Advertisement

ಉಳ್ಳವರು ಮೀಸಲಾತಿ ಪಡೆದುಕೊಳ್ಳಬಾರದು..: ಕೆ.ಎಸ್.ಈಶ್ವರಪ್ಪ

01:17 PM Sep 16, 2022 | Team Udayavani |

ಮೈಸೂರು: ಕೇಂದ್ರ ಸರ್ಕಾರ ಬೆಟ್ಟ ಕುರುಬ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿರುವುದು ಸಂತಸ ತಂದಿದೆ. ಇದೇ ರೀತಿ ಹಿಂದುಳಿದಿರುವ ಸಮುದಾಯಗಳನ್ನು ಗುರುತಿಸಿ ಮೀಸಲಾತಿ ಕಲ್ಪಿಸಬೇಕು. ಉಳ್ಳವರು ಮೀಸಲಾತಿ ಪಡೆಯುತ್ತಿದ್ದರೆ ಅದನ್ನು ಪರಿಷ್ಕರಿಸಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

Advertisement

ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಟ್ಟ ಕುರುಬ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿರುವ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಬೆಟ್ಟಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆದಿತ್ತು. ಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀಗಳ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಕೂಡ ನಡೆಸಲಾಗಿತ್ತು. ಇದೀಗ ಹೋರಾಟಕ್ಕೆ ಜಯ ಸಂದಿದೆ ಎಂದರು.

ಆರ್ಥಿಕವಾಗಿ ಸಬಲರಾಗಿರುವವರಿಗೆ ಮೀಸಲಾತಿ ನೀಡಬಾರದು. ದಲಿತರಿಗೆ ಕಲ್ಪಿಸಿರುವ ಮೀಸಲಾತಿಯನ್ನು ಉಳ್ಳವರೇ ಪಡೆದುಕೊಳ್ಳುತ್ತಿದ್ದಾರೆ. ದಲಿತ ಸಮುದಾಯದಲ್ಲಿ ತುಳಿತಕ್ಕೊಳಗಾದವರಿಗೆ ಮೀಸಲಾತಿ ಸಿಗಬೇಕು. ಸ್ವಾಭಿಮಾನದ ಬದುಕು ಸಿಗುವವರೆಗೂ ದಲಿತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು. ಮಲ್ಲಿಕಾರ್ಜುನ ಖರ್ಗೆ ನಂತರ ಅವರ ಮಗ ಪ್ರಿಯಾಂಕ ಖರ್ಗೆ ಮೀಸಲಾತಿಯ ಪ್ರಯೋಜನ ಪಡೆದು ಕೊಳ್ಳುತ್ತಿದ್ದಾರೆ. ಹಾಗಾಗಿ ಮೀಸಲಾತಿ ನೀಡುವಾಗ ಕಡುಬಡವರಿಗೆ ಆದ್ಯತೆ ನೀಡಬೇಕು ಎಂದರು.

ಇಡಿ ನೋಟಿಸ್ ನೀಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಭಾರತ್ ಜೋಡೊ ಯಾತ್ರೆಯ ಸಿದ್ದತೆಯಲ್ಲಿರುವಾಗ, ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗ ಇಡಿ ನೋಟಿಸ್ ನೀಡಿರುವುದಕ್ಕೆ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಬೇಲ್ ಮೇಲೆ ಹೊರಗಿದ್ದಾರೆ. ನಿರಪರಾಧಿ ಎಂದು ಸಾಬೀತಾಗುವವರೆಗೂ ಈ ರೀತಿಯ ಹೇಳಿಕೆ ನೀಡಬಾರದು ಎಂದರು.

