Advertisement

K. Shivaram; ಸೋತರೆ ಬಿಜಾಪುರಕ್ಕೆ ಬರಲ್ಲ, ಖರ್ಗೆ ವಿರುದ್ಧ ಸ್ಪರ್ಧಿಸಲ್ಲ

07:42 PM Feb 29, 2024 | Team Udayavani |

ವಿಜಯಪುರ : ಅವಕಾಶಗಳಿದ್ದರೂ ಅಭಿವೃದ್ಧಿ ಹೀನವಾಗಿರುವ ಈ ನೆಲಕ್ಕೆ ಪ್ರಗತಿಯ ಬೆಳಕು ಚಲ್ಲುವ ನನ್ನ ಕನಸಿನೊಂದಿಗೆ ಬಂದಿದ್ದೇನೆ. ಒಂದೊಮ್ಮೆ ಬಸವನಾಡಿ ಜನರು ನನ್ನನ್ನು ತಿರಸ್ಕರಿಸಿದರೆ ಮತ್ತೆಂದೂ ವಿಜಯಪುರ ಜಿಲ್ಲೆಗೆ ಬರುವುದಿಲ್ಲ, ಜನರೇ ಬೇಡವೆಂದರೆ ಮತ್ತೇಕೆ ಇಲ್ಲಿಗೆ ಬರಲಿ…! ಒಂದೊಮ್ಮೆ ಗೆಲ್ಲಿಸಿ ಕೈ ಹಿಡಿದರೆ ಮತ್ತೆಂದೂ ಇಲ್ಲಿಂದ ಕಾಲು ಕೀಳುವುದಿಲ್ಲ…!!ಹೀಗಂತ ದಶಕದ ಹಿಂದೆ `ಉದಯವಾಣಿ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಮತ್ತೆಂದೂ ಬಸವನಾಡಿಗೆ ಹಿಂದಿರುಗಿ ಬರಲೇ ಇಲ್ಲ.

Advertisement

ದಶಕದ ಹಿಂದೆ ಲೋಕಸಭೆ ಚುನಾವಣೆ ಹಂತದಲ್ಲಿ ವಿಜಯಪುರಕ್ಕೆ ಆಗಮಿಸಿದ್ದ ಅವರು, ಇದೀಗ ಲೋಕಸಭೆಗೆ ಚುನಾವಣೆ ಘೋಷಣೆ ಹಂತದಲ್ಲೇ ಕಾಕತಾಳೀಯ ಎಂಬಂತೆ ಕಾಲನ ಕರೆಗೆ ಓಗೊಟ್ಟಿದ್ದಾರೆ. ಆದರೆ ಜಿಲ್ಲೆಯ ಜನರು ಮಾತ್ರ ಶಿವರಾಂ ಅವರನ್ನು, ಅವರ ಸೇವೆ, ಸ್ನೇಹ ಬಾಂಧವ್ಯವನ್ನು ಇಂದಿಗೂ ಮರೆತಿಲ್ಲ.

2014 ರ ಲೋಕಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ವಿಜಯಪುರ ಕ್ಷೇತ್ರದಿಂದ ಕೊನೆ ಕ್ಷಣದಲ್ಲಿ ಬಂದು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಏಪ್ರೀಲ್ 18 ಹಿಂದಿನ ದಿನವಷ್ಟೇ ಲೋಕಸಭೆ ಚುನಾವಣೆ ಕಾವು ಮುಗಿದಿತ್ತು.

ಮತ ಎಣಿಕೆ ಬಾಕಿ ಇರುವಂತೆ ಬೆಂಗಳೂರಿಗೆ ಮರಳು ಹಂತದಲ್ಲಿದ್ದಾಗ ತಮ್ಮ ಪರವಾಗಿ ಚುನಾವಣೆಯಲ್ಲಿ ಶ್ರಮಿಸಿದ ಜೆಡಿಎಸ್ ಪಕ್ಷದಲ್ಲಿದ್ದ ವಿಜುಗೌಡ ಪಾಟೀಲ ಅವರ ಮನೆಯಲ್ಲಿ ಉಪಹಾರಕ್ಕೆ ಸೇವಿಸಿ, ಅವರ ಕುಟುಂಬ ಸದಸ್ರ ಕುಶಲೋಪರಿ ವಿಚಾರಿ, ಕೃತಜ್ಞತೆ ಸಲ್ಲಿಸಿದ್ದರು.

