ಕುಂದಾಪುರ: ಅಂಪಾರು ಗ್ರಾಮದ ನುಕ್ಯಾಡಿಯ ಉದ್ಭವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ರವಿವಾರ ಬೆಳಗ್ಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ, ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಸಚಿವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮೂಡಗಣಪತಿ ಸೇವೆ ಹಾಗೂ ಗಣಹೋಮವನ್ನು ನೆರವೇರಿಸಲಾಯಿತು.
ಈ ಸಂದರ್ದಭದಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಶಿವಮೊಗ್ಗದ ರವೀಂದ್ರ ನಗರದ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಅ.ಪ. ರಾಮ ಭಟ್, ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮೋಹನ್ ವೈದ್ಯ, ಅರ್ಚಕರಾದ ರಾಜೇಂದ್ರ ಐತಾಳ್, ಶ್ರೀನಿವಾಸ ಅಡಿಗ, ಪ್ರಮುಖರಾದ ಪ್ರಭಾಕರ ಕೊಂಡಳ್ಳಿ, ಊರವರು ಉಪಸ್ಥಿತರಿದ್ದರು.
ಹಸಿರು ಕಾನನದ ಮಧ್ಯೆ ಆಕರ್ಷಣೀಯ ಕೇಂದ್ರವಾಗಿ ಎತ್ತರದ ಸ್ಥಳದಲ್ಲಿ ನೆಲೆ ನಿಂತಿರುವ ಉದ್ಭವ ಶ್ರೀ ಸಿದ್ಧಿ ವಿನಾಯಕ ದೇವರು ನಂಬಿದ ಭಕ್ತರಿಗೆ ಸಂತಾನ ಭಾಗ್ಯ ಕರುಣಿಸುವ ದೇವರಾಗಿ, ಗುಡ್ಡೆ ಗಣಪತಿಯೆಂದೇ ಪ್ರಖ್ಯಾತಿ ಪಡೆದಿದ್ದಾನೆ. ಸಂತಾನ ಪ್ರಾಪ್ತಿಯಾದರೆ ಗಂಟೆ ಒಪ್ಪಿಸುವ ಹರಕೆಯೂ ಇದೆ.