Advertisement

K. Shivaram; ಕೊಪ್ಪಳದ ಮೊದಲ ಜಿಲ್ಲಾಧಿಕಾರಿಯಾಗಿ ಜನರ ಸಮಸ್ಯೆಗೆ ಮಿಡಿದಿದ್ದರು

09:34 PM Feb 29, 2024 | Team Udayavani |

ಕೊಪ್ಪಳ: ಅವಿಭಜಿತ ರಾಯಚೂರು ಜಿಲ್ಲೆಯಿಂದ ಕೊಪ್ಪಳವು ಬೇರ್ಪಟ್ಟು ಹೊಸ ಜಿಲ್ಲೆಯಾದ ಬಳಿಕ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದ ಕೆ.ಶಿವರಾಮ ಅವರು ಜಿಲ್ಲೆಯ ಜನರ ಮೆಚ್ಚುಗೆ ಪಡೆದಿದ್ದರಲ್ಲದೇ, ಜನರ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸಿ ತತ್ ಕ್ಷಣವೇ ಪರಿಹಾರಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಅವರ ಅಗಲಿಕೆಯು ಜಿಲ್ಲೆಯ ಜನರಲ್ಲಿ ಶೋಕ ತರಿಸಿದೆ.

Advertisement

ಕೊಪ್ಪಳ ಜಿಲ್ಲೆಯು 1997 ರ ಪೂರ್ವದಲ್ಲಿ ರಾಯಚೂರು ಜಿಲ್ಲೆಯೊಳಗಿತ್ತು. ಅಂದಿನ ಸಿಎಂ ಜೆ.ಹೆಚ್. ಪಟೇಲ್ ಅವರು ಕೊಪ್ಪಳವನ್ನು ಹೊಸ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ ಬಳಿಕ ಐಎಎಸ್ ಅಧಿಕಾರಿ ಕೆ.ಶಿವರಾಮ ಅವರನ್ನು ಮೊದಲ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿದ್ದರು. 1997 ಆ.24 ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಕೆ.ಶಿವರಾಮ ಅವರು ಒಂದು ವರ್ಷ ಜಿಲ್ಲೆ ಸಂಚಾರ ಮಾಡಿ ಜನರ ಮನಸ್ಸು ಗೆದ್ದಿದ್ದರು.

ಪ್ರತಿಯೊಂದು ಸಮಸ್ಯೆಗಳ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಿದ್ದ ಅವರು ಜನರು ಏನೇ ಸಮಸ್ಯೆ ಹೇಳಿಕೊಂಡರೂ ತತ್ ಕ್ಷಣವೇ ಅಲ್ಲಿ ಸಮಸ್ಯೆ ಇತ್ಯರ್ಥ ಮಾಡುವ ಕೆಲಸ ಮಾಡುತ್ತಿದ್ದರು. ವಾರ್ಡಿನ ಯಾವುದೇ ಸಮಸ್ಯೆ ಗಮನಕ್ಕೆ ಬಂದರೂ ಅದಕ್ಕೆ ಮುಕ್ತಿ ದೊರೆಯುವ ವರೆಗೂ ಅಲ್ಲಿಂದ ಅವರು ತೆರಳುತ್ತಿರಲಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಇದು ಅಲ್ಲದೇ, ಇವರು ಸಿನಿಮಾ ರಂಗದಲ್ಲಿಯೂ ಆಸಕ್ತಿಯು ಜನರಲ್ಲಿ ಗಮನ ಸೆಳೆದಿತ್ತು. ಜಿಲ್ಲೆಯಲ್ಲಿ ಜೂನ್ 1998ಕ್ಕೆ ವರ್ಗಾವಣೆಯಾದ ಬಳಿಕ ಇವರ ಸ್ಥಾನಕ್ಕೆ ಡಿ.ಎಸ್.ಅಶ್ವಥ್ ಅವರು ಡಿಸಿಯಾಗಿ
ಆಗಮಿಸಿದ್ದರು.

