ಚಾಮರಾಜನಗರ: ರಾಜ್ಯದಲ್ಲಿ ತಲೆದೋರಿರುವ ಹಿಜಾಬ್-ಕೇಸರಿ ಶಾಲು ವಿವಾದದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ನಗರಕ್ಕೆ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್ ವಿಷಯವನ್ನು ಕಾಂಗ್ರೆಸ್ ಪಕ್ಷ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ 96 ಮುಸ್ಲಿಂ ವಿದ್ಯಾರ್ಥಿಗಳ ಪೈಕಿ 90 ಮಂದಿ ಸಮವಸ್ತ್ರ ಧರಿಸಿ ಕಾಲೇಜಿಗೆ ಹಾಜರಾಗುತ್ತಿದ್ದರು. ಆರು ಮಂದಿ ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಧರಿಸುತ್ತಿದ್ದರು. ಅವರಿಗೆ ತಿಳಿ ಹೇಳಬೇಕಾದ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮುಸ್ಲಿಂ ಮಹಿಳೆಯರು ಸಾರ್ವಜನಿಕವಾಗಿ ಎಲ್ಲೇ ಆದರೂ ಹಿಜಾಬ್ ಧರಿಸಲಿ, ಶಾಲೆಗಳಲ್ಲಿ ಸಮವಸ್ತ್ರ ಪಾಲನೆ ಮಾಡಲಿ ಎಂಬುದು ನಮ್ಮ ನಿಲುವು ಎಂದು ಅವರು ಹೇಳಿದರು.
ಹಿಂದೆ ಉಡುಪಿಯಲ್ಲಿ ಗೋ ರಕ್ಷಣೆ ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೇ ರೀತಿ ವರ್ತಿಸಿತ್ತು. ಗೋಹತ್ಯೆ ಮಾಡಿದವರನ್ನು ಶಿಕ್ಷಿಸದೇ ರಕ್ಷಣೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿತ್ತು. ಆಗ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತು, ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು. ಈಗ ಉಡುಪಿಯಲ್ಲೇ ಉಂಟಾಗಿರುವ ಈ ವಿವಾದದಲ್ಲೂ ಹಸ್ತಕ್ಷೇಪ ಮಾಡಿರುವ ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಸೋಲನುಭವಿಸಲಿದೆ ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ :ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ : ತಾಲೂಕು ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