ವಿಜಯಪುರ: ಉಪ ಚುನಾವಣೆ ಬಳಿಕ ಬಿಎಸ್ ಯಡಿಯೂರಪ್ಪ ಬದಲಿಗೆ ಬಿ.ಎಲ್. ಸಂತೋಷ್ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಪ್ರಶ್ನೆಗೆ ಗರಂ ಆದ ಈಶ್ವರಪ್ಪ, ನಿಮ್ಮಂತವರು ಪ್ರಶ್ನೆ ಕೇಳಿದಾಗ ತಲೆ ಕೆಟ್ಟವರು ಹಾಗೆ ಹೇಳುತ್ತಾರೆ. ಇದರಲ್ಲಿ ಅರ್ಥವೇ ಇಲ್ಲ, ಯಡಿಯೂರಪ್ಪ ಅವರೇ ಮುಂದಿನ ಮೂರುವರೆ ವರ್ಷಗಳವರೆಗೆ ಮುಖ್ಯಮಂತ್ರಿ ಆಗಿರ್ತಾರೆ ಎಂದರು.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಬಹುಮತ ಪಡೆಯುವ ಕಾರಣ ಅನ್ಯ ಪಕ್ಷಗಳ ಶಾಸಕರನ್ನು ಸೆಳೆದು ಆಪರೇಷನ್ ಕಮಲ ಮಾಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರು ತಮ್ಮ ಪಕ್ಷದಲ್ಲಿ ಸಮಸ್ಯೆಗೆ ತಾವಾಗಿಯೇ ಪಕ್ಷ ತೊರೆದರೆ ಅದಕ್ಕೆ ನಾವು ಹೊಣೆಯಲ್ಲ. ನಂತರ ಅವರಾಗಿಯೇ ಬಿಜೆಪಿ ಪಕ್ಷಕ್ಕೆ ಬಂದರೆ ನಾವೇನೂ ಮಾಡಕ್ಕಾಗಲ್ಲ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಇನ್ನೂ ಹಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಮುಳುಗುತ್ತಿರುವ ಹಡಗಿನಲ್ಲಿ ಯಾವ ಶಾಸಕರ ಇರಲು ಇಷ್ಟ ಪಡುತ್ತಾರೆ. ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ಎರಡೂ ಪಕ್ಷದ ಶಾಸಕರು ತಮ್ಮ ಪಕ್ಷ ತೊರೆದರೆ ನಾವೇನು ಮಾಡಬೇಕು ಎಂದರು.
ಹನಿ ಟ್ರ್ಯಾಪ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಈ ಪ್ರಕರಣದಲ್ಲಿ ಯಾವ ಶಾಸಕರ ಹೆಸರೂ ಬಹಿರಂಗವಾಗಿಲ್ಲ. ಹನಿ ಟ್ರ್ಯಾಪ್ ಎಬುದು ಇತ್ತೀಚೆಗೆ ಒಂದು ದಂಧೆಯಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಇದಲ್ಲದೇ ಈ ಪ್ರಕರಣದಲ್ಲಿ ಯಾವುದೇ ಪ್ರಭಾವಿ ವ್ಯಕ್ತಿ,, ಅಧಿಕಾರಿ, ಶಾಮೀಲಾಗಿದ್ದರೂ ಅವರು ಕಾನೂನು ಕೈಗೊಳ್ಳುವ ಕ್ರಮ ಅನುಭವಿಸುತ್ತಾರೆ.
ಹನಿ ಟ್ರ್ಯಾಪ್ ಫೂಟೇಜ್ ಗಳನ್ನ ಡಿಲೀಟ್ ಮಾಡುವ ಕುರಿತು ಒತ್ತಡ ತರಲಾಗುತ್ತಿದೆ ಎಂಬುದು ಅಂತೆ ಕಂತೆ. ಯಾವುದೇ ಒತ್ತಡ ಇಲ್ಲ, ಯಾವ ಒತ್ತಡಕ್ಕೂ ನಾವು ಮಣಿಯಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ ಎಂದರು.