ಒಟ್ಟಿನಲ್ಲಿ ಕೊಪ್ಪಳ ಉದಯವಾದ ಬಳಿಕ ಮೊದಲ ಜಿಲ್ಲಾಧಿಕಾರಿಯಾಗಿ ಕೆ.ಶಿವರಾಮ ಆಗಮಿಸಿದ್ದು ಜಿಲ್ಲೆಯ ಹೆಗ್ಗಳಿಕೆಯಾದರೆ, ಇಲ್ಲಿ ಉತ್ತಮ ಆಡಳಿತ ನಡೆಸಿ ಜನರ ಮನಸ್ಸು ಗೆದ್ದಿದ್ದು ಮತ್ತೊಂದು ಹೆಗ್ಗಳಿಕೆ. ಇನ್ನೂ ಕನ್ನಡದಲ್ಲಿ ಐಎಎಸ್ ಉತ್ತೀರ್ಣರಾಗಿದ್ದ ಮೊದಲ ಅಧಿಕಾರಿ ಎನ್ನುವ ಹೆಗ್ಗಳಿಕೆಯು ಇಲ್ಲಿ ಜನರನ್ನು ಮತ್ತಷ್ಟು ಹೆಮ್ಮೆಪಡುವಂತೆ ಮಾಡಿತ್ತು. ಅವರ ಅಗಲಿಕೆಯು ಜಿಲ್ಲೆಯ ಜನರಲ್ಲಿ ಶೋಕ ತರಿಸಿದೆ.

ಜಿಲ್ಲಾಡಳಿತದಿಂದ ಸಂತಾಪ

Advertisement

ಕೆ.ಶಿವರಾಮ್ ಅವರ ನಿಧನಕ್ಕೆ ಕೊಪ್ಪಳ ಜಿಲ್ಲಾಡಳಿತದ ಪರವಾಗಿ ಡಿಸಿ ನಲಿನ್ ಅತುಲ್ ಅವರು ಗೌರವ ಪೂರ್ವಕವಾಗಿ ಸಂತಾಪ ಸೂಚಿಸಿದ್ದಾರೆ. ಕೆ.ಶಿವರಾಮ ಅವರು ಈ ನಾಡು ಕಂಡ ನೆಚ್ಚಿನ ಹಿರಿಯ ಐಎಎಸ್ ಅಧಿಕಾರಿಯಾಗಿದ್ದರು.ಕೆ.ಶಿವರಾಮ ಅವರು ದಕ್ಷ ಆಡಳಿತಗಾರಾಗಿದ್ದರು. ಆಡಳಿತ ಮತ್ತು ಸೇವೆಗೆ ಮತ್ತೊಂದು ಹೆಸರು ಕೆ.ಶಿವರಾಮ ಎಂದು ಜನರು ಮಾತನಾಡುವ ಹಾಗೆ ಕಾರ್ಯ ನಿರ್ವಹಿಸಿ ನಾಡಿನಲ್ಲಿ ಉತ್ತಮ ಐಎಎಸ್ ಅಧಿಕಾರಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಜೀವನಪ್ರೀತಿ ಹಾಗೂ ವಿಶೇಷ ಮಾನವೀಯ ಗುಣಗಳನ್ನು ಹೊಂದಿದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು. ನೌಕರ ವರ್ಗದ ಬಗ್ಗೆ ಅಪಾರ ಕಾಳಜಿ ಹೊಂದಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಿರಿಯ ಐಎಎಸ್ ಅಧಿಕಾರಿ ಕೆ.ಶಿವರಾಮ ಅವರ ನಿಧನದ ಸುದ್ದಿ ಕೇಳಿ ಕೊಪ್ಪಳ ಜಿಲ್ಲೆಯ ಜನರು ದುಃಖ ವ್ಯಕ್ತಪಡಿಸಿದ್ದಾರೆ. ಕೆ.ಶಿವರಾಮ ಅವರು ಡಿಸಿಯಾಗಿದ್ದ ವೇಳೆ ಸೇವೆಯಲ್ಲಿದ್ದ ಅಧಿಕಾರಿ ವರ್ಗ ಸಹ ದುಃಖಿತರಾಗಿದ್ದಾರೆ. ಕೊಪ್ಪಳ ಜಿಲ್ಲಾಡಳಿತವು ಗೌರವಪೂರ್ವಕವಾಗಿ ಸಂತಾಪ ತಿಳಿಸುತ್ತದೆ ಎಂದು ಡಿಸಿ ನಲಿನ್ ಅತುಲ್ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಸಂತಾಪ ಸಭೆ
ಚಲನಚಿತ್ರ ನಟ ಹಾಗೂ ಕೊಪ್ಪಳಕ್ಕೆ ಮೊದಲ ಜಿಲ್ಲಾಧಿಕಾರಿಯಾಗಿ ಆಗಮಿಸಿ ಆಡಳಿತ ನಡೆಸಿದ್ದ ಕೆ.ಶಿವರಾಮ ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರು ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ನಡೆದ ಸಂತಾಪ ಸಭೆಯಲ್ಲಿ ಮಾತನಾಡಿ, ಕೆ.ಶಿವರಾಮ ಅವರು ಕೊಪ್ಪಳದ ಜನರ ಜತೆ ಅವಿನಾವ ಸಂಬಂಧ ಹೊಂದಿದ್ದರು ಎಂದರಲ್ಲದೇ ಅವರೊಂದಿಗೆ ಸಿನಿಮಾ ಮಾಡಿದ ನೆನಪು ಸ್ಮರಿಸಿಕೊಂಡರು.