ಇಂಧನ ಇಲಾಖೆಯ ಅವ್ಯವಹಾರ ಕುರಿತು ಹಳೆಯ ಕಡತಗಳನ್ನು ಪರಿಶೀಲನೆ ಮಾಡುತ್ತಿರುವುದಕ್ಕೆ ಡಿಕೆಶಿಯಿಂದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿ, ಅವು ಸಾರ್ವಜನಿಕ ದಾಖಲೆಗಳಾಗಿವೆ. ಯಾರು ಬೇಕಾದರೂ ದಾಖಲೆಗಳನ್ನು ಪಡೆಯಬಹುದು. ಆರ್ ಟಿಐ ಮೂಲಕ ಅರ್ಜಿ ಸಲ್ಲಿಸಿ ಯಾರು ಬೇಕಾದರೂ ದಾಖಲೆಗಳನ್ನು ಪಡೆದುಕೊಳ್ಳಬಹುದು. ಯಾರ‌ ಮೇಲೂ ಒತ್ತಡ ಹಾಕಿ ಕಡತಗಳನ್ನು ಪಡೆಯುವುದಿಲ್ಲ. ನಾನು ಇಂಧನ ಸಚಿವನಾಗಿದ್ದಾಗಲೂ ಇದೇ ರೀತಿ ಕಡತಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ಡಿಕೆಶಿ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದ ತಿರುಗೇಟು ನೀಡಿದರು.

Advertisement

ಮತಾಂತರ ನಿಷೇಧ ಕಾಯ್ಧೆ ಮಸೂದೆ ಮಂಡನೆ ವೇಳೆ ಬಿಲ್ ನ ಪ್ರತಿಯನ್ನು ಅರಿದು ಹಾಕಿದ ಕಾಂಗ್ರೆಸ್ ಕ್ರಮವನ್ನು ಖಂಡಿಸಿದ ಈಶ್ವರಪ್ಪ, ಇದು ಸಂವಿಧಾನಕ್ಕೆ ಮಾಡಿದ ಅಪಮಾನ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ಓಲೈಕೆ ಮಾಡುವ ಸಲುವಾಗಿ ಕಾಂಗ್ರೆಸ್ ಸದಸ್ಯರು ಈ ರೀತಿ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ:ಠೇವಣಿದಾರರ ಹಿತಾಸಕ್ತಿ ಕಾಯಿದೆ ಮಂಡನೆ: ವಿಶೇಷ ನ್ಯಾಯಾಲಯ ಸ್ಥಾಪನೆಗೆ ನಿರ್ಧಾರ

ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ನಡೆಸುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅಖಂಡ ಭಾರತವನ್ನು ಒಡೆದು ಹಾಕಿದ್ದೇ ಕಾಂಗ್ರೆಸ್. ಈಗ ಅದನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಕಾಂಗ್ರೆಸ್ ನವರು ಬಲಿ ಪಡೆದರು. ಈಗ ಭಾರತ್ ಜೋಡೊ ಕಾರ್ಯಕ್ರಮ ಮಾಡುತ್ತಿದ್ದಾರೆ. ನೀವು ನಿಮ್ಮ ಸ್ಲೋಗನ್ ಬದಲಾವಣೆ ಮಾಡಿಕೊಂಡು ಕಾರ್ಯಕ್ರಮ ಮಾಡಿ. ಹಿಂದೆ ಮಾಡಿದ ತಪ್ಪಿಗೆ ಪಶ್ಚಾತ್ತಾಪವಾಗಿ ಈ ಕಾರ್ಯಕ್ರಮ ಎಂದು ಹೇಳಿ. ಅಖಂಡ ಭಾರತ ಒಗ್ಗೂಡಬೇಕು. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಎಲ್ಲವೂ ಒಟ್ಟಾಗಿ ಅಖಂಡ ಭಾರತವಾಗಬೇಕು ಎಂದರು.

ನನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ‌‌ನೀಡಿದೆ. ಪ್ರಕರಣದಿಂದ ಕ್ಲೀನ್ ಚಿಟ್ ಸಿಕ್ಕ ನಂತರ ಮತ್ತೆ ಸಚಿವ ಸ್ಥಾನ ನೀಡುವ ವಿಶ್ವಾಸವಿತ್ತು. ನನಗೆ ಕ್ಲೀನ್ ಚಿಟ್ ಸಿಕ್ಕನಂತರ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಮತ್ತೆ ಸಚಿವ ಸ್ಥಾನ ನೀಡದಿರುವುದರಿಂದ ಸಹಜವಾಗಿಯೇ ಅಸಮಾಧಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next