ಕಿರಿಯರಿಲ್ಲ’ ಎಂದು ಹೇಳುತ್ತಲೇ ಇರುತ್ತಾರೆ. ಹಾಗೆಯೇ ಬದುಕುತ್ತಾರೆ. ತಮಗೆ ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುತ್ತಾ, ನನ್ನ ಬೆಳವಣಿಗೆಯ ಹಿಂದೆ ಇಂಥವರ ಕರುಣೆಯ ಕೈ ಕೆಲಸ ಮಾಡಿದೆ ಎಂದು ಹೇಳುವ ಮೂಲಕ ದೊಡ್ಡತನ ಮೆರೆಯುತ್ತಾರೆ. ಅಂಥವರ ಪೈಕಿ ಶಿವರಾಮ ಕಾರಂತರು ಪ್ರಮುಖರು.
“ಕಾರಂತರು ತಮ್ಮ ಚೋಮನ ದುಡಿ’ ಕಾದಂಬರಿಯನ್ನು ಅರ್ಪಿಸಿದ್ದು ದೇವಣ್ಣ ಸುಬ್ರಾಯ ಪೈ ಅವರಿಗೆ. ಪೈ ಅವರಿಗೇ ಕಾದಂಬರಿ ಅರ್ಪಿಸಿದ್ದೇಕೆ ಎಂಬುದಕ್ಕೆ ಕಾರಂತರು ಸ್ಪಷ್ಟನೆಯನ್ನೂ ಕೊಡುತ್ತಾರೆ. ಅದು ಹೀಗೆ:
ಈ ಗ್ರಂಥದ ಅರ್ಪಣೆಯ ವಿಚಾರ- ಇದನ್ನು ನನ್ನೊಬ್ಬ ಮಿತ್ರರಾದ ಕುಂದಾಪುರದ ದೇವಣ್ಣ ಸುಬ್ರಾಯ ಪೈಗಳಿಗೆ ಅರ್ಪಿಸಿದ್ದೇನೆ. ಅವರೇನು ದೊಡ್ಡ ಮನುಷ್ಯರ ವರ್ಗಕ್ಕೆ ಸೇರಿದವರಲ್ಲ. ಬಡ ಗುಮಾಸ್ತರೊಬ್ಬರು. ಆದರೆ ಅವರಿಗೆ ನನ್ನಿಂದ ಸಲ್ಲುವ ಪ್ರೇಮದ ಋಣ ಬಹಳವಿದೆ. ಎಷ್ಟೋ ಸಮಯ, ನಾನು ಅವರನ್ನು ಮರೆಯುವ ತಪ್ಪನ್ನೂ ಮಾಡಿದ್ದೇನೆ. ಈಗ ಅವರಿಗೆ ಈ ವಿಶ್ವಾಸದ ಕಾಣಿಕೆಯನ್ನು ಅರ್ಪಿಸುತ್ತಿದ್ದೇನೆ. ನಾನು ಚಿಕ್ಕವನಾಗಿರುವಾಗ (ಈಗ ದೊಡ್ಡವನಾಗಿಲ್ಲ) ಅವರ ಬೆಂಬಲವಿಲ್ಲದಿದ್ದರೆ ನನಗೆ ಸಾಹಿತ್ಯ ಕ್ಷೇತ್ರದಲ್ಲಿ ಹಾರುವುದು ಅಸಾಧ್ಯದ ಮಾತಾಗಿತ್ತು. ತಮ್ಮ ಕಷ್ಟಾರ್ಜಿತ ಧನದಿಂದ ಅವರು ನನ್ನ ಹಿಂದಿನ ಸಾಹಸ ವಸಂತ’ ಪತ್ರಿಕೆಯ ಜನ್ಮಕ್ಕೆ ಕಾರಣರಾದರು.
ಅದರಿಂದಾಗಿ, ನನ್ನ ಮೊದಲಿನ ಕಾದಂಬರಿ ವಿಚಿತ್ರ ಕೂಟವು ಬೆಳಕನ್ನು ಕಂಡಿತು. ನನ್ನ ಅಂದಿನ ಕೆಲಸಗಳೆಲ್ಲ ತೀರ ತೊದಲು ನುಡಿಗಳಂತಿವೆ. ಅವುಗಳನ್ನು ಆಡಲು, ತಮ್ಮ ಅಪಾರ ತ್ಯಾಗದಿಂದ ಅವರೇ ವಾತಾವರಣ ಕಲ್ಪಿಸಿಕೊಟ್ಟರು. ನಾನು ಯಾವ ಸ್ಥಿತಿಯಲ್ಲಿದ್ದರೂ ಅವರ ಸಹಾಯದ ನೀರೇ, ಮುಂದಿನ ಬೆಳೆಗೆ ಕಾರಣವಾಯಿತು ಎಂಬುದನ್ನು ಮರೆಯಲಾರೆ. ಅವರು ಸಾಹಿತ್ಯ ಪ್ರೇಮಿಗಳೂ, ಹರಿಜನರ ಮೇಲೆ ಕರುಣೆಯುಳ್ಳವರೂ ಅಹುದು. ಆದುದರಿಂದ ಇದೇ ಉಚಿತ ಕಾಣಿಕೆಯೆಂದು ಅವರಿಗೆ ಅರ್ಪಿಸುತ್ತಿದ್ದೇನೆ.
ಬದುಕುವುದು ಅಂದರೆ ಹೀಗೇ ಅಲ್ವೇ?