ಹುಬ್ಬಳ್ಳಿ: ಉಪ ಚುನಾವಣೆ ಬಳಿಕ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿಕೆಯನ್ನು ಭ್ರಮೆ ಅನ್ನಬೇಕೋ, ಕನಸು ಅನ್ನಬೇಕೋ ತಿಳಿಯುತ್ತಿಲ್ಲ. ಎಂಟು ಸ್ಥಾನ ಗೆಲ್ಲದಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ. ನೀವೂ ಎಂಟು ಸ್ಥಾನ ಗೆಲ್ಲದಿದ್ದರೆ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಎಂದು ಸಿದ್ದರಾಮಯ್ಯಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಬಹಿರಂಗ ಸವಾಲು ಹಾಕಿದರು.
ಸಿದ್ದರಾಮಯ್ಯ ಒಬ್ಬ ಹುಚ್ಚ, ಹುಚ್ಚಿನಿಂದ ಹೊರ ಬಂದಿಲ್ಲ. ಮುಖ್ಯಮಂತ್ರಿ ಸ್ಥಾನದ ಹುಚ್ಚಿನಿಂದ, ಭ್ರಮೆಯಿಂದ ಹೊರ ಬರಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಜೊತೆ ಯಾವುದೇ ಕಾಂಗ್ರೆಸ್ ನಾಯಕರಿಲ್ಲ. ಅವರೊಬ್ಬ ಸ್ವಾರ್ಥಿ, ರಾಜ್ಯದಲ್ಲಿ ಯಾರನ್ನು ಬೆಳೆಯಲು ಬಿಡುತ್ತಿಲ್ಲ. ಯಾವ ಕುರುಬ, ಹಿಂದುಳಿದ ನಾಯಕರನ್ನು ಬೆಳೆಸಿದ್ದಾರೆ. ಎಚ್. ವಿಶ್ವನಾಥ ಮುಗಿಸಲು ಹೆಜ್ಜೆ ಹೆಜ್ಜೆಗೂ ಪ್ರಯತ್ನ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ಎರಡು ಪಕ್ಷಗಳ ಸ್ಥಿತಿ ಏನಾಗಿದೆ ಗೊತ್ತಿಲ್ವಾ? ರಾಜ್ಯದ ಜನರು ಜೆಡಿಎಸ್-ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಕುಮಾರಸ್ವಾಮಿಗೆ ಸಿಎಂ ಆಗಿದ್ದಾಗ ಮಗನನ್ನೆ ಗೆಲ್ಲಿಸಲು ಆಗಲಿಲ್ಲ. ಇನ್ನು ಬಿಜೆಪಿಯನ್ನು ಸೋಲಿಸುತ್ತಾರಾ? ಎಂದರು.
ಮುಂದಿನ ಮೂರುವರೆ ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ. ಕೆ.ಎಚ್. ಮುನಿಯಪ್ಪ ಸೋಲಿನಲ್ಲಿ ರಮೇಶ ಕುಮಾರ ಪಾತ್ರವಿಲ್ಲವೆಂದು ಎದೆ ಮುಟ್ಟಿಕೊಂಡು ಹೇಳಲಿ ಎಂದರು.