ದಲಿತ ಮುಖಂಡ ಡಾ.ಬಿ. ಜ್ಞಾನಸುಂದರ ಮಾತನಾಡಿ, ದೇಶದಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ಐಎಎಸ್ ಪಾಸಾದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಿವರಾಮ ಅವರ ಮತ್ತು ನಮ್ಮ ನಡುವೆ ಒಳ್ಳೆಯ ಗೆಳೆತನವಿತ್ತು. ಆಗ ಅವರು ಆಡಳಿತದಲ್ಲಿ ದಲಿತರಗಾಗಿ ಹಲವಾರು ಒಳ್ಳೆಯ ಕೆಲಸಗಳನ್ನು ಮಾಡುವ ಜೊತೆಗೆ ಇಡೀ ಜಿಲ್ಲೆಗೆ ಹೆಸರುವಾಸಿಯಾಗಿದ್ದರು.

ಹಿರಿಯ ಮುಖಂಡ ರಾಮಣ್ಣ ಕಂದಾರಿ ಮಾತನಾಡಿ, ಶಿವರಾಮ ಅವರು ಚಲನಚಿತ್ರದ ಜೊತೆಗೆ ಆಡಳಿತದಲ್ಲಿ ಚುರುಕಾಗಿದ್ದರು. ಅವರ ಒಂದು ಆಡಳಿತ ಅವಧಿಯಲ್ಲಿ ರಾಜ್ಯೋತ್ಸವ ನಿಮಿತ್ಯ ನವೆಂಬರ್ ತಿಂಗಳ ಪೂರ್ತಿ ಕೊಪ್ಪಳದ ತಾಲೂಕ ಕ್ರೀಡಾಂಗಣದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಡುವ ಮೂಲಕ ಕನ್ನಡದ ಹಿರಿಮೆಯನ್ನು ಹೆಚ್ಚಿಸಿದರು. ಜೊತೆಗೆ ಕೊಪ್ಪಳ ಜಿಲ್ಲೆಯನ್ನು ಇಡೀ ಕರ್ನಾಟಕಕ್ಕೆ ಹೆಸರುವಾಸಿಯನ್ನಾಗಿ ಮಾಡಿದರು ಎಂದು ಸ್ಮರಿಸಿದರು.

ಚಿತ್ರ ನಿರ್ದೇಶಕ ಬಸವರಾಜ ಕೊಪ್ಪಳ ರವರು ಶಿವರಾಮ ಅವರ ಆಡಳಿತ ಮತ್ತು ಚಲನಚಿತ್ರ ಕುರಿತು ನುಡಿ ನಮನ ಮಾಡಿದರು. ಪಂಚಾಯತ್ ರಾಜ ನೌಕರರ ಸಂಘದ ನಾಗರಾಜ ಹಲಗೇರಿ ಅವರು ಶಿವರಾಮ ಕುರಿತು ಭಾವುಕರಾಗಿ ಮಾತನಾಡಿ, ಸಂತಾಪ ಸಲ್ಲಿಸಿದರು. ಕಲಾವಿದ ವಿರೇಶ ಬಡಗೇರ, ಕಾಶಪ್ಪ ಅಳ್ಳಳ್ಳಿ, ಶಿವಣ್ಣ, ರಮೇಶ ಸೇರಿ ಇತರರು ಸಂತಾಪ ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next