ಈ ಹಂತದಲ್ಲಿ `ಉದಯವಾಣಿ’ ಜತೆ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದ ಅವರು, ಬಿಜಾಪುರ (ಆಗಿನ್ನು ವಿಜಯಪುರ ಮರು ನಾಮಕರಣ ಆಗಿರಲಿಲ್ಲ) ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಸೋಲಾದರೆ ಅದು ನನ್ನ ಸೋಲಲ್ಲ, ವಿಜಾಪುರದ ದೌರ್ಭಾಗ್ಯ ಎಂದು ಭಾವಿಸುತ್ತೇನೆ. ನನ್ನ ಸೇವೆ ಬೇಡ ಎಂದು ಇಲ್ಲಿನ ಜನ ತಿರಸ್ಕರಿಸುವುದಿಲ್ಲ ಎಂಬ ಆಶಾಭಾವನೆಯಿಂದ ತವರಿಗೆ ಮರಳುತ್ತಿದ್ದೇನೆ ಎಂದರು.

Advertisement

ಬಿಜಾಪುರದ ಜನತೆ ನನ್ನನ್ನು ಸೋಲಿಸಿದರೆ ಮತ್ತೆ ಎಂದಿಗೂ ಇಲ್ಲಿಗೆ ಮರಳಿ ಬರಲಾರೆ ಎಂದು ಖಚಿತ ಧ್ವನಿಯಲ್ಲಿ ಹೇಳಿದ್ದರು. ಅಭಿವೃದ್ಧಿ ಹೀನ ನೆಲದಲ್ಲಿ ಅಭಿವೃದ್ಧಿಪರ ಚಿಂತನೆಯ ಕನಸುಗಳೊಂದಿಗೆ ಇಲ್ಲಿಗೆ ಬಂದಿರುವ ನನ್ನನ್ನು ಜನರೇ ಬೇಡ ಎಂದು ತಿರಸ್ಕರಿಸಿದರೆ ಮತ್ತೆ ಇಲ್ಲಿಗೆ ಬಂದು ಸ್ಪರ್ಧಿಸಲಾರೆ ಎಂದು ಹೇಳಿದ್ದರು.

ಒಂದೊಮ್ಮೆ ಬಿಜಾಪುರದಲ್ಲಿ ಸೋಲಾದರೆ ಮತ್ತೆಂದೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಹಸ ಮಾಡುವುದಿಲ್ಲ. ವಿಜಯಪುರ ಮಾತ್ರವಲ್ಲ ಪರಿಶಿಷ್ಟ ಜಾತಿಗೆ ಮೀಸಲಿರುವ ಚಾಮರಾಜನಗರ, ಚಿತ್ರದುರ್ಗ, ಕಲಬುರ್ಗಿ ಎಲ್ಲಿಂದಲೂ ಭವಿಷ್ಯದಲ್ಲಿ ಇನ್ನೆಂದೂ ಲೋಕಸಭೆ ಚುನಾವಣೆಗೆ ಸ್ಪರ್ಧಿದಿರಲು ನಿರ್ಧರಿಸಿದ್ದೇನೆ ಎಂದಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸಮುದಾಯದ ಆಸ್ತಿಯಂತಿರುವ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧವಂತೂ ನಾನು ಸ್ಪರ್ಧಿಸುವುದನ್ನು ಕನಸಿನಲ್ಲೂ ಯೋಚಿಸುವುದಿಲ್ಲ ಎನ್ನುವ ಮೂಲಕ ಖರ್ಗೆ ಅವರ ಬಗ್ಗೆ ತಮಗಿರುವ ಗೌರವವನ್ನು ಹೊರಹಾಕಿದ್ದರು.

ವಿಜಾಪುರ ಚುನಾವಣೆಯ ಬಳಿಕ ಲೋಕಸಭೆ ಚುನಾವಣೆಗೆ ನನಗೆ ಸೂಕ್ತವಲ್ಲ ಎಂಬುದು ಖಚಿತವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರುವ ವಿಧಾನಸಭೆ ಕ್ಷೇತ್ರಗಳಿದ್ದು, ಅಲ್ಲಿಂದ ಸ್ಪರ್ಧಿಸುತ್ತೇನೆ ಎಂದಿದ್ದರು.

ಜಿ.ಎಸ್.ಕಮತರ

Advertisement

Udayavani is now on Telegram. Click here to join our channel and stay updated with the latest news.

Next