ಡೆಲ್ಟಾ ಭೀತಿ; ಕಾರವಾರದ ಮಾಜಾಳಿ ಗಡಿಯಲ್ಲಿ ಬಿಗಿ ಭದ್ರತೆ

Advertisement

ಮೈಕ್ರೋ ಕಂಟೈನ್‌ಮೆಂಟ್‌ ಪ್ರದೇಶ
ರಾಜ್ಯದಲ್ಲಿ ಅತಿ ಹೆಚ್ಚಿನ ಸೋಂಕು ಹರಡುವಿಕೆಯ ನಗರ/ಪಟ್ಟಣ ಪ್ರದೇಶಗಳ ಪಟ್ಟಿಯಲ್ಲಿ ಜಿಲ್ಲೆಯ ಸೋಮವಾರಪೇಟೆ ಗ್ರಾಮಾತರ ಪ್ರದೇಶಗಳ ಪೈಕಿ ಯವಕನಪಡ್ಡಿ, ಹುಡ್ಡೂರು, ಮುಳ್ಳೂರು, ಚನ್ನಯ್ಯನಕೋಟೆ, ಆಲೂರು ಮತ್ತು ಚಿಕ್ಕನಿಳ್ಳಯ್ಯ ಗ್ರಾಮಗಳು ಸೇರಿವೆ. ಇಲ್ಲಿ ಕಟ್ಟುನಿಟ್ಟಿನ ಬಿಗಿ ಕ್ರಮಗಳ ಮೂಲಕ ಸೋಂಕು ಹರಡುವಿಕೆ ನಿಯಂತ್ರಿಸಬೇಕು. ಇದಕ್ಕಾಗಿ ಮೈಕ್ರೋ ಕಂಟೈನ್‌ಮೆಂಟ್‌ ಪ್ರದೇಶಗಳಾಗಿ ಗುರುತಿಸಿ ಅಗತ್ಯ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರಿಗೆ ಸೂಚನೆ ನೀಡಿದರು.

ಸೋಂಕು ಹರಡುವಿಕೆ ಪ್ರಮಾಣ ಕಳೆದ ವಾರ ಶೇ.8.25 ರಷ್ಟಿದ್ದು, ರಾಜ್ಯದಲ್ಲೇ ಅತಿ ಹೆಚ್ಚಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರವಾಸಿಗರು ಮತ್ತು ಜನರ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಿ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗ ಸೂಚನೆ ನೀಡಿದರು. ಜಿಲ್ಲೆಗೆ ನೀಡಿರುವ ಆಕ್ಸಿಜನ್‌ ಕಾನ್ಸ್‌ನ್‌ಟ್ರೇಟರ್ಸ್‌ ಮತ್ತು ಇತರೆ ಉಪಕರಣಗಳನ್ನು ಎಚ್ಚರಿಕೆಯಿಂದ ಬಳಕೆ ಮಾಡಬೇಕು. ಅಗತ್ಯವಿದ್ದರೆ ಹೊರಗುತ್ತಿಗೆ ಆಧಾರದ ಮೇಲೆ ಹೆಚ್ಚಿನ ಸಿಬ್ಬಂದಿ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಬೇಡಿಕೆ ಆಧರಿಸಿ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಮರಣ ಪ್ರಮಾಣ ಹೆಚ್ಚು
ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಮರಣ ಪ್ರಮಾಣ ಶೇ.4ಕ್ಕಿಂತ ಹೆಚ್ಚಿದೆ. ವಿಶೇಷ ತಜ್ಞ ಸಿಬ್ಬಂದಿ ಇರುವ ಆಸ್ಪತ್ರೆಯಲ್ಲಿ ಈ ಪ್ರಮಾಣವನ್ನು ಸಹಿಸಲು ಆಗುವುದಿಲ್ಲ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಡೆತ್‌ ಆಡಿಟ್‌ ಮಾಡಿ ಅದರ ವರದಿ ಕಳುಹಿಸಿಕೊಡುವಂತೆ ಸೂಚಿಸಿದರು. ಲಸಿಕೆ ವಿತರಣೆ ಬಗ್ಗೆ ಪರಿಶೀಲನೆ ನಡೆಸಿದ ಸಚಿವರು ಬಳಕೆ ಆಧಾರದಲ್ಲಿ ಜಿಲ್ಲೆಗೆ ಲಸಿಕೆ ಸರಬರಾಜು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 14,724 ಸೋಂಕಿತರು ಗುಣಮುಖ, 3222 ಹೊಸ ಪ್ರಕರಣ ಪತ್ತೆ

ನನಗೆ ಹೇಳಿ ಹೋಗಿಲ್ಲ….
ರಮೇಶ್‌ ಜಾರಕಿಹೊಳಿ ಅವರಾಗಲೀ, ಸಿ.ಪಿ. ಯೋಗೇಶ್ವರ್‌ ಅವರಾಗಲೀ ನನಗೆ ಹೇಳಿ ದಿಲ್ಲಿಗೆ ಹೋಗಿಲ್ಲ. ನಾನಾ ಕಾರಣಗಳಿಗೆ ಅವರು ಪ್ರವಾಸ ಕೈಗೊಂಡಿರಬಹುದು. ವೈಯಕ್ತಿಕ, ಅಧಿಕೃತ ಇಲ್ಲವೇ ಪಕ್ಷದ ವರಿಷ್ಠರ ಭೇಟಿಗೆ ಹೋಗಿರಬಹುದು. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಯೋಗೇಶ್ವರ್‌ ಮತ್ತು ಬಸನಗೌಡ ಪಾಟೀಲ್‌ ಯತ್ನಾಳ್‌ ಭೇಟಿ ಮಾಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಸಭೆಯ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಕೊಡಗು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದ ಕೊರೋನಾ ಸೋಂಕು ಹರಡುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಬಿಗಿ ನಿರ್ಬಂಧಗಳನ್ನು ಜಾರಿಗೊಳಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ತಾಂತ್ರಿಕ ಕಾರಣಗಳಿಂದ ಹೊರಗುತ್ತಿಗೆ ಸಿಬ್ಬಂದಿಗೆ ವೇತನ ವಿತರಣೆಯಲ್ಲಿ ಆಗಿದ್ದ ವಿಳಂಬವನ್ನು ಸರಿಪಡಿಸಲಾಗಿದೆ. ನಾಳೆಯೇ ಅವರಿಗೆ ವೇತನ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಗೊಂದಲ ನಿವಾರಿಸಲಾಗಿದೆ ಎಂದೂ ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲೆಗೆ ಅಗತ್ಯ ಪ್ರಮಾಣದ ವ್ಯಾಕ್ಸಿನ್‌ ಲಭ್ಯವಾಗುತ್ತಿಲ್ಲ ಎಂಬ ಆರೋಪಗಳನ್ನು ನಿರಾಕರಿಸಿದ ಸಚಿವರು ಬಳಕೆ ಆಧಾರದ ಮೇಲೆ ಪ್ರತಿದಿನವೂ ಸರಬರಾಜು ಮಾಡಲಾಗುತ್ತಿದೆ. ಜುಲೈ ಅಂತ್ಯದ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗಲಿದೆ. ಅದನ್ನು ಎಲ್ಲಾ ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ಸರಬರಾಜು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next