ಆಗಿನ ಚುನಾವಣೆಗೂ ಈಗಿನ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಆಗಿನ ಕಾಲದಲ್ಲಿ ಮತಕ್ಕೆ ಬೆಲೆ ಇತ್ತು. ಈಗಿನ ಕಾಲದಲ್ಲಿ ರೊಕ್ಕಕ್ಕೆ ಬೆಲೆ ಜಾಸ್ತಿ. 1989ರಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಸ್ಪರ್ಧೆಯಲ್ಲಿ ಸೋಲು ಕಂಡಿದ್ದೆ. ಅನಂತರ 1994ರ ಚುನಾವಣೆಯಲ್ಲಿ ಜನತಾದಳದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೆ. ಅನಂತರದ 1999, 2004, 2008, 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದೇನೆ. ನನ್ನ ಹಣೆಬರಹವೇ ಇಷ್ಟು. ಚುನಾವಣೆಗೆ ಸ್ಪ ರ್ಧಿಸುವ ಆಸೆ ಬಿಟ್ಟಿದ್ದೇನೆ.
1987 ಜಿಲ್ಲಾ ಪರಿಷತ್ ಚುನಾವಣೆಯಿಂದ ಮತಗಟ್ಟೆಗೆ ರೊಕ್ಕ ಕೊಡುವುದು ಸಣ್ಣಗೆ ಶುರು ವಾಯಿತು. 1989ರಲ್ಲಿ ಮೊದಲ ಬಾರಿ ಸ್ಪ ರ್ಧಿಸಿದ ಚುನಾವಣೆಯಲ್ಲಿ ಮತಗಟ್ಟೆಗೆ 5 ಸಾವಿರ ರೂ., ಏಜೆಂಟರ್ ಖರ್ಚಿಗೆ 100 ರೂ. ಕೊಡುತ್ತಿದ್ದೆವು. ನಮ್ಮ ಕಾರ್ಯಕರ್ತರು ನಾವ್ ಕೊಟ್ಟ ರೊಕ್ಕಾ ಇಸ್ಕೋಂತಿರಲಿಲ್ಲ. ಆದ್ರೂ 1994ರಲ್ಲೂ ಮತಗಟ್ಟೆಗೆ ಇಷ್ಟು ಅಂತಾ, ಕಾರ್ಯಕರ್ತರ ಓಡಾಟಕ್ಕೆ, ಚುನಾವಣೆ ಖರ್ಚಿಗೆ ಒಂದಿಷ್ಟು ರೊಕ್ಕ ಕೊಟ್ಟಿàವಿ. 1999ರಲ್ಲಿ ಬಹಳ ಚೇಂಜ್ ಆಗಿ ಓವರ್ ಆಗಿ ರೊಕ್ಕ ತರ್ರೀ ಅನ್ನೋವಂಗ ಆಯ್ತು. ಆಗ ಮನೀಗಿ ಇಷ್ಟು ಹಂಚಿದೇವು. ನಾವು ನೂರಗಂಟಲೇ ಹಂಚೋರು ಬೇರೆಯವ್ರು ಸಾವಿರ ಗಂಟಲೇ ಹಂಚೋರು. ಹೀಗಾಗಿ ರೊಕ್ಕದ ಹೊಡತಕ್ಕೆ ಸ್ವಲ್ಪದರಲ್ಲೇ ಸೋಲಕೋಂತ ಬಂದೀವಿ. ಇದು ನಮ್ಮ ಕಾಲ ಅಲ್ಲ ಅಂತ ಸರಿದುಕೊಂಡಿದ್ದೇವೆ.
ಆಗಿನ ತಣ್ತೀ-ಸಿದ್ಧಾಂತಕ್ಕೆ ಬೆಲೆ ಇತ್ತು. ಈಗಿನ ಚುನಾವಣೆಗಳಲ್ಲಿ ಇದ್ಯಾವುದು ಇಲ್ಲ. ಮೊದಲ ಎಲೆಕ್ಷನ್‌ನಲ್ಲಿ ಹ್ಯಾಂಡಬಿಲ್ ಏನೂ ಇರಲಿಲ್ಲ. ಗೋಡೆ ಮೇಲೆ ಬರೆಯಿಸಿದ್ದೆವು, ಹೆಚ್ಚಾಗಿ ಲೌಡ್ ಸ್ಪೀಕರ್ ಬಳಸುತ್ತಿದ್ದೆವು. ಅನಂತರ ಹ್ಯಾಂಡಬಿಲ್, ವಾಲ್‌ಪೋಸ್ಟರ್ ಚಾಲೂ ಆತು. ಆಮೇಲೆ ಮೈಕ್ ಹಚ್ಕೊಂಡು ಓಡಾಡೋದು ಶುರುವಾಯಿತು. ಅನಂತರ ಮನೆ ಮನೆಗೆ ಪಾದಯತ್ರೆ ಏನೇನೋ ಮಾಡಿದೆವು. ಎಲ್ಲ ಅನುಭವವಾಗಿ ಸರಿದುಕೊಂಡಿದ್ದೇನೆ. ರಾಜಕೀಯ ಈಗ ನಮಗೆ ನಿಲುಕದ ನಕ್ಷತ್ರ.
ಆಗಿನ ಮತ ಮೌಲ್ಯಕ್ಕೂ ಈಗಿನ ಮತ ಮೌಲ್ಯಕ್ಕೂ ವ್ಯತ್ಯಾಸವಾಗಿದೆ. ಮತ ಅಪಮೌಲ್ಯದ ದುಷ್ಪರಿಣಾಮಗಳಿಂದ ಇಲ್ಲೆ ಅಷ್ಟೇ ಅಲ್ಲ ಎಲ್ಲೆಡೆ ಸುಧಾರಿಸಬೇಕಿದೆ. ಯೋಗ್ಯರಿಗೆ ಮತ ನೀಡುವುದು ಕಡಿಮೆಯಾಗಿದೆ. ದುಡ್ಡ ತಗೊಂಡು ವ್ಯಾಲ್ಯುವೇಶನ್ ಮಾಡ್ತಾರ. ಹೇಳಬೇಕೋ ಹೇಳ ಬಾರದೋ ಗೊತ್ತಿಲ್ಲ ದುಡ್ಡು ಇಬ್ಬರು ಕಡೆಯಿಂದಲೂ ತಗೋಂತಾರ ಆಮೇಲೆ ಯಾರು ಹೆಚ್ಚು ಕೊಟ್ಟಾರ ಅವರ ಜಾತಿ, ನಡವಳಿಕೆ ಇವೆಲ್ಲವೂ ಕೌಂಟ್ ಆಗ್ತಾವು. ಚುನಾವಣೆ ಅಲ್ಲಿಗೆ ಬಂದು ನಿಂತಿದೆ. ಯುವ ಮತದಾರರಿಂದ ಈಗಿನ ಪರಿಸ್ಥಿತಿ ಸುಧಾರಣೆಯಾಗಲಿ.
–
ಕೆ. ಶರಣಪ್ಪ, ಮಾಜಿ ಶಾಸಕ, ಕುಷ್ಟಗಿ