ಕೋಲಾರ: ಕೋಲಾರ, ರೈಲ್ವೆ ಕೋಚ್ ಫ್ಯಾಕ್ಟರಿ ವಿಚಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಮತ್ತು ಶಾಸಕ ಕೆ.ಶ್ರೀನಿವಾಸಗೌಡರಿಗೆ ಗಂಧ-ಗಾಳಿ ಗೊತ್ತಿಲ್ಲದೆ, ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ವಿರುದ್ಧ ವೈಯುಕ್ತಿಕ ಹೇಳಿಕೆ ನೀಡುತ್ತಿರುವುದನ್ನು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸೀತಿ ಹೊಸೂರು ಎನ್.ಮುರಳಿಗೌಡ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಸದ ಎಸ್.ಮುನಿಸ್ವಾಮಿ ಸಂಸದರಾಗಿದ್ದರೂ ಇನ್ನೂ ಬಿಬಿಎಂಪಿ ಗುಂಗಿನಿಂದ ಹೊರಬರದೆ ರೈಲ್ವೆ ಕೋಚ್ ಫ್ಯಾಕ್ಟರಿ ವಿಚಾರದಲ್ಲಿ ತಿಳಿವಳಿಕೆ ಇಲ್ಲದೆ ಮಾತನಾಡುತ್ತಿದ್ದಾರೆ.
ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್‌ಅಂಗಡಿ ಅವರು, ಯಾವುದೇ ಕಾರಣಕ್ಕೂ ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣದಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ, ಮೊದಲಿಗೆ ವರ್ಕ್‌ಶಾಪ್ ನಂತರ ರೈಲ್ವೆ ಕೋಚ್ ಫ್ಯಾಕ್ಟರಿ ಮಾಡುವುದಾಗಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಆದರೆ, ಬಿಜೆಪಿ ಸಚಿವರ ಮಾತನ್ನು ನಂಬದ ಸಂಸದ ಎಸ್.ಮುನಿಸ್ವಾಮಿ ಯಾವುದೇ ಕಾರಣಕ್ಕೂ ರೈಲ್ವೆ ಕೋಚ್ ಫ್ಯಾಕ್ಟರಿ ಆಗೋದಿಲ್ಲ ಎಂದು ಹೇಳಿಕೆ ಕೊಡುವ ಮೂಲಕ ಅಭಿವೃದ್ಧಿಗೆ ವಿರೋಧಿಯಾಗಿದ್ದಾರೆ.
ವೈಯಕ್ತಿಕ ಸಾಧನೆ ಏನೂ ಇಲ್ಲ: ರೈಲ್ವೆ ಕೋಚ್ ಫ್ಯಾಕ್ಟರಿ ಯೋಜನೆ ಮುಂದಿಟ್ಟುಕೊಂಡು ಕೆ.ಎಚ್.ಮುನಿಯಪ್ಪ ಅವರು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿಕೆ ನೀಡಿರುವುದು ಅವರ ಸಣ್ಣತನ ತೋರಿಸುತ್ತದೆ. ಬಿಬಿಎಂಪಿ ಸದಸ್ಯರಾಗಿ ಕಾಡುಗೋಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ಕೆಲಸವನ್ನು ಮಾಡಿಕೊಂಡಿದ್ದ ವ್ಯಕ್ತಿ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕೆಲವು ಮುಖಂಡರ ತಪ್ಪು ನಿರ್ಧಾರದಿಂದ ಸಂಸದರಾಗಿದ್ದಾರೆಯೇ ವಿನಃ, ಅವರ ವೈಯುಕ್ತಿಕ ಸಾಧನೆ ಏನು ಇಲ್ಲ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಡೀಸಿ ವರ್ಗಾವಣೆಗೆ ಒತ್ತಡ: ನಾನು ಅಭಿವೃದ್ಧಿ ಪರ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ಸಂಸದ ಎಸ್.ಮುನಿಸ್ವಾಮಿ ಅವರು ಜಿಲ್ಲಾಧಿಕಾರಿ ಜೆ. ಮಂಜುನಾಥ್, ಜಿಲ್ಲಾ ರಕ್ಷಣಾಧಿಕಾರಿ ಅವರನ್ನು ವರ್ಗಾವಣೆ ಮಾಡಿಸುವುದಕ್ಕೆ ಮುಂದಾಗಿದ್ದು, ಈಗಾಗಲೆ ಬಹುತೇಕ ಶಾಸಕರು ಜಿಲ್ಲಾಧಿಕಾರಿ ಮಂಜುನಾಥ ಅವರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸುತ್ತಿರುವಾಗ ಸಂಸದ ಎಸ್. ಮುನಿಸ್ವಾಮಿ ಮಾತ್ರ ವರ್ಗಾವಣೆ ಮಾಡಿಸಲೇಬೇಕೆಂದು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಶಾಸಕ ಕೆ.ಶ್ರೀನಿವಾಸಗೌಡರು ಹಿರಿಯರು, ಅವರಿಗೆ ಕೆ.ಎಚ್.ಮುನಿಯಪ್ಪ ಅವರನ್ನು ನಾನೇ ಸೋಲಿಸಿದ್ದು ಅಂತೇಳಿಕೊಂಡು ಓಡಾಡುವುದು ದೊಡ್ಡ ಕೆಲಸವಾಗಿದೆ. ಆದರೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಆಗುತ್ತಿಲ್ಲ ಅನ್ನೋದನ್ನು ಮರೆತು ಮಾತನಾಡುತ್ತಿದ್ದಾರೆ.
ರಾಜಕೀಯ ಹೇಳಿಕೆ ಕೊಟ್ಟಿಲ್ಲ: ಕೆ.ಎಚ್.ಮುನಿಯಪ್ಪ ಅವರು ಎಲ್ಲಿಯೋ ಕೂಡ ರೈಲ್ವೆ ವರ್ಕ್‌ಶಾಪ್ ಬೇಡ ಎಂದು ಹೇಳಿಲ್ಲ, ಇದರ ಜೊತೆಗೆ ರೈಲ್ವೆ ಕೋಚ್ ಫ್ಯಾಕ್ಟರಿ ಆದರೆ, ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆದ್ಯತೆ ಸಿಗುತ್ತದೆ. ಅದಕ್ಕಾಗಿ ಈ ಯೋಜನೆಯನ್ನು ಉಳಿಸಿಕೊಳ್ಳುವುದಕ್ಕೆ ಹೋರಾಟ ಮಾಡುವುದಾಗಿ ಹೇಳಿದ್ದಾರೆಯೇ ಹೊರತು? ಅವರ ರಾಜಕೀಯಕ್ಕಾಗಿ ಈ ಹೇಳಿಕೆಯನ್ನು ಕೊಟ್ಟಿಲ್ಲ.
ವಾಸ್ತಾವ ಅರಿತು ಮಾತನಾಡಿ: ಶಾಸಕ ಕೆ.ಶ್ರೀನಿವಾಸಗೌಡರು ಶಾಸಕರಾಗಿ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂಬುದನ್ನು ಜನರ ಮುಂದೆ ಹೇಳಬೇಕು, ಇತ್ತೀಚಿನ ದಿನಗಳಲ್ಲಿ ತಾನು ಏನು ಮಾತನಾಡುತ್ತಿದ್ದೇನೆ ಎಂಬುದರ ಬಗ್ಗೆ ಅರಿವಿಲ್ಲದೆ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ಇನ್ನಾದರೂ ಅಭಿವೃದ್ಧಿ ವಿಚಾರದಲ್ಲಿ ವಾಸ್ತುವಾಂಶವನ್ನು ಅರಿತು ಮಾತನಾಡಲಿ ಎಂದು ಹೇಳಿದ್ದಾರೆ.